ADVERTISEMENT

ಚನ್ನಗಿರಿ| ಬಿಸಿಯೂಟ ತಯಾರಕರಿಗೆ ಪಿಂಚಣಿ, ಇಎಸ್ಐ, ಪಿಎಫ್ ಸೌಲಭ್ಯ ಕೊಡಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:56 IST
Last Updated 8 ಡಿಸೆಂಬರ್ 2025, 5:56 IST
ಚನ್ನಗಿರಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಕುಂದು ಕೊರತೆ ಸಭೆಯಲ್ಲಿ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ್ ಮಾತನಾಡಿದರು. ಸುಮಾ, ಅವರೆಗೆರೆ ವಾಸು ಇದ್ದರು.
ಚನ್ನಗಿರಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಕುಂದು ಕೊರತೆ ಸಭೆಯಲ್ಲಿ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ್ ಮಾತನಾಡಿದರು. ಸುಮಾ, ಅವರೆಗೆರೆ ವಾಸು ಇದ್ದರು.   

ಚನ್ನಗಿರಿ: ‘ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಜಾರಿಗೆ ತಂದು 23 ವರ್ಷ ಪೂರೈಸಿದೆ. ಬಿಸಿಯೂಟ ತಯಾರಕರಿಗೆ ಪಿಂಚಣಿ, ಇಎಸ್ಐ ಹಾಗೂ ಪಿಎಫ್ ಸೌಲಭ್ಯವನ್ನು ಸರ್ಕಾರ ಕಲ್ಪಿಸಿಕೊಡಬೇಕು’ ಎಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಯೂನಿಯನ್‌ನ (ಎಚ್.ಕೆ. ರಾಮಚಂದ್ರಪ್ಪ ಬಣ) ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ್ ಒತ್ತಾಯಿಸಿದರು.

ತಾಲ್ಲೂಕು ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಬಿಸಿಯೂಟ ತಯಾರಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಯೂಟ ತಯಾರಕರಿಗೆ ಮೂರು ತಿಂಗಳಿಂದ ವೇತನ ನೀಡಿಲ್ಲ. ಹಾಗಾಗಿ ಸರ್ಕಾರ ಕೊಡುವ ಅಲ್ಪ ವೇತನವು ವಿಳಂಬವಾಗಿರುವುದರಿಂದ ಬಿಸಿಯೂಟ ತಯಾರಕರು ಜೀವನ ನಡೆಸುವುದು ಕಷ್ಟವಾಗಿದೆ. 60 ವರ್ಷ ಪೂರೈಸಿದ ಬಿಸಿಯೂಟ ತಯಾರಕರನ್ನು ಯಾವುದೇ ಸೌಲಭ್ಯ ನೀಡದೇ ವಯೋ ನಿವೃತ್ತಿಗೊಳಿಸುವಂತೆ ಆದೇಶ ಮಾಡಲಾಗಿದೆ. ನಿವೃತ್ತಿ ಹೊಂದಿರುವವರಿಗೆ ಅಲ್ಪ ಇಡುಗಂಟನ್ನು ನೀಡಬೇಕು ಎಂದು ಸರ್ಕಾರದ ಆದೇಶವಿದ್ದರೂ ಇದುವರೆಗೂ ರಾಜ್ಯದಲ್ಲಿ ಕೇವಲ 8ರಿಂದ 10 ಜಿಲ್ಲೆಗಳಲ್ಲಿ ಮಾತ್ರ ಇದನ್ನು ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ನಿವೃತ್ತಿ ಹೊಂದುವವರಿಗೆ ಇಡುಗಂಟನ್ನು ನೀಡಲು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಪ್ರಸ್ತುತ ಬಿಸಿಯೂಟ ತಯಾರಕರಿಗೆ ₹ 4,600 ಗೌರವಧನ ನೀಡುತ್ತಿದ್ದು, ಇದನ್ನು ಕನಿಷ್ಠ ₹ 6 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಜತೆಗೆ ಬಿಸಿಯೂಟ ತಯಾರಕರಿಗೆ ಕೆಲಸದ ಅವಧಿ  ನಿಗದಿಪಡಿಸಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸಂಘ ಹೋರಾಟ ನಡೆಸುವುದು ಅನಿವಾರ್ಯವಾಗಿದೆ’ ಎಂದರು.

ಸಭೆಯಲ್ಲಿ ಯೂನಿಯನ್‌ನ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಾ, ಕಾರ್ಯದರ್ಶಿ ಗಂಗಾದೇವಿ, ಮುಖಂಡರಾದ ಆವರಗೆರೆ ವಾಸು, ಮಹಮದ್ ರಫೀಕ್, ರಾಜೇಶ್ವರಿ, ಶೈಲಾ, ಶಾರದಮ್ಮ, ವಿಶಾಲಾಕ್ಷಿ, ವೆಂಕಟೇಶ್, ಸಿದ್ದೇಶ್, ಮನೋಹರ್ ಉಪಸ್ಥಿತರಿದ್ದರು.