ಚನ್ನಗಿರಿ: ‘ಶಿವನ ದಿವ್ಯದೃಷ್ಟಿಯಿಂದ ಜನ್ಮತಾಳಿದ ಸವಿತಾ ಮಹರ್ಷಿ ದೇವಾನು ದೇವತೆಯರ ಆಯುಷ್ಕರ್ಮ ಸೇವೆ ಮಾಡುತ್ತಿದ್ದರು. ಅವರೊಬ್ಬ ಯುಗ ಪುರುಷರಾಗಿದ್ದರು’ ಎಂದು ತಹಶೀಲ್ದಾರ್ ಕೆ.ಆರ್. ರುಕ್ಮಿಣಿಬಾಯಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಸವಿತಾ ಸಮಾಜದ ತಾಲ್ಲೂಕು ಘಟಕದಿಂದ ಬುಧವಾರ ನಡೆದ ಸವಿತಾ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನಿಗೆ ಆಶ್ರಯ ನೀಡಿದ್ದು ಸವಿತಾ ಸಮಾಜದ ದೊರೆ ಬಿಜ್ಜಳ ಎಂಬುದು ವಿಶೇಷ. ಸಮಾಜಮುಖಿಯಾಗಿದ್ದ ಸವಿತಾ ಮಹರ್ಷಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
‘ಸವಿತಾ ಸಮಾಜ ಅತ್ಯಂತ ಹಿಂದುಳಿದಿದ್ದು, ಸಮಾಜದ ಸಂಘಟನೆಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಲು ಶ್ರಮಿಸಬೇಕು. ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಸರ್ಕಾರ ಮುಂದಾಗಬೇಕು’ ಎಂದು ಸವಿತಾ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರಂಗನಾಥ್ ಒತ್ತಾಯಿಸಿದರು.
ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ, ಶಿರಸ್ತೇದಾರ್ ಎಂ.ಎಲ್. ಮೋಹನ್, ರುದ್ರಸ್ವಾಮಿ, ಸಂತೋಷ್, ವಿಜಯ, ಹನುಮಂತಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.