
ದಾವಣಗೆರೆ: ಮತಗಳ್ಳತನ ಮಾಡಿದ ಪರಿಣಾಮವಾಗಿ ಹಲವು ವರ್ಷ ದೇಶದಲ್ಲಿ ಆಡಳಿತ ನಡೆಸಲು ಕಾಂಗ್ರೆಸ್‌ಗೆ ಸಾಧ್ಯವಾಗಿದೆ. ಮತಗಳ್ಳತನ ಆರಂಭಿಸಿದ ಕಾಂಗ್ರೆಸ್, ಈ ಕುರಿತು ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
‘ಚುನಾವಣಾ ಅಕ್ರಮದಲ್ಲಿ ಭಾಗಿಯಾದ ಆರೋಪದಿಂದ ತಪ್ಪಿಸಿಕೊಳ್ಳಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಇಂದಿರಾ ಗಾಂಧಿ ಮೊಮ್ಮಗ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಮಾಡುತ್ತಿರುವ ಆರೋಪಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಇವೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಮತಗಳ್ಳತನದ ಆರೋಪ ಮಾಡಿದ ಕಾಂಗ್ರೆಸ್ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದೆ. ಕಾಂಗ್ರೆಸ್‌ಗಿಂತ ಹೆಚ್ಚು ಸಹಿ ಸಂಗ್ರಹಿಸುವ ಸಾಮರ್ಥ್ಯ ಬಿಜೆಪಿಗೆ ಇದೆ. ಆಧಾರರಹಿತ ಆರೋಪ ಮಾಡುವುದನ್ನು ಬಿಟ್ಟು ಸರಿಯಾದ ದಾಖಲೆಗಳನ್ನು ಕೊಡಿ’ ಎಂದು ಸವಾಲು ಹಾಕಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಸಮಾಧಾನ ಸ್ಫೋಟ ಆಗುವ ಹಂತ ತಲುಪಿದೆ. ಬಿಹಾರ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಕರ್ನಾಟಕದ ರಾಜಕೀಯ ಚಿತ್ರಣ ಬದಲಾಗಲಿದೆ. ರಾಜ್ಯ ಸರ್ಕಾರ ಪತನವಾಗಲಿದೆ’ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ರಾಜು ವೀರಣ್ಣ, ಮಂಜುನಾಥ್, ಪ್ರವೀಣ್ ಜಾಧವ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.