ADVERTISEMENT

ದಾವಣಗೆರೆ: ಕರುಳು ಕ್ಯಾನ್ಸರ್‌ ರೋಗಿಗಳಿಗೆ ಕೊರೊನಾ ಲಾಕ್‌

ರಿಂಗ್, ಪೌಚ್‌ ಸಿಗದೇ ಪರದಾಡುತ್ತಿರುವ ಕ್ಯಾನ್ಸರ್‌ ಪೀಡಿತರು

ಬಾಲಕೃಷ್ಣ ಪಿ.ಎಚ್‌
Published 19 ಏಪ್ರಿಲ್ 2020, 19:33 IST
Last Updated 19 ಏಪ್ರಿಲ್ 2020, 19:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಕೊರೊನಾ ವೈರಸ್‌ ಸೋಂಕು ಮತ್ತು ಅದರಿಂದ ಜಾರಿಯಲ್ಲಿರುವ ಲಾಕ್‌ಡೌನ್‌ ಕ್ಯಾನ್ಸರ್‌ ಪೀಡಿತರಿಗೂ ತೊಂದರೆ ನೀಡುತ್ತಿದೆ. ಕರುಳು ಕ್ಯಾನ್ಸರ್‌ (ಕೊಲಸ್ಟೆಮಿ) ಇರುವವರಿಗೆ ಅಗತ್ಯ ಇರುವ ಕಿಟ್‌ಗಳು ದೊರೆಯದಂತಾಗಿದೆ.

ನಗರದ ನಾಗರತ್ನಮ್ಮ ಅವರಿಗೆ ಎರಡು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆನಂತರ ರಿಂಗ್ ಮತ್ತು ಪೌಚ್‌ ಮೂಲಕವೇ ಮಲ ವಿಸರ್ಜನೆ ಮಾಡುವಂತಾಗಿತ್ತು. ಹಾಗಾಗಿ ತಿಂಗಳಿಗೆ ಆರೇಳು ರಿಂಗ್‌, ಪೌಚುಗಳು ಬೇಕಾಗುತ್ತವೆ. ತಿಂಗಳಿಗೆ ಬೇಕಾದಷ್ಟನ್ನು ಒಮ್ಮೆಲೇ ತಂದು ಇಡುತ್ತಿದ್ದರು. ಲಾಕ್‌ಡೌನ್‌ ಆಗುವ ಮೊದಲು ತಂದಿಟ್ಟಿದ್ದ ರಿಂಗ್‌, ಪೌಚು ಕಿಟ್‌ (ಒಸ್ಟೊಮಿ ಬೆಲ್ಟ್‌ ಕನ್ವಟೆಕ್‌, ಸ್ಟೊಮಹೆಸಿವ್‌ ಪೌಡರ್‌, ಸರ್ಫಿಟ್‌ ಪ್ಲಸ್‌ ಫ್ಲಾಂಜ್‌, ಸರ್ಫಿಟ್‌ ಪ್ಲಸ್‌ ಪೌಚ್‌, ಟೈಲ್‌ ಕ್ಲಿಪ್‌ ಕನ್ವಟೆಕ್‌ ಮುಂತಾದ ಪರಿಕರಗಳು) ಮುಗಿದಿದೆ. ಈಗ ಹುಡುಕಾಟ ನಡೆಸಿದರೂ ಸಿಗುತ್ತಿಲ್ಲ.

‘ದಾವಣಗೆರೆಯ ಎಲ್ಲ ಆಸ್ಪತ್ರೆಗಳು, ಔಷಧ ಅಂಗಡಿಗಳಿಗೆ ಭೇಟಿ ನೀಡಿ ವಿಚಾರಿಸಿದೆ. ಸ್ಟಾಕ್‌ ಮುಗಿದಿದೆ ಎಂದು ಎಲ್ಲರೂ ಉತ್ತರ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿರುವ ನನ್ನ ಗೆಳೆಯನನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕಳುಹಿಸಿ ವಿಚಾರಿಸಿದೆ. ಇನ್ನೊಂದೆರಡು ದಿನಗಳಲ್ಲಿ ಬರಬಹುದು ಎಂದು ಭರವಸೆ ನೀಡಿದ್ದಾರೆ. ಆದರೆ ಇನ್ನೂ ಬಂದಿಲ್ಲ’ ಎಂದು ತಾಯಿಗಾಗಿ ಪಡುತ್ತಿರುವ ಬವಣೆಯನ್ನು ಪ್ರಕಾಶ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ADVERTISEMENT

‘ದಾವಣಗೆರೆಯಲ್ಲಿ 15ಕ್ಕೂ ಅಧಿಕ ಮಂದಿ ಈ ಪೌಚ್‌ ಮತ್ತು ರಿಂಗ್‌ ಬೇಕಾದ ರೋಗಿಗಳಿದ್ದಾರೆ. ವೈದ್ಯರ ಶಿಫಾರಸಿನ ಮೇರೆಗೆ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಗೆ ಹೋದರೆ ಒಂದು ರಿಂಗ್‌ ಮತ್ತು ಪೌಚ್‌ ಹಾಕಿಸಿಕೊಂಡು ಬರಬಹುದು’ ಎಂದು ವೈದ್ಯ ಡಾ. ಸುನೀಲ್‌ ಬ್ಯಾಡಗಿ ತಿಳಿಸಿದ್ದಾರೆ.

ಕೊರೊನಾ ಲಾಕ್‌ಡೌನ್‌ ಇದ್ದರೂ ರೋಗಿಗಳಿಗೆ ಅಗತ್ಯ ಇರುವ ಇಂಥವುಗಳನ್ನು ತರಿಸಿಡಲು ಸರ್ಕಾರ ವ್ಯವಸ್ಥೆ ಮಾಡಬೇಕು. ಆಸ್ಪತ್ರೆ, ಔಷಧದ ಅಂಗಡಿಗಳು ತೆರೆದಿಡಲು ಅವಕಾಶ ನೀಡಿದರೆ ಸಾಲದು. ಅಲ್ಲಿ ಔಷಧಗಳು ಸಿಗುವಂತೆ ಮಾಡಬೇಕು. ಇಲ್ಲದೇ ಇದ್ದರೆ ಮನೆಯಲ್ಲಿರುವ ರೋಗಿಗಳಿಗೆ ಬಹಳ ತೊಂದರೆಯಾಗುತ್ತದೆ ಎಂಬುದು ಪ್ರಕಾಶ್‌ ಅವರ ಕಳಕಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.