ದಾವಣಗೆರೆ: ಪೋಕ್ಸೊ, ಬಾಲ್ಯವಿವಾಹ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿಕೊಳ್ಳಲು ಜಿಲ್ಲೆಯ ವಿವಿಧೆಡೆ ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದು, ಸಂತ್ರಸ್ತರು ಠಾಣೆಗಳಿಗೆ ಅಲೆಯುವಂತಾಗಿದೆ. ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೀಡುವ ಆದೇಶಕ್ಕೂ ಕಿಮ್ಮತ್ತು ಇಲ್ಲದಂತಾಗಿದೆ.
ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ಸಂತ್ರಸ್ತರ ಬಳಿಗೇ ತೆರಳುವಂತೆ ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್‌ಎಸ್) ನಿರ್ದೇಶನವಿದೆ. ಇದನ್ನು ಪಾಲನೆ ಮಾಡದ ಪೊಲೀಸರು, ಠಾಣೆಗೆ ಬರುವ ದೂರುದಾರರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆಯೇ ಆಕ್ಷೇಪ ವ್ಯಕ್ತವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಪರಿಶೀಲಿಸುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಪ್ರಕರಣದ ನೈಜತೆಯನ್ನು ಪರಿಶೀಲಿಸಿ ದೂರು ದಾಖಲಿಸಲು ಸೂಚನೆ ನೀಡುತ್ತದೆ. ಅರೆ ನ್ಯಾಯಿಕ ಸಂಸ್ಥೆಯೂ ಆಗಿರುವ ಸಮಿತಿಯ ಆದೇಶವನ್ನು ಹಿಡಿದು ಠಾಣೆಯ ಮೆಟ್ಟಿಲೇರುವ ಸಂತ್ರಸ್ತರು ಹಾಗೂ ಅಧಿಕಾರಿಗಳಿಗೆ ಭ್ರಮನಿರಸನ ಆಗುತ್ತಿದೆ. ಹರಿಹರ, ಚನ್ನಗಿರಿ, ಹದಡಿ, ಮಹಿಳಾ ಪೊಲೀಸ್ ಠಾಣೆಯೂ ಸೇರಿದಂತೆ ಹಲವೆಡೆ ಈ ರೀತಿಯ ವಿಳಂಬವಾಗಿರುವುದು ಬೆಳಕಿಗೆ ಬಂದಿದೆ.
ಹರಿಹರ ನಗರದ 16 ವರ್ಷದ ಬಾಲಕಿಯೊಬ್ಬಳನ್ನು ಮಹಾರಾಷ್ಟ್ರದ ಕೊಲ್ಲಾಪುರದ ಯುವಕನೊಂದಿಗೆ ಜೂನ್ 15ರಂದು ಮದುವೆ ಮಾಡಿಕೊಡಲಾಗಿತ್ತು. ಇದನ್ನು ಪತ್ತೆ ಮಾಡಿದ ಶಿಶು ಅಭಿವೃದ್ಧಿ ಅಧಿಕಾರಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ನೀಡಿದ್ದರು. ಬಾಲ್ಯವಿವಾಹ ಪ್ರಕರಣ ದಾಖಲಿಸಲು ಸಮಿತಿ ಜುಲೈ 24ರಂದೇ ಆದೇಶಿಸಿದೆ. ಬಾಲ್ಯವಿವಾಹ ಮಹಾರಾಷ್ಟ್ರದಲ್ಲಿ ನಡೆದಿದ್ದರಿಂದ ಅಲ್ಲಿಗೆ ತೆರಳಿ ಪ್ರಕರಣ ದಾಖಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಮೂರು ತಿಂಗಳ ನಿರಂತರ ಅಲೆದಾಟದ ಬಳಿಕ ಅ.12ರಂದು ಹರಿಹರ ನಗರ ಠಾಣೆಯಲ್ಲಿ ‘ಝೀರೊ’ ಎಫ್‌ಐಆರ್ ದಾಖಲಾಗಿದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದ ಬಾಲ್ಯವಿವಾಹ ಪತ್ತೆ ಮಾಡಿದ ಶಿಶು ಅಭಿವೃದ್ಧಿ ಅಧಿಕಾರಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ನೀಡಿದ್ದರು. ಆಪ್ತಸಮಾಲೋಚನೆ ನಡೆಸಿದಾಗ ಬಾಲಕಿ ವಿವಾಹವಾಗಿರುವುದು ಖಚಿತವಾಗಿತ್ತು. ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸಮಿತಿಯು ಸೆ.11ರಂದು ಆದೇಶ ನೀಡಿದೆ. ಆದರೆ, ಈವರೆಗೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿಲ್ಲ.
ದಾವಣಗೆರೆ ತಾಲ್ಲೂಕಿನ ಗ್ರಾಮವೊಂದರಲ್ಲಿ 17 ವರ್ಷದ ಬಾಲಕಿಯೊಬ್ಬಳು ಮದುವೆ ನಿಶ್ಚಯ ಮಾಡಿಕೊಂಡ ಯುವಕನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಗರ್ಭಿಣಿಯಾದ ಬಾಲಕಿಯನ್ನು ಅ.4ರಂದು ಬಾಲಕಿಯರ ಬಾಲಮಂದಿರಕ್ಕೆ ಸ್ಥಳಾಂತರಿಸಲಾಗಿತ್ತು. ಎಫ್‌ಐಆರ್ ದಾಖಲಿಸಲು 6 ದಿನ ತೆಗೆದುಕೊಂಡ ಹದಡಿ ಠಾಣೆಯ ಪೊಲೀಸರು, ವಿಳಂಬಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಯೇ ಕಾರಣವೆಂದು ಉಲ್ಲೇಖಿಸಿದ್ದಾರೆ.
‘ಪೋಕ್ಸೊ, ಲೈಂಗಿಕ ದೌರ್ಜನ್ಯ ಮತ್ತು ಬಾಲ್ಯವಿವಾಹದಂತಹ ಪ್ರಕರಣಗಳನ್ನು ಕೂಡ ರಾಜಿಯಲ್ಲಿ ಬಗೆಹರಿಸಿಕೊಳ್ಳಲು ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಠಾಣೆಗೆ ಕರೆಸಿ ಪಂಚಾಯಿತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಲು ತಾಕೀತು ಮಾಡುತ್ತಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯಗಳ ವಿಚಾರದಲ್ಲಿಯೂ ಪೊಲೀಸರು ಸಂವೇದನೆಯಿಂದ ವರ್ತಿಸುತ್ತಿಲ್ಲ’ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರರೊಬ್ಬರು ಬೇಸರ ವ್ಯಕ್ತಪಡಿಸಿದರು.
‘ಪ್ರಕರಣ ದಾಖಲಿಸಿಕೊಂಡು ತ್ವರಿತಗತಿಯಲ್ಲಿ ತನಿಖೆ ನಡೆಸಬೇಕಿದ್ದ ಪೊಲೀಸರೇ ರಾಜಿಗೆ ಶಿಫಾರಸು ಮಾಡುತ್ತಿರುವುದು ಅನುಮಾನ ಮೂಡಿಸಿದೆ. ಗ್ರಾಮಾಂತರ ಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಈ ರೀತಿಯ ರಾಜಿಗಳ ಸಂಖ್ಯೆ ಹೆಚ್ಚಿದೆ. ಎಫ್‌ಐಆರ್ ವಿಳಂಬವಾಗಿ ದಾಖಲಾಗುವುದರಿಂದ ತನಿಖೆ ಕೈಗೊಳ್ಳುವ ಹೊತ್ತಿಗೆ ಸಾಕ್ಷ್ಯಗಳು ನಾಶವಾಗುತ್ತವೆ’ ಎಂಬುದು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯೊಂದರ ಆಕ್ಷೇಪ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ.
‘ಪೋಕ್ಸೊ’ ಪ್ರಕರಣ ದಾಖಲಿಸಲು ವಿಳಂಬ ಮಾಡುವ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅವಕಾಶವಿದೆ. ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಆದೇಶ ಪಾಲಿಸದವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದುಶಶಿಧರ ಕೋಸಂಬೆ ಸದಸ್ಯ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ