ಆರೋಪಿ ಬಂಧನ
ಚನ್ನಗಿರಿ (ದಾವಣಗೆರೆ ಜಿಲ್ಲೆ): ಬಾಲಕಿಯೂ ಸೇರಿ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಆ ದೃಶ್ಯ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟ ಪ್ರಕರಣದಲ್ಲಿ ಪೊಲೀಸರು 56 ವರ್ಷ ವಯಸ್ಸಿನ ಆರೋಪಿಯೊಬ್ಬನನ್ನು ಇಲ್ಲಿ ಗುರುವಾರ ತಡರಾತ್ರಿ ಬಂಧಿಸಿದ್ದಾರೆ.
ಇಲ್ಲಿನ ದೇವರಾಜ್ ಅರಸು ಬಡಾವಣೆಯ 'ಸಿ' ಬ್ಲಾಕ್‌ನ ನಿವಾಸಿ ಅಮ್ಜದ್ ಬಂಧಿತ ಆರೋಪಿ.
ಆರೋಪಿಯು ಚನ್ನಗಿರಿ ಪಟ್ಟಣದಲ್ಲಿ ಔಷಧ ಅಂಗಡಿ (ಮೆಡಿಕಲ್ ಶಾಪ್) ಹೊಂದಿದ್ದು, ಅಂಗಡಿಗೆ ಬರುವ ಹೆಣ್ಣುಮಕ್ಕಳನ್ನು ಫುಸಲಾಯಿಸಿ ಬಲೆಗೆ ಬೀಳಿಸಿಕೊಂಡು, ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ, ವಿಡಿಯೊ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಲೈಂಗಿಕ ದೌರ್ಜನ್ಯದ ವಿಡಿಯೊಗಳು ವಾಟ್ಸ್ ಆ್ಯಪ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಅಮ್ಜದ್‌ನನ್ನು ಬಂಧಿಸಿದ್ದಾರೆ.
ಇಲ್ಲಿನ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನೂರಾರು ಮಹಿಳೆಯರ ವಿಡಿಯೊ: ಆರೋಪಿ ಅಮ್ಜದ್ ಮೆಡಿಕಲ್ ಶಾಪ್‌ಗೆ ಬರುವ ಹೆಣ್ಣು ಮಕ್ಕಳ ಮುಖವನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಹೆಣ್ಣುಮಕ್ಕಳು ಸ್ನಾನ ಮಾಡುತ್ತಿರುವುದು, ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವುದು ಮಾತ್ರವಲ್ಲದೇ ರಸ್ತೆಗಳಲ್ಲಿ ಓಡಾಡುತ್ತಿರುವುದನ್ನೂ ಚಿತ್ರೀಕರಿಸಿದ್ದಾನೆ. ಕೆಲವರನ್ನು ಒತ್ತಾಯಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಹಲವು ವಿಡಿಯೊಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿವೆ. ಅಂಗಡಿಗೆ ಬರುವ ಹೆಣ್ಣುಮಕ್ಕಳಿಗೆ ಹಣ ಹಾಗೂ ಇನ್ನಿತರ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿರುವ ದೃಶ್ಯಗಳೂ ವಿಡಿಯೊದಲ್ಲಿವೆ. ಆರೋಪಿಯ ಮೊಬೈಲ್‌ನಲ್ಲಿ 30ಕ್ಕೂ ಹೆಚ್ಚು ವಿಡಿಯೊಗಳಿವೆ ಎನ್ನಲಾಗಿದೆ.
‘ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಡಿಯೊಗಳ ಖಚಿತತೆಯ ಬಗ್ಗೆ ಪರಿಶೀಲನೆಯೂ ಪ್ರಗತಿಯಲ್ಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
‘ಹೆಸರು, ವಯಸ್ಸು, ಧರ್ಮ, ವಿಳಾಸ ಗುರುತಿಸುವ ಅಂಶಗಳನ್ನು ಒಳಗೊಂಡಂತೆ ಸಂತ್ರಸ್ತರ / ನೊಂದವರ ಗುರುತಿನ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಸಂದೇಶ ಮತ್ತು ಸಂಭಾಷಣೆಗಳನ್ನು ಹಂಚಿಕೊಳ್ಳುವುದು ಶಿಕ್ಷಾರ್ಹವಾಗಿವೆ. ಯಾವುದೇ ಕಾರಣಕ್ಕೂ ಇಂತಹ ವಿಡಿಯೊಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.