
ಚನ್ನಗಿರಿ: ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಚುಚ್ಚುಮದ್ದು ಪಡೆದ ಬಳಿಕ ಮೃತಪಟ್ಟಿದ್ದು, ಇದಕ್ಕೆ ವೈದ್ಯರು ಹಾಗೂ ನರ್ಸ್ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತ ಮಹಿಳೆಯ ಕುಟುಂಬದವರು ಪಟ್ಟಣದ ಸಾರ್ವಜನಿಕ ಆರೋಗ್ಯ ಕೇಂದ್ರದ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು.
ಅನುಷಾ (30) ಮೃತಪಟ್ಟ ಮಹಿಳೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಅವರು, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಶಿವಮೊಗ್ಗದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು. ವೈದ್ಯರ ಮಾರ್ಗದರ್ಶನದಂತೆ ನಾಲ್ಕು ವರ್ಷಗಳಿಂದ ಬೆಂಜೋಥೀನ್ ಪೆನ್ಸಿಲಿನ್ ಚುಚ್ಚುಮದ್ದನ್ನು ಪ್ರತಿ ಮೂರು ವಾರಕ್ಕೊಮ್ಮೆ ಪಡೆದುಕೊಳ್ಳುತ್ತಿದ್ದರು.
ದಾವಣಗೆರೆ ನಗರದ ಪ್ರಸನ್ನಕುಮಾರ್ ಅವರ ಜೊತೆ 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ತಿಪ್ಪಗೊಂಡನಹಳ್ಳಿಯ ತವರುಮನೆಗೆ ಬಂದಿದ್ದ ಅವರು, ಭಾನುವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಹಾಕಿಸಿಕೊಂಡರು. ಇದಾದ 10 ನಿಮಿಷಗಳಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮೃತಪಟ್ಟರು ಎಂದು ತಿಳಿದುಬಂದಿದೆ.
ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಅನುಷಾ ಅವರ ಕುಟುಂಬದವರು ಆಸ್ಪತ್ರೆಯ ಮುಂದೆ ಜಮಾವಣೆಗೊಂಡರು. ಚುಚ್ಚುಮದ್ದನ್ನು ಪ್ರಾಯೋಗಿಕವಾಗಿ ನೀಡದೇ, ನೇರವಾಗಿ ನೀಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು. ವೈದ್ಯರು ಹಾಗೂ ನರ್ಸ್ ನಿರ್ಲಕ್ಷ್ಯದಿಂದಾಗಿ ಈ ಸಾವು ಸಂಭವಿಸಿದ್ದು, ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
‘ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು. ಪರೀಕ್ಷೆಯ ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯುತ್ತದೆ. ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಒತ್ತಾಯಿಸಿದರು.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಇನ್‌ಸ್ಪೆಕ್ಟರ್ ಕೆ.ಎನ್. ರವೀಶ್ ಹೇಳಿದರು.
ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮ ಆಸ್ಪತ್ರೆಯ ಸಿಬ್ಬಂದಿ ಮೇಲೆ ಆರೋಪ ಬಂದಿರುವುದರಿಂದ ಮೆಗ್ಗಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತದೇಹ ಕಳುಹಿಸಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು– ಡಾ.ಎಂ.ಜಿ. ಚಂದ್ರಪ್ಪ, ಆಡಳಿತ ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.