ADVERTISEMENT

ಆರ್‌ಟಿಒದಲ್ಲಿ ರಕ್ತದಾನ ಜಾಗೃತಿಗೆ ಸಹಕಾರ

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 3:49 IST
Last Updated 4 ಜುಲೈ 2022, 3:49 IST
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ದಾವಣಗೆರೆಯಲ್ಲಿ ಲೈಫ್‌ಲೈನ್, ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಸ್ವಯಂ ಪ್ರೇರಿತ ರಕ್ತದಾನಿಗಳನ್ನು ಭಾನುವಾರ ಅಭಿನಂದಿಸಲಾಯಿತು. (ನಿಂತವರು ಎಡದಿಂದ ಬಲಕ್ಕೆ), ಪತ್ರಕರ್ತ ಬಿ.ಎನ್‌.ಮಲ್ಲೇಶ್‌, ಅನಿಲ್ ಬಾರಂಗಳ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ್, ಲೈಫ್‌ಲೈನ್ ಅಧ್ಯಕ್ಷ ಎ.ಎಂ.ಶಿವಕುಮಾರ್, ಕಾರ್ಯದರ್ಶಿ ಅನಿಲ್‌ ಬಾರಂಗಳ್ ಇದ್ದಾರೆ –ಪ್ರಜಾವಾಣಿ ಚಿತ್ರ
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ದಾವಣಗೆರೆಯಲ್ಲಿ ಲೈಫ್‌ಲೈನ್, ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಸ್ವಯಂ ಪ್ರೇರಿತ ರಕ್ತದಾನಿಗಳನ್ನು ಭಾನುವಾರ ಅಭಿನಂದಿಸಲಾಯಿತು. (ನಿಂತವರು ಎಡದಿಂದ ಬಲಕ್ಕೆ), ಪತ್ರಕರ್ತ ಬಿ.ಎನ್‌.ಮಲ್ಲೇಶ್‌, ಅನಿಲ್ ಬಾರಂಗಳ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ್, ಲೈಫ್‌ಲೈನ್ ಅಧ್ಯಕ್ಷ ಎ.ಎಂ.ಶಿವಕುಮಾರ್, ಕಾರ್ಯದರ್ಶಿ ಅನಿಲ್‌ ಬಾರಂಗಳ್ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ದಾವಣಗೆರೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರತಿದಿನ 300ರಿಂದ 400 ಮಂದಿ ಭೇಟಿ ನೀಡುತ್ತಿದ್ದು, ಅವರಿಗೆ ರಕ್ತದಾನ, ನೇತ್ರದಾನ ಜಾಗೃತಿ ಮೂಡಿಸಿದರೆ ಅದಕ್ಕೆ ಸಹಕಾರ ನೀಡುತ್ತೇನೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ತಿಳಿಸಿದರು.

ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಲೈಫ್‌ಲೈನ್, ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಇಲ್ಲಿನ ಲಿಟಲ್ ಚಾಂಪ್ಸ್‌ ಶಾಲೆಯಲ್ಲಿ ಭಾನುವಾರ ನಡೆದ ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದಾವಣಗೆರೆಯಲ್ಲಿವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪ್ರತಿ ದಿವಸ 100–120 ದ್ವಿಚಕ್ರ ವಾಹನಗಳು ಹಾಗೂ 30ಕ್ಕೂ ಹೆಚ್ಚು ನಾಲ್ಕು ಚಕ್ರಗಳ ವಾಹನಗಳ ನೋಂದಣಿಯಾಗುತ್ತಿದೆ. ರಾಜ್ಯದಲ್ಲಿ ಪ್ರತಿ ದಿವಸ 6ರಿಂದ 7 ಸಾವಿರ ಬೈಕ್‌ಗಳ ನೋಂದಣಿಯಾಗುತ್ತದೆ. ವಾಹನ ಚಾಲನಾ ಪರವಾನಗಿಗಾಗಿ ಪ್ರತಿ ದಿವಸ ಹಲವು ಮಂದಿ ಭೇಟಿ ನೀಡುತ್ತಾರೆ. ಕಚೇರಿಯಲ್ಲಿ ರಕ್ತದಾನದ ಜಾಗೃತಿ ಫಲಕ ಅಳವಡಿಸಿದರೆ ಎಲ್ಲರಿಗೂ ಜಾಗೃತಿ ಮೂಡುತ್ತದೆ’ ಎಂದು ಹೇಳಿದರು.

ADVERTISEMENT

‘ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಯಾರಿಗೆ ಅಪಘಾತವಾದರೂ ಪೊಲೀಸರು ಹಾಗೂ ಆರ್‌ಟಿಒದವರಿಗೆ ಮಾಹಿತಿ ಬರುತ್ತದೆ. ರಕ್ತದಾನಿಗಳ ಸಮೂಹ ಸೇರಿ ವಿವಿಧ ಸಂಘಸಂಸ್ಥೆಗಳಿಗೆ ಮಾಹಿತಿ ನೀಡಿದರೆ ವ್ಯಕ್ತಿಗಳ ಜೀವ ಉಳಿಸಲು ಸಹಾಯವಾಗುತ್ತದೆ. ಆಗ ನಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ’ ಎಂದು ಹೇಳಿದರು.

‘ರಕ್ತದಾನಿಗಳು ಜೀವದಾನಿಗಳು. ಸೈನಿಕರು ತುರ್ತು ಸಮಯದಲ್ಲಿ ಹಗಲು ರಾತ್ರಿ ಎನ್ನದೇ ದೇಶ ಕಾಯುತ್ತಾರೆ. ಅದೇ ರೀತಿ ತುರ್ತು ಸಮಯದಲ್ಲಿ ರಕ್ತ ನೀಡುವವರು ಯೋಧರಿಗೆ ಸಮಾನ. ರಕ್ತಹೀನತೆ ಇರುವ ಮಹಿಳೆಯರಿಗೆ ರಕ್ತ ನೀಡುವ ಕಾರ್ಯ ನಡೆಯಬೇಕು’ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.

‘ರಕ್ತದಾನದಂತೆ ನೇತ್ರದಾನ ಮಾಡುವವರನ್ನು ಪ್ರೋತ್ಸಾಹಿಸಲು ಲೈಫ್‌ಲೈನ್ ಸಂಸ್ಥೆ ಮಧ್ಯವರ್ತಿಯಂತೆ ಕಾರ್ಯ ನಿರ್ವಹಿಸಲಿದೆ. ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಿದವರನ್ನು ಸೇವೆ ಪಡೆದುಕೊಂಡವರು ಕೃತಜ್ಞತೆ ಸಲ್ಲಿಸುತ್ತಾರೆ. ಅಂತಹವರಿಗೆ ಲೈಫ್‌ಲೈನ್ ಮುಂದಿನ ದಿನಗಳಲ್ಲಿ ವೇದಿಕೆ ಸಿದ್ಧಪಡಿಸಲಿದೆ. ಲೈಫ್‌ಲೈನ್‌ ಸಂಸ್ಥೆಯ ಕಚೇರಿಗೆ ಜಾಗ ಕೊಡಿಸಬೇಕು’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೈಫ್‌ಲೈನ್ ಅಧ್ಯಕ್ಷ ಡಾ.ಎ.ಎಂ. ಶಿವಕುಮಾರ್ ಮನವಿ ಮಾಡಿದರು.

ರಕ್ತ ಭಂಡಾರದ ಅಧಿಕಾರಿಗಳಾದ ಡಾ.ಕವಿತಾ, ಡಾ.ಮಹದೇವಪ್ಪ ಮಾತನಾಡಿದರು.

ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಟಿ.ಎಸ್‌. ಸಿದ್ದಣ್ಣ, ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟಿ ಗೌಡ್ರಚನ್ನಬಸಪ್ಪ, ಲೈಫ್‌ಲೈನ್ ಕಾರ್ಯದರ್ಶಿ ಅನಿಲ್ ಬಾರಂಗಳ್, ಶೇಷಾಚಲ ಇದ್ದರು.

ರಕ್ತದಾನಿಗಳಿಗೆ ಸನ್ಮಾನ

ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ಅವರಲ್ಲಿ 150ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಆದಿಕೇಶವ ಪ್ರಕಾಶ್, ಪೃಥ್ವಿ ಬಾದಾಮಿ (80 ಬಾರಿ) ಅನಿಲ್ ಬಾರಂಗಳ್(82 ಬಾರಿ), ಗಾಯಕ್‌ವಾಡ್ ಸಂತೋಷ್ (69 ಸಾರಿ), ಗೋಪಾಲ ಕೃಷ್ಣ (69 ಬಾರಿ), ಮಹಮ್ಮದ್ ಇನಾಯತ್ ಉಲ್ಲಾ (68 ಬಾರಿ), ರಾಘವೇಂದ್ರ ಚೌಹಾಣ್ (64 ಬಾರಿ) ಅವರನ್ನು ಸನ್ಮಾನಿಸಲಾಯಿತು. ವಿರಳ ರಕ್ತದ ಗುಂಪಾದ ಬಾಂಬೆ ಒ ಪಾಸಿಟಿವ್ ರಕ್ತದಾನ ಮಾಡಿದ ಇಬ್ಬರಿಗೆ ಪ್ರಮಾಣಪತ್ರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.