
ಚನ್ನಗಿರಿ: ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದ ರೈತರ ತೋಟದಲ್ಲಿ ಕಾಣಿಸಿಕೊಂಡಿದ್ದ ಕರಡಿಯನ್ನು ಚನ್ನಗಿರಿ ವಲಯ ಅರಣ್ಯ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಮಂಗಳವಾರ ಸೆರೆ ಹಿಡಿದಿದ್ದಾರೆ
ಗ್ರಾಮದ ತುಮ್ಕೋಸ್ ನಿರ್ದೇಶಕರಾದ ಟಿ.ವಿ.ರಾಜು ಪಟೇಲ್ ಅವರ ಸಪೋಟ ತೋಟದಲ್ಲಿ 10ರಿಂದ 12 ವರ್ಷ ವಯಸ್ಸಿನ ಗಂಡು ಕರಡಿ ಒಂದು ವಾರದಿಂದ ಸಂಚರಿಸುತ್ತಿರುವುದು ಕಂಡು ಬಂದಿತ್ತು. ಈ ಬಗ್ಗೆ ಚನ್ನಗಿರಿ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿತ್ತು.
ಗ್ರಾಮಸ್ಥರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಕರಡಿಯನ್ನು ಬೋನಿಗೆ ಬೀಳಿಸಿ, ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ನಂತರ ಹೊನ್ನೇಬಾಗಿ ಪಶು ಆಸ್ಪತ್ರೆಯಲ್ಲಿ ಹಿರಿಯ ಪಶು ವೈದ್ಯಾಧಿಕಾರಿ ದರ್ಶನ್ ಅವರು ತಪಾಸಣೆ ನಡೆಸಿ, ಕರಡಿ ಆರೋಗ್ಯಕರವಾಗಿದೆ ಎಂದು ಮಾಹಿತಿ ನೀಡಿದ ಬಳಿಕ ಭದ್ರಾವತಿಯ ಭದ್ರಾ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಚನ್ನಗಿರಿ ಪ್ರಭಾರ ವಲಯ ಅರಣ್ಯಾಧಿಕಾರಿ ಉಷಾ ತಿಳಿಸಿದರು.
ಉಪ ಅರಣ್ಯಾಧಿಕಾರಿಗಳಾದ ಸುಧಾಕರ್, ಪ್ರವೀಣ್, ಅರಣ್ಯ ರಕ್ಷಕರಾದ ದೀಪಕ್, ಬಸವನಗೌಡ, ಬಸವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.