
ಚನ್ನಗಿರಿ: ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ನಿರ್ಮಿಸುತ್ತಿರುವ ಶೀತಲೀಕರಣ ಘಟಕದ ಕಾಮಗಾರಿ ಆರಂಭಗೊಂಡು ಮೂರೂವರೆ ವರ್ಷವಾದರೂ ಉದ್ಘಾಟನೆ ಆಗದ್ದರಿಂದ ಕೃಷಿಕರು ಅದರ ಸದುಪಯೋಗ ಪಡೆದುಕೊಳ್ಳುವದರಿಂದ ವಂಚಿತರಾಗುವಂತಾಗಿದೆ.
ತಾಲ್ಲೂಕಿನಲ್ಲಿ ದೇವರಹಳ್ಳಿ ಗ್ರಾಮದ ಸುತ್ತಮುತ್ತ ತರಕಾರಿ ಹಾಗೂ ಸೊಪ್ಪುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ದರ ಕುಸಿತದ ಸಂದರ್ಭದಲ್ಲಿ ರೈತರ ಬೆಳೆಗಳನ್ನು ಸ್ವಲ್ಪ ದಿನ ಕೆಡದಂತೆ ಇಡುವ ಸಲುವಾಗಿ 2022- 2023ರಲ್ಲಿ ಘಟಕ ಪ್ರಾರಂಭಿಸಲು ₹ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣ ಅಳವಡಿಕೆಗಾಗಿ ಅಗತ್ಯ ಅನುದಾನ ದೊರೆಯದೇ ರೈತರಿಗೆ ಅನುಕೂಲ ಆಗುತ್ತಿಲ್ಲ.
ಕಾಮಗಾರಿ ಆರಂಭಗೊಂಡು 2 ವರ್ಷ ಭರದಿಂದ ಸಾಗಿತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸ್ವಲ್ಪ ದಿನ ಕಾಮಗಾರಿ ಸ್ಥಗಿತಗೊಂಡಿತ್ತು. ನಂತರ ಮತ್ತೆ ನಿಧಾನಗತಿಯಲ್ಲಿ ಸಾಗಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಶೀತಲೀಕರಣ ಘಟಕಕ್ಕೆ ಅಗತ್ಯವಾದ ಯಂತ್ರೋಪಕರಣಗಳಿಗೆ ಅಗತ್ಯವಿರುವ ₹ 3.50 ಕೋಟಿ ಅನುದಾನ ಬಿಡುಗಡೆಗಾಗಿ ಕೃಷಿ ಇಲಾಖೆ ಪ್ರಸ್ತಾವ ಸಲ್ಲಿಸಿದೆ. ಒಂದು ವರ್ಷವಾದರೂ ಅನುದಾನ ಬಿಡುಗಡೆಯಾಗದ್ದರಿಂದ ಘಟಕ ಆರಂಭವಾಗುತ್ತಿಲ್ಲ. ರೈತರು ಮಾತ್ರ ಚಾತಕಪಕ್ಷಿಯಂತೆ ಕಾಯುತ್ತಲೇ ಇರುವಂತಾಗಿದೆ.
‘ನಮ್ಮ ಗ್ರಾಮ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ತರಕಾರಿ, ಸೊಪ್ಪನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ತರಕಾರಿ ಕೆಡದಂತೆ ಸಂರಕ್ಷಿಸಲು ಶೀತಲೀಕರಣ ಘಟಕ ಬೇಕು. ಆದರೆ ಇದುವರೆಗೆ ಈ ಘಟಕ ಕಾರ್ಯಾರಂಭ ಮಾಡದೇ ಇರುವುದು ರೈತರನ್ನು ಭ್ರಮನಿರಸನಗೊಳಿಸಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶೀಘ್ರವೇ ಘಟಕ ಸಿದ್ಧಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಸರ್ಕಾರ ಅಗತ್ಯ ಅನುದಾನ ನೀಡಬೇಕು’ ಎಂದು ದೇವರಹಳ್ಳಿ ಗ್ರಾಮದ ರೈತ ರಂಗಪ್ಪ ಒತ್ತಾಯಿಸಿದರು.
‘ದೇವರಹಳ್ಳಿ ಗ್ರಾಮದಲ್ಲಿ ಈಗಾಗಲೇ ಕಟ್ಟಡ ನಿರ್ಮಾಣವಾಗಿದೆ. ಶೀತಲಿಕರಣ ಘಟಕದ ಒಳಗೆ ಅಳವಡಿಸುವ ಯಂತ್ರೋಪಕರಣಗಳಿಗೆ ಅನುದಾನ ಬೇಕಾಗಿದ್ದು, ಅದಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಎರಡು ಮೂರು ತಿಂಗಳಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು. ರೈತರಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು’ ಎಂದು ಕಾಮಗಾರಿ ಮೇಲುಸ್ತುವಾರಿ ಅಧಿಕಾರಿ ಕರ್ನಾಟಕ ಗೃಹಮಂಡಳಿಯ ಗಣೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.