ದಾವಣಗೆರೆ: ‘ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ನಗರದ ಸಮೀಪದ ಹಳ್ಳಿಗಳಿಗೂ ನಗರ ಸಾರಿಗೆ ಸೇವೆಗಳನ್ನು ವಿಸ್ತರಿಸುವಂತೆ ನಿರ್ದೇಶನ ನೀಡಿದ್ದೇನೆ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದರು.
ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣದಲ್ಲಿ ದಾವಣಗೆರೆ–ಚಿಕ್ಕಮಗಳೂರು ಮಾರ್ಗದಲ್ಲಿ ನೂತನ ಬಸ್ ಸೇವೆಗೆ ಶುಕ್ರವಾರ ಹಸಿರು ನಿಶಾನೆ ತೋರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
‘ನಷ್ಟವಾಗಲಿದೆ ಎಂಬ ಕಾರಣಕ್ಕೆ ಖಾಸಗಿ ಬಸ್‌ನವರು ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಗ್ರಾಮೀಣ ಜನರಿಗೆ ತೊಂದರೆಯಾಗದಿರಲಿ ಎಂದು ನಿಗಮಕ್ಕೆ ನಷ್ಟವಾದರೂ ಎಲ್ಲಾ ಮಾರ್ಗಗಳಲ್ಲೂ ಬಸ್‌ಗಳನ್ನು ಓಡಿಸುವಂತೆ ಸೂಚಿಸಿದ್ದೇನೆ’ ಎಂದು ಹೇಳಿದರು.
‘ತರಕಾರಿ, ಹಾಲನ್ನು ನಗರಕ್ಕೆ ತಂದು ಮಾರಲು ರೈತರಿಗೆ ಅನುಕೂಲ ಕಲ್ಪಿಸಲು ನಗರ ಸಾರಿಗೆ ಸೇವೆಯನ್ನು ಉಪನಗರಗಳಿಗೂ ವಿಸ್ತರಿಸಲಾಗುವುದು. ಆವರಗೆರೆ, ಬೇತೂರು, ಶಿರಮಗೊಂಡನಹಳ್ಳಿ ಸೇರಿ ಆರೇಳು ಕಿ.ಮೀ ದೂರದ ಹಳ್ಳಿಗಳಿಗೂ ಬಸ್ ಸೇವೆಯನ್ನು ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದ್ದೇನೆ’ ಎಂದರು.
ಹೊರ ರಾಜ್ಯಗಳ ಸೇವೆ ಆರಂಭ: ‘ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶಗಳಿಗೆ ಬಸ್ ಓಡಿಸಲು ಪರವಾನಗಿ ಸಿಕ್ಕಿದೆ. ದಾವಣಗೆರೆಯಿಂದ ಶಿರಡಿ, ತಿರುಪತಿ, ಹೈದರಾಬಾದ್, ಧರ್ಮಸ್ಥಳಕ್ಕೆ ವೋಲ್ವೊ ಬಸ್‌ಗಳ ಸೇವೆಯನ್ನು ಪುನಃ ಆರಂಭಿಸಲಾಗುವುದು. ಜನರ ಬೇಡಿಕೆಗೆ ತಕ್ಕಂತೆ ಹೊಸ ಮಾರ್ಗಗಳಲ್ಲೂ ಬಸ್ ಸೇವೆ ಆರಂಭಿಸಲು ಸಿದ್ಧರಿದ್ದೇವೆ’ ಎಂದು ಚಂದ್ರಪ್ಪ ತಿಳಿಸಿದರು.
ಬಸ್ ನಿಲ್ದಾಣ ಆಧುನೀಕರಣ: ಸ್ಮಾರ್ಟ್ ಸಿಟಿ ಯೋಜನೆಯಡಿ ₹ 100 ಕೋಟಿ ವೆಚ್ಚದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗುವುದು. ಹೈಸ್ಕೂಲ್ ಮೈದಾನದಲ್ಲಿ ₹ 2.5 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಬಸ್‌ನಿಲ್ದಾಣ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ನೂತನ ಬಸ್‌ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.
‘ಬಸ್‌ನಿಲ್ದಾಣದಲ್ಲಿ ಡಿಜಿಟಲ್ ನಾಮಫಲಕಗಳನ್ನು ಅಳವಡಿಸಲಾಗುವುದು. ರೈಲು, ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಇಲ್ಲಿಯೂ ಬಸ್ ವಿಳಂಬವಾಗುವ ಮಾಹಿತಿಯನ್ನು ತೋರಿಸುವಂತೆ ಸಂಪೂರ್ಣವಾಗಿ ಗಣಕೀಕೃತ ವ್ಯವಸ್ಥೆ ಮಾಡಲಾಗುವುದು’ ಎಂದರು.
ಕೆ.ಎಸ್.ಆರ್.ಟಿ.ಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ಹಾಗೂ ಅಧಿಕಾರಿಗಳು ಇದ್ದರು.
ನಿಗಮಕ್ಕೆ ₹ 1,500 ಕೋಟಿ ನಷ್ಟ
ಕೋವಿಡ್ ಸಂಕಷ್ಟದಿಂದಾಗಿ ಐದು ತಿಂಗಳಲ್ಲಿ ಸಂಸ್ಥೆಗೆ ₹ 1,500 ಕೋಟಿ ನಷ್ಟವಾಗಿದೆ. ನೌಕರರಿಗೆ ಸಂಬಳ ನೀಡಲು ಸರ್ಕಾರದಿಂದ ₹ 1,350 ಕೋಟಿ ನೀಡಿರುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಬಸ್‌ಗಳನ್ನು ಖರೀದಿಸಲು ಸಾಧ್ಯವಿಲ್ಲ. ಬಸ್‌ನಲ್ಲಿರುವ ಒಟ್ಟು ಆಸನಗಳ ಪೈಕಿ ಶೇ 50ರಲ್ಲಿ ಮಾತ್ರ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿರುವುದರಿಂದ ಡೀಸೆಲ್ ವೆಚ್ಚ ಭರಿಸುವಷ್ಟೇ ಆದಾಯ ಬರುತ್ತಿದೆ. ಸಂಸ್ಥೆಯ ನೌಕರರ ವೇತನ ಭರಿಸುವಷ್ಟು ಆದಾಯ ಇನ್ನೂ ಬರುತ್ತಿಲ್ಲ ಎಂದು ಚಂದ್ರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಡಿಯೂರಪ್ಪ ಬದಲಾವಣೆ ಕನಸಿನ ಮಾತು
‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುತ್ತಾರೆ ಎಂಬುದು ಕನಸಿನ ಮಾತು. ಮುಂದಿನ ಮೂರು ವರ್ಷಗಳ ಕಾಲವೂ ಅವರೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಚಂದ್ರಪ್ಪ ಅಭಿಪ್ರಾಯಪಟ್ಟರು.
‘ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗಲೂ ಅವರನ್ನು ಬದಲಾಯಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಮುಖ್ಯಮಂತ್ರಿ ಬದಲಾವಣೆ ಕುರಿತ ಊಹಾಪೋಹದ ಮಾತುಗಳು ಎಲ್ಲಾ ಕಾಲದಲ್ಲೂ ಕೇಳಿಬರುತ್ತದೆ’ ಎಂದು ಪ್ರತಿಪಾದಿಸಿದರು.
‘ನಾನೂ ಸಚಿವ ಸ್ಥಾನದ ಆಕಾಂಕ್ಷಿ. ಎಲ್ಲಾ ಶಾಸಕರಿಗೂ ಸಚಿನಾಗಬೇಕು ಎಂಬ ಆಸೆ ಇರುತ್ತದೆ. ಸಚಿವರಾದವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಬಯಕೆ ಇರುತ್ತದೆ’ ಎಂದ ಅವರು, ‘ಸಚಿವ ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಪಟ್ಟಿ ಯಡಿಯೂರಪ್ಪ ಅವರ ಮನಸ್ಸಿನಲ್ಲಿದೆ’ ಎಂದರು.
ರೇಣುಕಾಚಾರ್ಯ ವಿಮಾನವನ್ನೂ ಓಡಿಸುತ್ತಾರೆ!
ಸಾರಿಗೆ ಸಂಸ್ಥೆಯ ಬಸ್ ಅನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಓಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇದು ಸರ್ಕಾರಿ ಬಸ್. ಹೀಗಾಗಿ ಎಲ್ಲರೂ ಓಡಿಸಬಹುದು. ನೀವು ಹೆಲಿಕಾಪ್ಟರ್, ವಿಮಾನವನ್ನು ನೀಡಿದರೂ ರೇಣುಕಾಚಾರ್ಯ ಓಡಿಸುತ್ತಾರೆ...’ ಎಂದು ಚಂದ್ರಪ್ಪ ನಗೆ ಬೀರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.