ಜಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದ ಆಡಳಿತ ಯಂತ್ರ ಕುಸಿತಗೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಪಟ್ಟಣಕ್ಕೆ ಬುಧವಾರ ಬಂದಿದ್ದ ಅವರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆಯೇ ಹೊರತು ಉಳಿದ ಸಮುದಾಯಗಳ ಅಭಿವೃದ್ಧಿಗೆ ಒತ್ತು ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದ್ದು, ಸರ್ಕಾರ ಬದುಕಿದ್ದೂ ಸತ್ತಂತಾಗಿದೆ’ ಎಂದು ಹರಿಹಾಯ್ದರು.
‘ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಅರ್ಥಹೀನ ಚರ್ಚೆಗಳು ನಡೆಯುತ್ತಿವೆ. ರಾಜ್ಯದ ಜನತೆ ನಮಗೆ ಪ್ರತಿಪಕ್ಷದ ಸ್ಥಾನ ಕೊಟ್ಟಿದ್ದಾರೆ. ಅದನ್ನು ನಾವು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದೇವೆ’ ಎಂದು ಹೇಳಿದರು.
‘ರೈತರು ಬೆಳೆದ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಹಾಗೂ ಸಮಗ್ರ ನೀರಾವರಿ ಯೋಜನೆಗಳ ಜಾರಿ ಸೇರಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.
ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಮುಖಂಡರಾದ ಕಡ್ಲೆಬಾಳು ಧನಂಜಯ್, ಅನಿಲ್ ಕುಮಾರ್ ನಾಯ್ಕ, ಮಂಡಲ ಅಧ್ಯಕ್ಷ ಎ.ಎಂ. ಆರಾಧ್ಯ, ಎಚ್.ಸಿ. ಮಹೇಶ್, ಸೊಕ್ಕೆ ನಾಗರಾಜ್, ಬಿಸ್ತುವಳ್ಳಿ ಬಾಬು, ರವಿಕುಮಾರ್, ಪೂಜಾರ ಸಿದ್ದಪ್ಪ, ಬೇವಿನಹಳ್ಳಿ ಕೆಂಚನಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.