ADVERTISEMENT

ದಾವಣಗೆರೆ: ಅಂಬೇಡ್ಕರ್ ವೃತ್ತಕ್ಕೆ ಹೊಸರೂಪ, ಸಂಚಾರ ವಿರೂಪ

ಜಿ.ಬಿ.ನಾಗರಾಜ್
Published 27 ಅಕ್ಟೋಬರ್ 2025, 6:31 IST
Last Updated 27 ಅಕ್ಟೋಬರ್ 2025, 6:31 IST
ದಾವಣಗೆರೆಯ ಮಹಾನಗರ ಪಾಲಿಕೆ ಮುಂಭಾಗದ ರೈಲ್ವೆ ಕೆಳ ಸೇತುವೆಯ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ರಸ್ತೆಗೆ ಟ್ರ್ಯಾಕ್ಟರ್‌ ಅಡ್ಡ ನಿಲ್ಲಿಸಿ ಬಂದ್ ಮಾಡಲಾಗಿದೆ –ಪ್ರಜಾವಾಣಿ ಚಿತ್ರ/ಸತೀಶ್‌ ಬಡಿಗೇರ
ದಾವಣಗೆರೆಯ ಮಹಾನಗರ ಪಾಲಿಕೆ ಮುಂಭಾಗದ ರೈಲ್ವೆ ಕೆಳ ಸೇತುವೆಯ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ರಸ್ತೆಗೆ ಟ್ರ್ಯಾಕ್ಟರ್‌ ಅಡ್ಡ ನಿಲ್ಲಿಸಿ ಬಂದ್ ಮಾಡಲಾಗಿದೆ –ಪ್ರಜಾವಾಣಿ ಚಿತ್ರ/ಸತೀಶ್‌ ಬಡಿಗೇರ   

ದಾವಣಗೆರೆ: ಅಂಬೇಡ್ಕರ್ ವೃತ್ತದಿಂದ ತ್ರಿಶೂಲ್‌ ಟಾಕೀಸ್‌ ಕಡೆಗೆ ಸಾಗುತ್ತಿದ್ದ ದ್ವಿಚಕ್ರ ವಾಹನ ಶಿವಪ್ಪಯ್ಯ ವೃತ್ತ ಸಮೀಪಿಸುತ್ತಿದ್ದಂತೆ ವೇಗದ ಮಿತಿ ಕಡಿಮೆ ಮಾಡಿತು. ರಾಶಿಬಿದ್ದ ಮಣ್ಣು, ಕಲ್ಲುಗಳಿಂದ ಮಾರ್ಗ ಸಂಪೂರ್ಣ ಬಂದ್‌ ಆಗಿತ್ತು. ಕೆ.ಬಿ. ಬಡಾವಣೆಯ ಒಳನುಗ್ಗಿ ಗಮ್ಯ ತಲುಪುವ ಹೊತ್ತಿಗೆ ಸವಾರ ಸುಸ್ತಾಗಿದ್ದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಪಿ.ಬಿ. ರಸ್ತೆಯ ಮೂಲಕ ಹರಿಹರದತ್ತ ಸಾಗುತ್ತಿದ್ದ ಕಾರು ಗಾಂಧಿ ವೃತ್ತದ ಬಳಿ ನಿಂತಿತು. ಅಗೆದ ರಸ್ತೆಯಲ್ಲಿ ಮುಂದೆ ಸಾಗಲು ಸಾಧ್ಯವಾಗಿಲ್ಲ ಎಂಬುದು ಚಾಲಕನಿಗೆ ಖಚಿತವಾಯಿತು. ಹಿಂದಕ್ಕೆ ಚಲಿಸಿ ಪಿ.ಬಿ. ರಸ್ತೆಯ ಮತ್ತೊಂದು ಬದಿಯಿಂದ ಸಾಗುವಾಗ ಎದುರಿನಿಂದ ವೇಗವಾಗಿ ಬಂದ ಬೈಕಿಗೆ ಕಾರು ಮುಖಾಮುಖಿ ಡಿಕ್ಕಿಯಾಯಿತು.

ಇದು ನಗರದಲ್ಲಿ ಇತ್ತೀಚೆಗೆ ಎದುರಾಗಿರುವ ಸಂಚಾರ ಸಮಸ್ಯೆ. ರಸ್ತೆ, ವೃತ್ತದ ಅಭಿವೃದ್ಧಿಗೆ ಆರಂಭವಾದ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೇ ರಸ್ತೆ, ವೃತ್ತಗಳನ್ನು ಕಿತ್ತುಹಾಕಲಾಗಿದೆ. ಕಾಮಗಾರಿಯ ಬಗ್ಗೆ ಅರಿವಿರದ ಚಾಲಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಮಾರ್ಗ ಬದಲಾವಣೆ, ಕಾಮಗಾರಿ ಪ್ರತಿಗತಿಯ ಬಗ್ಗೆ ಯಾವ ಸ್ಥಳದಲ್ಲಿಯೂ ಸರಿಯಾದ ಮಾಹಿತಿಯನ್ನು ಭಿತ್ತರಿಸಿಲ್ಲ.

ADVERTISEMENT

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್‌, ವಿದ್ಯುತ್‌ ಮಾರ್ಗದ ದುರಸ್ತಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಕಡ್ಡಾಯ. ವಿದ್ಯುತ್‌ ವ್ಯತ್ಯಯದ ಕುರಿತು ‘ಬೆಸ್ಕಾಂ’ ಕಾಲಕಾಲಕ್ಕೆ ವಿಷಯ ತಿಳಿಸುತ್ತಿದೆ. ಆದರೆ, ರಸ್ತೆ, ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್‌ ದುರಸ್ತಿಯ ಮಾಹಿತಿಯನ್ನು ಸಕಾಲಕ್ಕೆ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ನೀಡುತ್ತಿಲ್ಲ. ಗುತ್ತಿಗೆದಾರರು ಏಕಾಏಕಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದಾರೆ. ಇದರಿಂದ ನಗರದಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ಕೆ.ಬಿ. ಬಡಾವಣೆಯ ಶಿವಪ್ಪಯ್ಯ ವೃತ್ತದಿಂದ ತ್ರಿಶೂಲ್‌ ಟಾಕೀಸ್‌ ಕಡೆಗೆ ಸಾಗುವ ಮಾರ್ಗದಲ್ಲಿ ಚರಂಡಿ ನಿರ್ಮಾಣ, ಫೇವರ್ಸ್‌ ಅಳವಡಿಸುವ ಕಾಮಗಾರಿ ಏಪ್ರಿಲ್‌ನಿಂದ ನಡೆಯುತ್ತಿದೆ. ಶಿವಪ್ಪಯ್ಯ ವೃತ್ತದ ಅಭಿವೃದ್ಧಿ ಕಾಮಗಾರಿಯನ್ನು ಎರಡು ತಿಂಗಳಿಂದ ಕೈಗೆತ್ತಿಕೊಳ್ಳಲಾಗಿದೆ. ಜಯದೇವ ವೃತ್ತ, ಅಂಬೇಡ್ಕರ್ ವೃತ್ತದ ಬಳಿಕ ಈ ಕುರಿತು ಸರಿಯಾದ ಮಾಹಿತಿ ನೀಡಿಲ್ಲ. ಶಿವಪ್ಪಯ್ಯ ವೃತ್ತದ ಮೂಲಕ ನಿಟುವಳ್ಳಿ ಕಡೆಗೆ ಸಾಗುವವರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಈ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಪಿ.ಬಿ. ರಸ್ತೆಯನ್ನು ಒಂದು ಬದಿ ಕಿತ್ತುಹಾಕಲಾಗಿದೆ. ಗಾಂಧಿ ವೃತ್ತದಿಂದ ಬಿಎಸ್‌ಎನ್‌ಎಲ್‌ ವೃತ್ತದವರೆಗೆ ಕಾಂಕ್ರಿಟ್‌ ರಸ್ತೆ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗಾಂಧಿ ವೃತ್ತವನ್ನು ಯುರೋಪಿಯನ್‌ ಮಾದರಿಯಲ್ಲಿ ವಿನ್ಯಾಸಗೊಳಿಸುವ ಕೆಲಸವೂ ಶುರುವಾಗಿದೆ. ರೈಲ್ವೆ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ನಡುವೆ ಸಂಚರಿಸುವ ವಾಹನಗಳಿಗೆ ಇದರಿಂದ ಸಮಸ್ಯೆ ಎದುರಾಗಿದೆ.

ಜಯದೇವ ವೃತ್ತ ಹಾಗೂ ಗಾಂಧಿ ವೃತ್ತ ಸಂಪರ್ಕಿಸುವ ಅಶೋಕ ರಸ್ತೆ, ಜಯದೇವ ವೃತ್ತ ಮತ್ತು ಪಿ.ಬಿ. ರಸ್ತೆಯ ಬಿಎಸ್‌ಎನ್‌ಎಲ್‌ ಕಚೇರಿ ವೃತ್ತವನ್ನು ಸಂಪರ್ಕಿಸುವ ಪ್ರವಾಸಿ ಮಂದಿರದ ರಸ್ತೆಯ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಯದೇವ ವೃತ್ತದಲ್ಲಿ ಈ ಬಗ್ಗೆ ಸಣ್ಣದೊಂದು ಮಾಹಿತಿಯನ್ನು ಅಳವಡಿಸಲಾಗಿದೆ. ಉಳಿದಂತೆ ಯಾವುದೇ ಮೂಲೆಯಲ್ಲಿ ಈ ಅಡಚಣೆಯ ಮಾಹಿತಿ ಭಿತ್ತರಿಸಿಲ್ಲ. ವಾಹನಗಳು ಸಾಗಬೇಕಾದ ಮಾರ್ಗದ ಬಗ್ಗೆಯೂ ವಿವರಣೆಗಳಿಲ್ಲ.

ಅಶೋಕ ರಸ್ತೆ, ಪ್ರವಾಸಿ ಮಂದಿರದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಲಾಯರ್‌ ರಸ್ತೆ, ಎಲಿಗಾರ ಶಿವಪ್ಪ ರಸ್ತೆ ಅಥವಾ ಎವಿಕೆ ಕಾಲೇಜು ರಸ್ತೆಯ ಮೂಲಕ ಸಾಗಬೇಕಿದೆ. ಪರಿಣಾಮವಾಗಿ ವಾಹನ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಈ ನಡುವೆ ಹಳೆ ದಾವಣಗೆರೆ ಸಂಪರ್ಕಿಸುವ ರೈಲು ನಿಲ್ದಾಣದ ಪಕ್ಕದಲ್ಲಿರುವ ರೈಲ್ವೆ ಅಂಡರ್‌ಪಾಸ್‌ ಕೂಡ ಮುಚ್ಚಲಾಗಿದೆ. ಮಳೆಯಿಂದ ಹಾಳಾಗಿರುವ ರಸ್ತೆಯ ದುರಸ್ತಿ ಕಾಮಗಾರಿಯನ್ನು ಭಾನುವಾರದಿಂದ ಕೈಗೆತ್ತಿಕೊಳ್ಳಲಾಗಿದೆ. ಮಂಡಿಪೇಟೆ ಸಂಪರ್ಕಿಸಲು ವಸಂತ ಟಾಕೀಸ್‌ ರಸ್ತೆ ಅಥವಾ ಅಶೋಕ ಟಾಕೀಸು ರಸ್ತೆಯ ಮೂಲಕ ಸುತ್ತಿಬಳಸಿ ಸಾಗಬೇಕಿದೆ.

ಲೋಕಿಕೆರೆ ರಸ್ತೆಯ ಗಣೇಶ ದೇಗುಲದಿಂದ ಬೆಳವನೂರು ವರೆಗಿನ 3 ಕಿ.ಮೀ ರಸ್ತೆ ದುರಸ್ತಿ ಕಾಮಗಾರಿ 6 ತಿಂಗಳಿಂದ ಪೂರ್ಣಗೊಂಡಿಲ್ಲ. ಈ ಮಾರ್ಗದಲ್ಲಿ ಸಂಚರಿಸಬೇಕಾಗಿರುವ ವಾಹನಗಳು ಪ್ರವಾಸಿ ಮಂದಿರದ ಬಳಿಯಿಂದ ಕೈಗಾರಿಕಾ ಪ್ರದೇಶದ ಚಿಕ್ಕ ರಸ್ತೆಗಳಲ್ಲಿ ಸಾಗುತ್ತಿವೆ. ಹದಡಿ ರಸ್ತೆಗೆ ಕಾಂಕ್ರಿಟ್‌ ಹಾಕುವ ಕಾಮಗಾರಿ ಕೂಡ ಆರಂಭವಾಗಿದೆ. ಅಲ್ಲಲ್ಲಿ ವಾಹನ ಸಂಚಾರಕ್ಕೆ ತಿರುವು ನೀಡಲಾಗಿದೆ.

ಯೂರೋಪ್‌ ಮಾದರಿ ವೃತ್ತ

ಪಿ.ಬಿ. ರಸ್ತೆಯ ಗಾಂಧಿ ವೃತ್ತವನ್ನು ಯೂರೋಪ್‌ ಶೈಲಿಯಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ವಿದ್ಯಾರ್ಥಿ ಭವನ ವೃತ್ತವನ್ನು ರೂಪಿಸಿದ ಮಾದರಿಯಲ್ಲಿಯೇ ನಗರದ ಉಳಿದ ವೃತ್ತಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಉತ್ತಮ ಗುಣಮಟ್ಟದ ಗ್ರಾನೈಟ್‌ ಕಲ್ಲು, 100 ಎಂ.ಎಂ. ಜಲ್ಲಿಕಲ್ಲು, 100 ಎಂ.ಎಂ ಡಿಎಲ್‌ಪಿ ಹಾಗೂ ಗುಣಮಟ್ಟದ ಕಾಂಕ್ರಿಟ್‌ ಹಾಕಿ ವೃತ್ತವನ್ನು ಆಕರ್ಷಣೀಯಗೊಳಿಸುವುದು ಇದರ ಉದ್ದೇಶ. ಇದಕ್ಕೆ ಸುಸ್ಥಿತಿಯಲ್ಲಿದ್ದ ವೃತ್ತಗಳನ್ನು ಕೂಡ ಕಿತ್ತುಹಾಕಲಾಗಿದೆ.

ವಿಸ್ತರಣೆಯಾಗದ ಹದಡಿ ರಸ್ತೆ

ಹದಡಿ ರಸ್ತೆಯನ್ನು ವಿಸ್ತರಿಸದೇ ಕಾಂಕ್ರಿಟ್‌ ಹಾಕುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ವಿಸ್ತರಣೆ ಹಾಗೂ ಅಭಿವೃದ್ಧಿ ಏಕಕಾಲಕ್ಕೆ ನಡೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ.‌ ‘ಆರ್‌.ಎಚ್‌. ಚೌಟ್ರಿಯಿಂದ ಜಯದೇವ ವೃತ್ತದ ಮೂಲಕ ಕೆಇಬಿ ವೃತ್ತದವರೆಗೆ ಹದಡಿ ರಸ್ತೆ ವಿಸ್ತರಣೆಯಾಗಿದೆ. ಆದರೆ, ಕೆಇಬಿ ವೃತ್ತದಿಂದ ಶಿರಮಗೊಂಡನಹಳ್ಳಿ ಅಂಡರ್‌ ಬ್ರಿಡ್ಜ್‌ವರೆಗೆ ವಿಸ್ತರಣೆ ನನೆಗುದಿಗೆ ಬಿದ್ದಿದೆ. ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಹಲವು ಕಟ್ಟಡಗಳು ಇಲ್ಲಿ ನಿರ್ಮಾಣವಾಗಿವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಎಂ.ಜಿ.ಶ್ರೀಕಾಂತ್‌.

‌ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು ಸ್ವಾಗತಾರ್ಹ. ಆದರೆ ಏಕಕಾಲಕ್ಕೆ ಎಲ್ಲ ರಸ್ತೆಗಳನ್ನು ಕಿತ್ತು ಹಾಕಿದ್ದು ಸರಿಯಲ್ಲ. ಇದರಿಂದ ಸಂಚಾರ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ
ತಿಪ್ಪೇಶ್‌ ನಾಯ್ಕ, ಆಟೊ ಚಾಲಕ
ಹದಡಿ ರಸ್ತೆ ಸಾಕಷ್ಟು ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸದೇ ಕಾಂಕ್ರಿಟ್‌ ರಸ್ತೆ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಅಭಿವೃದ್ಧಿಯ ಆಶಯ ಈಡೇರಲು ಸಾಧ್ಯವಿಲ್ಲ
ಎಂ.ಜಿ. ಶ್ರೀಕಾಂತ್‌, ಸಾಮಾಜಿಕ ಕಾರ್ಯಕರ್ತ
ಒಂದಾದ ಬಳಿಕ ಮತ್ತೊಂದು ರಸ್ತೆ ವೃತ್ತದ ಕಾಮಗಾರಿ ಕೈಗೆತ್ತಿಕೊಂಡರೆ ಅನುಕೂಲ. ಇಲ್ಲವಾದರೆ ಸಂಚಾರ ಸಮಸ್ಯೆ ಉಂಟಾಗುತ್ತದೆ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ
ಉಮಾ ಪ್ರಶಾಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಾವಣಗೆರೆ
ದಾವಣಗೆರೆಯ ಪಿ.ಬಿ. ರಸ್ತೆಯ ರಾಜನಹಳ್ಳಿ ಛತ್ರದ ಬಳಿ ನಡೆದಿರುವ ರಸ್ತೆ ಅಭಿವೃದ್ಧಿ ಕಾಮಗಾರಿ–ಪ್ರಜಾವಾಣಿ ಚಿತ್ರ/ಸತೀಶ್‌ ಬಡಿಗೇರ
ದಾವಣಗೆರೆಯ ಹದಡಿ ರಸ್ತೆಯಲ್ಲಿ ನಡೆದಿರುವ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಗಾಂಧಿ ವೃತ್ತದಲ್ಲಿ ಯೂರೋಪಿಯನ್ ಮಾದರಿ ಅಭಿವೃದ್ಧಿಗೆ ನಡೆದಿರುವ ಕಾಮಗಾರಿ–ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.