
ಚನ್ನಗಿರಿ ಪಟ್ಟಣದ ಗಾಂಧಿ ವೃತ್ತದಲ್ಲಿ ಬುಧವಾರ ರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್) ಬಣದ ರೈತರು ಪ್ರತಿಭಟನೆ ನಡೆಸಿದರು
ಚನ್ನಗಿರಿ: ರೈತರ ಜಮೀನು, ತೋಟ, ರಸ್ತೆ ಹಾಗೂ ಕೃಷಿಗೆ ಮಣ್ಣನ್ನು ಸಾಗಿಸಲು ಕಂದಾಯ ಇಲಾಖೆ ಅಧಿಕಾರಿಗಳು ಅಡ್ಡಿ ಪಡಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್) ಬಣದ ರೈತರು ಪಟ್ಟಣದಲ್ಲಿ ಬುಧವಾರ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ರೈತರು ಅವರ ಖಾತೆಯಲ್ಲಿ ಇರುವ ಜಾಗಗಳಿಂದ ಮಣ್ಣನ್ನು ಸಾಗಿಸಲು ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಇದರಿಂದ ರೈತರ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುವಂತಾಗಿದೆ. ಮಣ್ಣು ಸಾಗಾಣೆಗೆ ಅನುಮತಿ ನೀಡುವವರೆಗೂ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಐದಾರು ದಿನಗಳಿಂದ ರೈತರು ಮಣ್ಣು ಸಾಗಾಣೆ ಮಾಡುವುದನ್ನು ತಡೆಹಿಡಿಯಲಾಗಿದೆ. ರೈತರ ಖಾತೆ, ಪಹಣಿ ಹೊಂದಿರುವ ಜಮೀನು ಮತ್ತು ಕೆರೆಗಳಿಂದ ತಮ್ಮ ತೋಟಗಳಿಗೆ ಮಣ್ಣು ಸಾಗಾಣೆ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಆದ್ದರಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಿ ಎಂದು ತಹಶೀಲ್ದಾರ್ ಎನ್.ಜೆ. ನಾಗರಾಜ್ ರೈತರಿಗೆ ಮನವಿ ಮಾಡಿದರು.
ತಹಶೀಲ್ದಾರ್ ಭರವಸೆಯ ಮೇರೆಗೆ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಎರಡು ಗಂಟೆಗಳು ಹೆದ್ದಾರಿ ತಡೆ ನಡೆಸಿದ್ದರಿಂದ 1 ಕಿಮೀ ದೂರದವರೆಗೆ ವಾಹನಗಳು ನಿಂತಲ್ಲಿಯೇ ನಿಂತಿದ್ದವು. ಇದರಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್. ರವಿಕುಮಾರ್, ಪರುಶುರಾಮ, ರಾಮಪ್ಪ, ರಾಜಪ್ಪ, ಶಿವರಾಜ್, ರಮೇಶ್, ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ಬಿಜೆಪಿ ಮುಖಂಡರಾದ ಕೆ.ಆರ್. ಮಾಲತೇಶ್, ಎಚ್.ಎಸ್. ನವೀನ್, ಧರ್ಮಪ್ಪ, ವಿನಯ್ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.