ADVERTISEMENT

ಕಸ್ಟೋಡಿಯಲ್‌ ಡೆತ್‌: ಸಿಐಡಿ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 17:05 IST
Last Updated 7 ಅಕ್ಟೋಬರ್ 2020, 17:05 IST
ಮರುಳಸಿದ್ದಪ್ಪ
ಮರುಳಸಿದ್ದಪ್ಪ   

ದಾವಣಗೆರೆ: ಮಾಯಕೊಂಡ ಪೊಲೀಸ್‌ ಠಾಣೆಯಲ್ಲಿ ನಡೆದಿದೆ ಎನ್ನಲಾದ ವಿಠ್ಠಲಾಪುರ ಗ್ರಾಮದ ಮರುಳಸಿದ್ದಪ್ಪ ಅವರ ‘ಕಸ್ಟೋಡಿಯಲ್‌ ಡೆತ್‌’ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಬುಧವಾರ ಆರಂಭಿಸಿದ್ದಾರೆ.

ಸಿಐಡಿಯ ಡಿವೈಎಸ್‌ಪಿ ಗಿರೀಶ್‌ ನೇತೃತ್ವದ ತಂಡ ಬುಧವಾರ ಮಾಯಕೊಂಡಕ್ಕೆ ಬಂದಿದ್ದು, ಪ್ರಕರಣದ ತನಿಖೆಯನ್ನು ಆರಂಭಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ನಾಪತ್ತೆಯಾಗಿರುವ ಪತಿಯನ್ನು ಹುಡುಕಿಕೊಡಿ ಎಂದು ಪತ್ನಿ ದೂರು ನೀಡಿರುವುದರಿಂದ ವಿಚಾರಣೆಗಾಗಿ ಮರುಳಸಿದ್ದಪ್ಪ ಅವರನ್ನು ಠಾಣೆಗೆ ಕರೆತರಲಾಗಿತ್ತು.

ADVERTISEMENT

ಪ್ರಕರಣದ ಸಂಬಂಧ ಪಿಎಸ್‌ಐ ಪ್ರಕಾಶ್, ಹೆಡ್‌ ಕಾನ್‌ಸ್ಟೆಬಲ್‌ ನಾಗರಾಜ್ ಮತ್ತು ಕಾನ್‌ಸ್ಟೆಬಲ್‌ ಶೇರ್ ಅಲಿ ಅವರನ್ನು ಮಂಗಳವಾರ ಅಮಾನತುಗೊಳಿಸಿ, ಮೂವರನ್ನೂ ಬಂಧಿಸಲಾಗಿತ್ತು. ಮತ್ತೊಬ್ಬ ಸಿಬ್ಬಂದಿ ರಂಗಸ್ವಾಮಿ ಅವರನ್ನೂ ಅಮಾನತುಗೊಳಿಸಲಾಗಿದೆ.

ಮಾಯಕೊಂಡ ಠಾಣೆಯಲ್ಲಿ ಮಂಗಳವಾರ ರಾತ್ರಿಯೇ ದೂರು ದಾಖಲಾಗಿದ್ದು, ಗ್ರಾಮಾಂತರ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಅವರನ್ನು ತನಿಖಾಧಿಕಾರಿಯನ್ನಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ನೇಮಿಸಿದ್ದರು.

ನರಸಿಂಹ ತಾಮ್ರಧ್ವಜ ಅವರು ಆರೋಪಿಗಳನ್ನು ವಿಚಾರಣೆ ನಡೆಸಿ ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸ್ಥಳ ಮಹಜರು ನಡೆಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆಕಳುಹಿಸಲು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಅವುಗಳನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.

ಜೆಎಂಎಫ್‌ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶರಾದ ನಂದಿನಿ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ವರದಿ ಬಂದ ನಂತರ ಸತ್ಯಾಂಶ ಹೊರಬರಲಿದೆ.

ಪೂರ್ವವಲಯದ ಐಜಿಪಿ ಎಸ್‌.ರವಿ ಅವರು ಮಂಗಳವಾರ ರಾತ್ರಿ ಮಾಯಕೊಂಡ ಠಾಣೆಗೆ ಭೇಟಿ ನೀಡಿ, ಪ್ರಕರಣದ ತನಿಖೆಯನ್ನುಸಿಐಡಿಗೆ ವಹಿಸುವ ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.