
ದಾವಣಗೆರೆ: ಭಾರಿ ಚಳಿ, ಶೀತದ ವಾತಾವರಣದ ಪರಿಣಾಮವಾಗಿ ಎಳನೀರು ಬೆಲೆ ಕುಸಿದಿದೆ. ₹50ಕ್ಕೆ ಮಾರಾಟವಾಗುತ್ತಿದ್ದ ಎಳನೀರು ಈಗ ಒಂದಕ್ಕೆ ₹30–₹25ಕ್ಕೆ ಇಳಿದಿದೆ. ಹೊರ ರಾಜ್ಯಗಳಿಗೆ ಎಳನೀರು ರವಾನೆ ಬಹುತೇಕ ಸ್ಥಗಿತಗೊಂಡಿದೆ.
ರಾಜ್ಯದಲ್ಲಿ 5.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, 4.73 ಲಕ್ಷ ಹೆಕ್ಟೇರ್ ಪ್ರದೇಶ ಕಪ್ಪುತಲೆ ಹುಳು ಬಾಧೆಯಿಂದ ನಲುಗಿದೆ. ಇಳುವರಿ ಕುಸಿದರೂ ಈಚಿನ ವರ್ಷಗಳಲ್ಲಿ ಎಳನೀರು ಬೆಲೆ ಇಷ್ಟು ಕಡಿಮೆಯಾಗಿರಲಿಲ್ಲ. ಡಿಸೆಂಬರ್‌ನಲ್ಲಿ ತಾಪಮಾನದಲ್ಲಿ ಆಗಿರುವ ಬದಲಾವಣೆ ಎಳನೀರು ದರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಶೀತಗಾಳಿಯಿಂದ ರಾಜ್ಯದಲ್ಲಿ ಚಳಿ ಹೆಚ್ಚಿದೆ. ಮೋಡಕವಿದ ವಾತಾವರಣವಿದ್ದಾಗ ಚಳಿಯ ತೀವ್ರತೆ ಇನ್ನೂ ಹೆಚ್ಚಾಗಿತ್ತು. ಬಿಸಿಲಿನ ತಾಪಮಾನ ಹೆಚ್ಚಿರುವ ಪ್ರದೇಶದಲ್ಲಿಯೂ ಕುಳಿರ್ಗಾಳಿ ಬೀಸುತ್ತಿದೆ. ಇದರಿಂದ ಎಳನೀರಿಗೆ ಬೇಡಿಕೆ ಕುಸಿದಿದೆ. ಆದರೆ, ತೆಂಗಿನ ಕಾಯಿ ಹಾಗೂ ಒಣಕೊಬ್ಬರಿ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ.
ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ ಸೇರಿದಂತೆ ವಿವಿಧೆಡೆಯ ಎಳನೀರಿಗೆ ಹೊರ ರಾಜ್ಯಗಳಲ್ಲಿ ಬೇಡಿಕೆ ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ರವಾನೆ ಆಗುತ್ತದೆ. ಡಿಸೆಂಬರ್ ಮೊದಲ ವಾರದಿಂದ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಬೆಳೆಗಾರರು ‘ಪ್ರಜಾವಾಣಿ’ಗೆ ತಿಳಿಸಿದರು.
ತೆಂಗಿನ ತೋಟಗಳನ್ನು ಗುತ್ತಿಗೆ ಪಡೆದ ಸಗಟು ವ್ಯಾಪಾರಿಗಳು ಎಳನೀರು ಮಾರಲು ಕಷ್ಟಪಡುತ್ತಿದ್ದಾರೆ. ರಸ್ತೆ ಬದಿಯಲ್ಲಿ ಸರಕುಸಾಗಣೆ ವಾಹನ ನಿಲುಗಡೆ ಮಾಡಿ ₹25–₹30ಕ್ಕೆ ಎಳನೀರು ಮಾರುತ್ತಿದ್ದಾರೆ. ತೋಟಗಳನ್ನು ಗುತ್ತಿಗೆ ಪಡೆದ ಇವರು ಪ್ರತಿ ಎಳನೀರನ್ನು ₹15ರಿಂದ ₹20ಕ್ಕೆ ಖರೀದಿಸುತ್ತಿದ್ದಾರೆ. ಸಾಗಣೆ, ಕೂಲಿ ಲೆಕ್ಕಹಾಕಿ ಅಸಲು ದರಕ್ಕೆ ಮಾರುತ್ತಿದ್ದಾರೆ.
ತೆಂಗು ಬೆಳೆಗೆ ಕಪ್ಪುತಲೆ ಹುಳು ಹಾಗೂ ಬಿಳಿ ನೊಣಗಳ ಬಾಧೆ ಕಾಣಿಸಿಕೊಂಡ ಬಳಿಕ ಇಳುವರಿ ಭಾರಿ ಕಡಿಮೆಯಾಗಿದೆ. ಒಂದು ವರ್ಷದಿಂದ ಎಳನೀರು, ಒಣಕೊಬ್ಬರಿ ಹಾಗೂ ತೆಂಗಿನ ಕಾಯಿ ದರ ಏರಿಕೆ ಕಂಡಿತ್ತು. ತೆಂಗು ಬೆಳೆವ ಪ್ರದೇಶದಲ್ಲಿ ಪ್ರತಿ ಎಳನೀರು ₹50ಕ್ಕೆ ಮಾರಾಟವಾಗುತ್ತಿತ್ತು. ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ₹40ಕ್ಕೆ ಇಳಿದಿದ್ದ ಬೆಲೆ ನವೆಂಬರ್‌ನಲ್ಲಿ ಮತ್ತೆ ಏರಿಕೆಯಾಗಿತ್ತು.
ಚಳಿ ಶೀತದ ವಾತಾವರಣದಿಂದ ಎಳನೀರು ಬೇಡಿಕೆ ಕುಸಿದಿದೆ. ಹೊರರಾಜ್ಯಕ್ಕೆ ರವಾನೆಯಾಗುವುದು ನಿಂತಿದೆ. ಹೀಗಾಗಿ ಬೆಲೆ ಕಡಿಮೆಯಾಗಿದ್ದು ಜ.15ರ ಬಳಿಕ ಮತ್ತೆ ಏರಿಕೆ ಆಗಲಿದೆಗಣೇಶ್ ನಾಗನೂರು ಎಳನೀರು ವ್ಯಾಪಾರಿ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.