ADVERTISEMENT

ಸವಾಲು ಎದುರಿಸಲು ಆತ್ಮವಿಶ್ವಾಸ ಮುಖ್ಯ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 15:40 IST
Last Updated 23 ಮಾರ್ಚ್ 2025, 15:40 IST
ದಾವಣಗೆರೆಯ ಬಿಐಇಟಿ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಪಾರ್ವತಿ’ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಬಿಐಇಟಿ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಪಾರ್ವತಿ’ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಮಹಿಳೆಯರ ಬದುಕಿನಲ್ಲಿ ಪ್ರತಿದಿನವೂ ಸವಾಲು, ಅನಿರೀಕ್ಷಿತ ಸಂದರ್ಭಗಳು ಎದುರಾಗುತ್ತವೆ. ಇವುಗಳನ್ನು ದಿಟ್ಟವಾಗಿ ಎದುರಿಸಲು ಮಹಿಳೆಯರು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಪ್ರಾಯಪಟ್ಟರು.

ಇಲ್ಲಿನ ಬಿಐಇಟಿ ಕಾಲೇಜಿನ ಸಾಂಸ್ಕೃತಿಕ ಭವನದಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ‘ಪಾರ್ವತಿ–ಕ್ರೀಡೋತ್ಸವ, ಕಲೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಬಾಹ್ಯಾಕಾಶ ನಿಲ್ದಾಣಕ್ಕೆ 9 ದಿನಗಳಿಗೆ ತೆರಳಿದ್ದರು. ಅನಿವಾರ್ಯವಾಗಿ ಅವರು 9 ತಿಂಗಳು ಅಲ್ಲಿಯೇ ಇರಬೇಕಾಯಿತು. ಅವರಂತೆ ಎಲ್ಲ ಮಹಿಳೆಯರು ಧೈರ್ಯ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಟೀಕೆಗಳಿಗೆ ಹತಾಷರಾಗಬಾರದು. ನಮ್ಮೊಳಗಿನ ಶಕ್ತಿಯ ಬಗ್ಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶಕ್ತಿ, ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಬಗ್ಗೆ ಅರಿವು ಹೊಂದಿರಬೇಕು’ ಎಂದು ಹೇಳಿದರು.

‘ಪದವಿ ಪೂರ್ಣಗೊಂಡ ಬಳಿಕವೂ ಕಲಿಕೆ ನಿರಂತರವಾಗಿರಬೇಕು. ಶಿಕ್ಷಣ ಮತ್ತು ಸಮಾಜ ಕಲಿಸುವ ಪಾಠಗಳಿಗೆ ಜೀವನ ಇನ್ನಷ್ಟು ಪರಿಪಕ್ವತೆ ಪಡೆದುಕೊಳ್ಳಲು ಸಾಧ್ಯವಿದೆ. ಹಿರಿಯರ ಜೀವನ ಶೈಲಿ, ದಿನಚರಿಯನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದರು.

ಮಹಿಳೆ ಒತ್ತಡ ನಿವಾರಣೆಗಾಗಿ ಯೋಗ, ಧ್ಯಾನದತ್ತ ಒಲವು ಬೆಳೆಸಿಕೊಳ್ಳಬೇಕು. ಸಂಗೀತ ಆಲಿಸುವುದರಿಂದಲೂ ಒತ್ತಡದಿಂದ ಹೊರಬರಲು ಸಾಧ್ಯವಿದೆ. ಜೀವನ ಮೌಲ್ಯ, ಸಂಚಾರ ನಿಯಮ ಸೇರಿ ಹಲವು ವಿಚಾರಗಳ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಮೂಢನಂಬಿಕೆಗಳನ್ನು ತೊರೆದು ಜೀವನ ರೂಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕಾರ್ಪೊರೇಟ್ ತರಬೇತುಗಾರ್ತಿ ಡಾ.ಪ್ರೀಜಾ ಶ್ರೀಧರ್, ಜೆಜೆಎಂ ವೈದ್ಯಕೀಯ ಕಾಲೇಜು ಪ್ರಾಂಶುಪಾಲೆ ಡಾ.ಶುಕ್ಲಾ ಶೆಟ್ಟಿ, ಎಸ್‌.ಎಸ್‌.ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ಶಶಿಕಲಾ ಕೃಷ್ಣಮೂರ್ತಿ, ಎವಿಕೆ ಕಾಲೇಜು ಪ್ರಾಂಶುಪಾಲೆ ಕಮಲಾ ಸೊಪ್ಪಿನ್, ಬಾಪೂಜಿ ಶಾಲೆ ಪ್ರಾಂಶುಪಾಲೆ ಜೆ.ಎಸ್.ವನಿತಾ, ಪ್ರಾಧ್ಯಾಪಕಿ ಡಾ.ಎಚ್.ಪಿ.ವಿನುತಾ ಹಾಜರಿದ್ದರು.

ದಾವಣಗೆರೆಯ ಬಿಐಇಟಿ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಪಾರ್ವತಿ’ ಕಾರ್ಯಕ್ರಮದಲ್ಲಿ ಯುವತಿಯರ ನೃತ್ಯ ಗಮನ ಸೆಳೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.