ADVERTISEMENT

ಷಟ್ಪಥ ಕಾಮಗಾರಿ ಚುರುಕುಗೊಳಿಸಿ: ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 16:12 IST
Last Updated 6 ಡಿಸೆಂಬರ್ 2018, 16:12 IST
ಜಿ.ಎಂ. ಸಿದ್ದೇಶ್ವರ
ಜಿ.ಎಂ. ಸಿದ್ದೇಶ್ವರ   

ದಾವಣಗೆರೆ: ಚಿತ್ರದುರ್ಗ–ದಾವಣಗೆರೆ–ಹರಿಹರ–ಹುಬ್ಬಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಷಟ್ಪಥ ಕಾಮಗಾರಿಯನ್ನು ಚುರುಕುಗೊಳಿಸಿ, ಜನರಿಗೆ ತೊಂದರೆಯಾಗದಂತೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಎಂ.ಐ.ಟಿ. ಅತಿಥಿಗೃಹದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.

‘ಷಟ್ಪಥ ಕಾಮಗಾರಿ ವೇಳೆ ಹಳ್ಳಿಗಳ ಬಳಿ ಕೆಲಸ ಮಾಡಲು ಜನ ಅಡ್ಡಿಪಡಿಸುತ್ತಿದ್ದಾರೆ’ ಎಂಬ ಅಧಿಕಾರಿಗಳ ಮಾತಿಗೆ ಪ್ರತಿಕ್ರಿಯಿಸಿದ ಸಂಸದರು, ‘ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಿ. ಚತುಷ್ಪಥ ಕಾಮಗಾರಿ ವೇಳೆ ಪ್ರಾಧಿಕಾರದ ಅಧಿಕಾರಿಗಳು ಲೋಪ ಎಸಗಿದ್ದಾರೆ. ಅದನ್ನು ಷಟ್ಪಥ ಕಾಮಗಾರಿ ವೇಳೆ ಸರಿಪಡಿಸಿ’ ಎಂದು ಸೂಚಿಸಿದರು.

ADVERTISEMENT

‘ನಾನು ಗ್ರಾಮಸ್ಥರ ಪರವಾಗಿ ನಿಲ್ಲುತ್ತೇನೆ ಹೊರತು, ಪ್ರಾಧಿಕಾರದ ಪರವಾಗಿ ಇರುವುದಿಲ್ಲ. ನಿಮ್ಮ ತಪ್ಪಿನಿಂದ ಸಾವು–ನೋವು ಸಂಭವಿಸಿವೆ. ಜನರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ನಿಮ್ಮ ಕೈಯಿಂದ ಹಣ ಹಾಕುವುದಿಲ್ಲ. ಸರ್ಕಾರ ಅನುದಾನ ನೀಡುತ್ತದೆ. ಸಮಸ್ಯೆ ಎದುರಾದರೆ ನನ್ನ ಗಮನಕ್ಕೆ ತನ್ನಿ. ಸಚಿವರಿಗೆ ಹೇಳಿ ಮಂಜೂರು ಮಾಡಿಸಿಕೊಡುತ್ತೇನೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಬನಶಂಕರಿ ಬಡಾವಣೆಗೆ ಹೋಗುವ ಸೇತುವೆ ವಿಸ್ತರಣೆ, ಎರಡೂ ಕಡೆಗಳಲ್ಲಿ ಸರ್ವೀಸ್‌ ರಸ್ತೆ, ಹೊಸಕುಂದುವಾಡ ಹಾಗೂ ಹಳೆ ಕುಂದುವಾಡದ ಬಳಿ ಹೊಸ ಸೇತುವೆ ನಿರ್ಮಾಣಕ್ಕೆ ಪ್ರಾಧಿಕಾರದ ಅಧಿಕಾರಿಗಳು ಸಮ್ಮತಿ ಸೂಚಿಸಿದರು.

ಶಾಮನೂರು ಬಳಿ ಮಳೆಯಾದಾಗ ರಾಚಪ್ಪನ ಬೀಳು ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಇದಕ್ಕೆ ಏನು ಪರಿಹಾರ ಕೈಗೊಂಡಿದ್ದೀರಿ ಎಂದು ಸಂಸದರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ‘ಪ್ರಾಧಿಕಾರದವರು ನೀರು ಹರಿದು ಹೋಗಲು ಪೈಪ್‌ಗಳನ್ನು ಹಾಕಿದ್ದಾರೆ. ಇದರ ಬದಲು ಕಲ್ವರ್ಟ್‌ ನಿರ್ಮಿಸಿಕೊಡಬೇಕು’ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸ್ ನಾಯ್ಡು, ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ್‌, ಪಾಲಿಕೆ ಅಧಿಕಾರಿಗಳಾದ ಅಣಜಿ ನಾಗರಾಜ್, ಮಂಜುನಾಥ್, ವಿಶೇಷ ಭೂ ಸ್ವಾಧೀನಾಧಿಕಾರಿ ಬಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.