ದಾವಣಗೆರೆ: ‘ಮನುಷ್ಯತ್ವವನ್ನು ಉಳಿಸುವುದೇ ಸಾಹಿತ್ಯವಾಗಿದೆ. ಅದು ಜನಜೀವನದ ಪ್ರತಿಬಿಂಬವೂ ಹೌದು. ಲೇಖಕಿಯರು ಬರೆದರೆ ಮಾತ್ರ ಅದು ಮಹಿಳಾ ಸಾಹಿತ್ಯವೇ?, ಪುರುಷರು ಮಹಿಳಾಪರ ಕಾಳಜಿ ಇಟ್ಟು ಬರೆಯುವುದು ಮಹಿಳಾ ಸಾಹಿತ್ಯ ಅಲ್ಲವೇ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಪ್ರಶ್ನಿಸಿದರು.
ಇಲ್ಲಿನ ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಬೇರು-ಚಿಗುರು ವೇದಿಕೆಯಿಂದ ಶನಿವಾರ ಆಯೋಜಿಸಿದ್ದ, ‘ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
‘ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಶಿವರಾಮ ಕಾರಂತ್ ಅವರ ಕೃತಿಗಳಲ್ಲಿ ಮಹಿಳಾ ಪರವಾದ ಧ್ವನಿ ಇತ್ತು. ಮಹಿಳಾ ಸಂವೇದನಾಶೀಲತೆ ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತದೆ’ ಎಂದು ಹೇಳಿದರು.
‘ಹನ್ನೆರಡನೇ ಶತಮಾನದಲ್ಲಿ ಅನೇಕ ಮಹಿಳೆಯರು ವಚನಗಳನ್ನು ಬರೆದರು. ವಿವಿಧ ಕಾಯಕದಲ್ಲಿ ತೊಡಗಿದ್ದ ಅನಕ್ಷರಸ್ಥರಿಗೂ ಅಭಿವ್ಯಕ್ತಿಯ ಸ್ವಾತಂತ್ರ್ಯ ದೊರೆಯಿತು. ದಾಸರ ಕಾಲದಲ್ಲಿ ಕೀರ್ತನೆಗಳು ರಚನೆಯಾದವು. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಅನೇಕ ಮಹಿಳೆಯರು ಪತ್ರಕರ್ತೆಯರಾಗಿದ್ದರು. ಹೀಗೆ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಸಂವೇದನಾಶೀಲತೆ ವ್ಯಕ್ತವಾಗಿದೆ’ ಎಂದು ತಿಳಿಸಿದರು.
‘ನವ್ಯ, ದಲಿತ, ಬಂಡಾಯ ಹೀಗೆ ಆಯಾ ಕಾಲಘಟ್ಟದ ಸಂಕಟಗಳನ್ನು ಸಾಹಿತ್ಯದ ಮೂಲಕ ಕಟ್ಟಿಕೊಡುವ ಕೆಲಸವಾಯಿತು. ಸಮುದಾಯದ ನೋವುಗಳು ಬಿಂಬಿತವಾದವು’ ಎಂದು ವಿವರಿಸಿದರು.
‘ಹೆಣ್ಣು 2ನೇ ದರ್ಜೆಯ ಪ್ರಜೆ ಎನ್ನುವ ಭಾವನೆ ಸಮಾಜದಲ್ಲಿತ್ತು. ಆಕೆಯನ್ನು ಅಡುಗೆ ಮನೆಗೆ ಸೀಮಿತವಾಗಿ ನೋಡಲಾಗುತ್ತಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ. ಈಗ ವಸ್ತ್ರಸಂಹಿತೆಯ ಕುರಿತು ಚರ್ಚೆಗಳಾಗುತ್ತಿವೆ. ಮರ್ಯಾದಾ ಹತ್ಯೆಗಳಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಬೇರು-ಚಿಗುರು ಸಮಾನ ಮನಸ್ಕರು ಸೇರಿ ಕಟ್ಟಿದ ವೇದಿಕೆಯಾಗಿದೆ. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ಸಾಹಿತ್ಯ ಮತ್ತು ಶೈಕ್ಷಣಿಕ ಪ್ರಸಾರದ ಉದ್ದೇಶವನ್ನು ಈ ವೇದಿಕೆ ಹೊಂದಿದೆ’ ಎಂದು ಬೇರು-ಚಿಗುರು ವೇದಿಕೆಯ ಕಾರ್ಯದರ್ಶಿ ಅಂಜಿನಪ್ಪ ಡಿ. ತಿಳಿಸಿದರು.
‘ಕಳೆದ ಒಂದು ವರ್ಷದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ವೇದಿಕೆಗಳ ಮೂಲಕ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ವೇದಿಕೆಯ ಚಟುವಟಿಕೆಗಳನ್ನು ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.
ಬೇರು-ಚಿಗುರು ವೇದಿಕೆಯ ಅಧ್ಯಕ್ಷ ವಿಜಯಕುಮಾರ ಎಚ್.ಜಿ., ಕುವೆಂಪು ಭಾಷಾ ಭಾರತಿ ಸದಸ್ಯ ಪ್ರೊ. ಜೆ. ಕರಿಯಪ್ಪ ಮಾಳಿಗೆ, ಹಿರಿಯ ಸಾಹಿತಿ ಜಿ.ಎಸ್. ಸುಶೀಲಾದೇವಿ ಆರ್. ರಾವ್, ಎವಿಕೆ ಕಾಲೇಜು ಪ್ರಾಚಾರ್ಯೆ ಪ್ರೊ. ಕಮಲಾ ಸೊಪ್ಪಿನ್ ಇದ್ದರು. ರಣಧೀರ್ ಸ್ವಾಗತಿಸಿದರು. ಕವಿತಾ ಆರ್.ಜಿ., ಲೋಹಿತ್ ಎಚ್.ಎಂ. ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.