
ದಾವಣಗೆರೆ: ‘ಮನರೇಗಾ ಯೋಜನೆಯ ಹೆಸರು ಬದಲಾಯಿಸುವ ಮೂಲಕ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಯನ್ನೇ ನಾಶ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ತಕ್ಷಣವೇ ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆಗ್ರಹಿಸಿದರು.
ನಗರದ ಜಯದೇವ ವೃತ್ತದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಶನಿವಾರ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. ಮನರೇಗಾ ಯೋಜನೆಯ ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಾಯಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಗ್ರಾಮೀಣ ಭಾಗದ ರೈತರು, ಕಾರ್ಮಿಕರಿಗೆ ಉದ್ಯೋಗ ಸಿಗುವಂತಾಗಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ 2005ರಲ್ಲಿ ಯುಪಿಎ ಸರ್ಕಾರ ಮನರೇಗಾ ಯೋಜನೆ ಜಾರಿಗೊಳಿಸಿತ್ತು. ಇದೀಗ ಬಿಜೆಪಿ ಸರ್ಕಾರ ಯೋಜನೆಯ ಹೆಸರು ಹಾಗೂ ಅದರ ಸ್ವರೂಪವನ್ನು ಬದಲಾಯಿಸಿದೆ. ಇದರಿಂದ ಬಡವರಿಗೆ ಅನ್ಯಾಯವಾಗಲಿದೆ’ ಎಂದು ದೂರಿದರು.
‘ಭಾರತದ ಆತ್ಮ ಇರುವುದೇ ಗ್ರಾಮೀಣ ಪ್ರದೇಶಗಳಲ್ಲಿ. ಗ್ರಾಮೀಣ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ ಬದಲಿಸುವ ಮೂಲಕ ಭಾರತದ ಆತ್ಮವನ್ನೇ ಬದಲಿಸಲು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿದೆ’ ಎಂದು ಕಿಡಿಕಾರಿದರು.
‘ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಕೇಂದ್ರ ಚುನಾವಣಾ ಆಯೋಗವು ಅವಸರದಲ್ಲಿ ಮತದಾರರ ಪಟ್ಟಿ ತೀವ್ರ ವಿಶೇಷ ಪರಿಷ್ಕರಣೆ ನಡೆಸುತ್ತಿದೆ. ವೋಟ್ ಚೋರಿ ಬಗ್ಗೆ ಜನರಿಗೂ ಮಾಹಿತಿ ಇದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಾಖಲೆ ಸಮೇತ ಮಾತನಾಡುತ್ತಿದ್ದರೂ, ಚುನಾವಣಾ ಆಯೋಗ ಸಮರ್ಥವಾಗಿ ಉತ್ತರ ನೀಡಿಲ್ಲ’ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
‘ಉದ್ಯೋಗ ಖಾತ್ರಿ ಯೋಜನೆಗೆ ಇದುವರೆಗೂ ಕೇಂದ್ರ ಸರ್ಕಾರವೇ ಪೂರ್ಣ ಅನುದಾನ ನೀಡುತ್ತಿತ್ತು. ಇದೀಗ ಶೇ 60 ರಷ್ಟು ಕೇಂದ್ರ ಹಾಗೂ ಶೇ 40ರಷ್ಟು ಅನುದಾನವನ್ನು ರಾಜ್ಯ ಸರ್ಕಾರಗಳು ನೀಡಬೇಕಿದೆ. ಮುಂದೊಂದು ದಿನ ರಾಜ್ಯ ಸರ್ಕಾರ ಹಣ ನೀಡಲಿಲ್ಲ ಎಂಬ ನೆಪ ಹೇಳಿ ಈ ಯೋಜನೆಯನ್ನೇ ನಾಶ ಮಾಡುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಆರೋಪಿಸಿದರು.
‘ಬಡವರು, ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ವರವಾಗಿದ್ದ ನರೇಗಾ ಯೋಜನೆಯ ಸ್ವರೂಪವನ್ನೇ ಕೇಂದ್ರ ಸರ್ಕಾರ ಬದಲಾಯಿಸಿರುವುದರ ವಿರುದ್ಧ ಕಾಂಗ್ರೆಸ್ ಜನಾಂದೋಲನದ ರೀತಿ ಹೋರಾಟ ನಡೆಸಲಿದೆ’ ಎಂದು ‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಎ.ನಾಗರಾಜ್, ಅನಿತಾ ಬಾಯಿ, ಮಾಲತೇಶ್ ಜಾಧವ್, ಎಸ್.ನಂಜಾ ನಾಯ್ಕ, ವರುಣ್ ಬೆಣ್ಣೆಹಳ್ಳಿ, ಶುಭಮಂಗಳಾ, ಕವಿತಾ ಚಂದ್ರಶೇಖರ್, ಮೈನುದ್ದೀನ್, ಮುಜಾಹಿದ್ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.
ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥುರಾಮ್ ಗೋಡ್ಸೆ ಮನಃಸ್ಥಿತಿಯವರ ಕೈಯಲ್ಲಿ ಕೇಂದ್ರ ಸರ್ಕಾರದ ಆಡಳಿತವಿದೆ. ಇಂದಿಗೂ ಗಾಂಧೀಜಿ ಹೆಸರನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲಡಿ.ಬಸವರಾಜ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.