ADVERTISEMENT

ಸಂತೇಬೆನ್ನೂರು: ಬಹೂಪಯೋಗಿ ಸ್ವಯಂ ಚಾಲಿತ ಹವಾಮಾನ ಘಟಕ

ರೈತರಿಗೆ ಬೆಳೆಗೆ ನೀರಿನ ಪೂರೈಕೆ, ಮಳೆ ಮುನ್ಸೂಚನೆ, ಗಾಳಿಯ ವೇಗದ ಬಗ್ಗೆ ಮಾಹಿತಿ

ಕೆ.ಎಸ್.ವೀರೇಶ್ ಪ್ರಸಾದ್
Published 6 ಮಾರ್ಚ್ 2025, 7:03 IST
Last Updated 6 ಮಾರ್ಚ್ 2025, 7:03 IST
ಸಂತೇಬೆನ್ನೂರು ಸಮೀಪದ ದೊಡ್ಡಬ್ಬಿಗೆರೆ ರೈತ ಜಿ.ಕೆ.ಪ್ರಸನ್ನಕುಮಾರ್ ತಮ್ಮ ಡ್ರ್ಯಾಗನ್ ಹಣ್ಣಿನ ತೋಟಕ್ಕೆ ಅಳವಡಿಸಿಕೊಂಡ ಸ್ವಯಂಚಾಲಿತ ಹವಾಮಾನ ಘಟಕ
ಸಂತೇಬೆನ್ನೂರು ಸಮೀಪದ ದೊಡ್ಡಬ್ಬಿಗೆರೆ ರೈತ ಜಿ.ಕೆ.ಪ್ರಸನ್ನಕುಮಾರ್ ತಮ್ಮ ಡ್ರ್ಯಾಗನ್ ಹಣ್ಣಿನ ತೋಟಕ್ಕೆ ಅಳವಡಿಸಿಕೊಂಡ ಸ್ವಯಂಚಾಲಿತ ಹವಾಮಾನ ಘಟಕ   

ಸಂತೇಬೆನ್ನೂರು: ಲೋಹವೊಂದರಿಂದ ಸಿದ್ಧಪಡಿಸಲಾದ ಸ್ಥಾವರದಲ್ಲಿ ಬಹು ವಿಧದ ಡಿಜಿಟಲ್ ಉಪಕರಣ ಅಳವಡಿಕೆ ನೆರವಿನೊಂದಿಗೆ  ಬಹುಪಯೋಗಿ ಮಾಹಿತಿ ಪೂರೈಸುವ ಸ್ವಯಂ ಚಾಲಿತ ‘ಹವಾಮಾನ ಘಟಕ’ವು ರೈತಸ್ನೇಹಿ ಆಗುವ ಭರವಸೆ ಮೂಡಿಸಿದೆ.

ಮಣ್ಣಿನಲ್ಲಿನ ತೇವಾಂಶದ ಮಾಹಿತಿ, ಗಾಳಿಯಲ್ಲಿನ ಆರ್ದ್ರತೆ, ಮಳೆಯ ಮಾಪನ, ಮಳೆಯ ಮುನ್ಸೂಚನೆ, ಗಾಳಿಯ ವೇಗ, ಬೆಳೆಗಳಿಗೆ ಎದುರಾಗುವ ರೋಗ ಬಾಧೆಯ ಮುನ್ಸೂಚನೆ, ಗಾಳಿ ಚಲಿಸುವ ದಿಕ್ಕಿನ ಮಾಹಿತಿಯನ್ನು ಕಾಲಕಾಲಕ್ಕೆ ಈ ಘಟಕ ದಾಖಲಿಸುತ್ತದೆ.

ರೈತರಿಗೆ ಅಗತ್ಯವಿರುವ ಈ ಎಲ್ಲ ಮಾಹಿತಿಯನ್ನು ಅರಿಯಲು ಮೊಬೈಲ್‌ಗಳಿಗೆ ‘ಫಸಲ್’ ಎಂಬ ಹೆಸರಿನ ಆ್ಯಪ್ ನೆರವಾಗಲಿದೆ.

ADVERTISEMENT

ರೈತರು ತಮ್ಮ ಹೊಲದಲ್ಲಿನ ಬೆಳೆಯನ್ನು ಆ್ಯಪ್‌ನಲ್ಲಿ ನಮೂದಿಸಬೇಕು. ಬೆಳೆಗೆ ನೀರಿನ ಪೂರೈಕೆ ಬಗ್ಗೆ ಮಾಹಿತಿ ಆ ಆ್ಯಪ್ ನೀಡುತ್ತದೆ. ಮಣ್ಣಿನಲ್ಲಿನ ತೇವಾಂಶದ ಮಾಹಿತಿಗೆ ಭೂಮಿಯಲ್ಲಿ ಪ್ರೈಮರಿ ಹಾಗೂ ಸೆಕಂಡರಿ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಬೆಳೆಗೆ ನೀರು ಹೆಚ್ಚು ನೀಡಿದರೆ ಬೆಳವಣಿಗೆ ಕುಂಠಿತ ಎಂಬ ಮಾಹಿತಿ ನೀಡುತ್ತದೆ. ಕಡಿಮೆ ಆದರೆ ನೀರು ಪೂರೈಕೆ ಮಾಹಿತಿಯೂ ಈ ಆ್ಯಪ್ ಮೂಲಕ ಸಿಗುತ್ತದೆ.

‘ರೋಗ ಬಾಧೆ ಲಕ್ಷಣಗಳಿದ್ದರೆ 15 ದಿನ ಮುಂಚೆಯೇ ಸಂಬಂಧಿಸಿದ ಕೀಟಗಳ ಮಾಹಿತಿ ಸಿಗುತ್ತದೆ. ಔಷಧ ಸಿಂಪಡಣೆಗೆ ಸಕಾಲ ಯಾವುದು ಎಂಬ ಬಗ್ಗೆ ಇಲ್ಲಿಂದಲೇ ತಿಳಿಯುತ್ತದೆ. ಮಳೆ ಬರುವ ಮುನ್ಸೂಚನೆ 15 ದಿನಗಳ ಮುಂಚಿತವಾಗಿಯೇ ಸಿಗಲಿದೆ’ ಎನ್ನುತ್ತಾರೆ ತಮ್ಮ ತೋಟದಲ್ಲಿ ಘಟಕ ಸ್ಥಾಪಿಸಿರುವ ದೊಡ್ಡಬ್ಬಿಗೆರೆ ಪ್ರಗತಿ ಪರ ರೈತ ಜಿ.ಕೆ. ಪ್ರಸನ್ನಕುಮಾರ್.

ವಿವಿಧ ಬಗೆಯ ಡಿಜಿಟಲ್ ಉಪಕರಣಗಳ ಹವಾಮಾನ ಘಟಕ

‘ಸ್ಥಾವರದ 1 ಕಿ.ಮೀ. ಸುತ್ತಲಿನ ಮಾಹಿತಿಯನ್ನು ಸ್ವಯಂ ಚಾಲಿತ ಹವಾಮಾನ ಘಟಕ ನೀಡಲಿದೆ. ಇನ್ನೊಂದು ಬೆಳೆ ಬಗ್ಗೆ ಪೂರಕ ಮಾಹಿತಿ ಬೇಕೆಂದರೆ ಉಪ ಘಟಕ ಸ್ಥಾಪನೆಗೆ ಅವಕಾಶವಿದೆ. ರಾಜ್ಯದ ಫಸಲ್ ಎಂಬ ಕಂಪನಿ ಈ ಘಟಕವನ್ನು ಅಭಿವೃದ್ಧಿಪಡಿಸಿದೆ. ತೋಟಗಾರಿಕಾ ಇಲಾಖೆಯ ಪ್ರೋತ್ಸಾಹದಿಂದ ತಾಲ್ಲೂಕಿನಲ್ಲಿ ಮೊದಲ ಘಟಕ ಸ್ಥಾಪನೆ ಮಾಡಿದ್ದೇನೆ. ಘಟಕ ಸ್ಥಾಪನೆಗೆ ₹ 40,000 ವೆಚ್ಚ ತಗುಲಲಿದೆ. ತೋಟಗಾರಿಕಾ ಇಲಾಖೆ ಶೇ 50ರಷ್ಟು ಸಬ್ಸಿಡಿ ನೀಡಿದೆ. ಹಲವು ಪರಿಪಕ್ವ ಮಾಹಿತಿ ಆ್ಯಪ್ ಮೂಲಕ ಪಡೆಯುತ್ತಿರುವುದು ಸಂತಸ ನೀಡಿದೆ.  ಸದ್ಯ ಡ್ರ್ಯಾಗನ್ ಫ್ರೂಟ್ ಬೆಳೆಗೆ ಘಟಕ ಆಳವಡಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

‘ತೋಟಗಾರಿಕೆ ಇಲಾಖೆಯ ಅಧಿಕೃತ ಸರಬರಾಜುದಾರ ಕಂಪನಿಯೇ ಫಸಲ್. ರೈತ ಸ್ನೇಹಿ ಆ್ಯಪ್ ಆಧಾರಿತ ಸ್ವಯಂ ಚಾಲಿತ ಹವಾಮಾನ ಘಟಕವನ್ನು ಪ್ರಾಯೋಗಿಕವಾಗಿ ತಾಲ್ಲೂಕಿನ ಇಬ್ಬರು ರೈತರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿಯೇ ಇದು ಮೊದಲ ಪ್ರಯತ್ನ. ಭವಿಷ್ಯದಲ್ಲಿ ರೈತರು ಅಳವಡಿಸುವ ಆಸಕ್ತಿ ತೋರಿದರೆ ಹೆಚ್ಚು ಘಟಕ ಪೂರೈಕೆಗೆ ಪ್ರೋತ್ಸಾಹಿಸಲಾಗುವುದು. ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಬಹುಪಯೋಗಿ ಆಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಹಿರಿಯ ತೋಟಗಾರಿಕಾ ಅಧಿಕಾರಿ ಕೆ.ಎಸ್. ಶ್ರೀಕಾಂತ್.

ಆ್ಯಪ್‌ನಲ್ಲಿ ಲಭ್ಯವಾದ ಮಣ್ಣಿನ ತೇವಾಂಶ ಮಾಹಿತಿ
ಕೆ.ಎಸ್.ಶ‍್ರೀಕಾಂತ್
ಫಸಲ್ ಕಂಪನಿ ಒಂದು ವರ್ಷ ಉಚಿತ ಸೇವೆ ನೀಡಲಿದೆ. ನಂತರ ವರ್ಷಕ್ಕೆ ₹ 6000 ಶುಲ್ಕ ವಿಧಿಸಲಿದೆ. ಬೆಳೆಗೆ ನೀರು ಒದಗಿಸುವ ಹಲವು ಗೊಂದಲಗಳಿಗೆ ಸಮಗ್ರ ಮಾಹಿತಿ ನೀಡುವುದು ಆತ್ಮವಿಶ್ವಾಸ ಮೂಡಿಸಿದೆ. ಸೋಲಾರ್ ಪ್ಲೇಟ್‌ಗಳ ಮೂಲಕ ಅಗತ್ಯ ವಿದ್ಯುತ್ ಉತ್ಪಾದಿಸಿಕೊಳ್ಳಲಿದೆ
ಜಿ.ಕೆ. ಪ್ರಸನ್ನಕುಮಾರ್ ರೈತ ದೊಡ್ಡಬ್ಬಿಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.