ADVERTISEMENT

ದಾವಣಗೆರೆ: ಕೋವಿಡ್‌ನಿಂದ ಮೃತಪಟ್ಟವರ ದಫನ್‌ ಕಾರ್ಯ ನಡೆಯುವುದೇ ಮಧ್ಯರಾತ್ರಿ

ಶವಾಗಾರದ ಉಸ್ತುವಾರಿ ಡಾ. ಜಿ.ಎಂ. ಮೋಹನ್‌ ಕುಮಾರ್‌ ವಿವರಣೆ

ಬಾಲಕೃಷ್ಣ ಪಿ.ಎಚ್‌
Published 11 ಜುಲೈ 2020, 19:30 IST
Last Updated 11 ಜುಲೈ 2020, 19:30 IST
ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ   

ದಾವಣಗೆರೆ: ‘ಕೊರೊನಾ ಸೋಂಕಿದ್ದು ಮೃತಪಟ್ಟವರನ್ನು ಮಧ್ಯರಾತ್ರಿ ಗೌರವಯುತವಾಗಿ ದಫನ್ ಮಾಡುತ್ತೇವೆ. ಜನ ಸೇರಿ ಗೊಂದಲವಾಗಬಾರದು ಎಂಬ ಕಾರಣಕ್ಕೆ ರಾತ್ರಿ ಈ ಕಾರ್ಯ ಮಾಡುತ್ತಿದ್ದೇವೆ’.

ಫಾರೆನ್ಸಿಕ್‌ ತಜ್ಞ, ಶವಾಗಾರದ ಇನ್‌ಚಾರ್ಜ್‌ ಡಾ. ಜಿ.ಎಂ. ಮೋಹನ್‌ ಕುಮಾರ್‌ ದಫನ್‌ ಕಾರ್ಯದ ವಿವರ ನೀಡಿದರು.

‘ಮೃತಪಟ್ಟ ದೇಹ ನಮ್ಮಲ್ಲಿಗೆ ಬರುತ್ತದೆ. ಶೇ 1 ಸೋಡಿಯಂ ಹೈಪೋಕ್ಲೋರೈಟ್‌ ಸಿಂಪಡಿಸಿ ಡಬಲ್‌ ಲೇಯರ್‌ನಲ್ಲಿ ಪ್ಯಾಕಿಂಗ್‌ ಮಾಡಲಾಗುತ್ತದೆ. ಅವರ ಸಂಬಂಧಿಕರು ಯಾರಾದರೂ ಇದ್ದರೆ ದೂರದಿಂದ ನೋಡಲು ಅವಕಾಶ ಮಾಡಿಕೊಡುತ್ತೇವೆ. ಆಮೇಲೆ ಮತ್ತೊಮ್ಮೆ ದ್ರಾವಣ ಸಿಂಪಡಿಸಿ ಪೂರ್ತಿ ಕವರ್‌ ಮಾಡುತ್ತೇವೆ. ಕೊರೊನಾ ಸೋಂಕಿತರ ಮೃತದೇಹ‌ವಾದರೆ ಅಂದೇ ರಾತ್ರಿ ದಫನ್‌ ಮಾಡುತ್ತೇವೆ. ಸೋಂಕಿನ ಫಲಿತಾಂಶ ಬರಬೇಕಿರುವ ಮೃತದೇಹವಾದರೆ ಫಲಿತಾಂಶ ಬರುವವರೆಗೆ ಒಂದೆರಡು ದಿನ ಕಾಯಬೇಕಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಪಾಲಿಕೆ ವತಿಯಿಂದ ಜೆಸಿಬಿ ಮೂಲಕ ಸ್ಮಶಾನದಲ್ಲಿ 10 ಅಡಿ ಆಳದ ಗುಳಿ ತೋಡಲಾಗುತ್ತದೆ. ಪೊಲೀಸರ ಭದ್ರತೆಯಲ್ಲಿ ಮಧ್ಯರಾತ್ರಿ ಆಂಬುಲೆನ್ಸ್‌ನಲ್ಲಿ ಶವ ಒಯ್ಯಲಾಗುತ್ತದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡುತ್ತಾರೆ. ದೂರದ ಸಂಬಂಧಿಗಳಿದ್ದರೆ ಅಲ್ಲಿ ದೂರದಿಂದಲೇ ನೋಡುತ್ತಾರೆ. ಬಳಿಕ ಶವವನ್ನು ಗುಳಿಯೊಳಗೆ ಇಳಿಸಿ ಮಣ್ಣು ಮುಚ್ಚಲಾಗುತ್ತದೆ’ ಎಂದು ತಿಳಿಸಿದರು.

‘ಮೃತದೇಹ ಪ್ಯಾಕಿಂಗ್‌ ಮಾಡುವ ಮೊದಲೇ ನಮ್ಮ ಸಿಬ್ಬಂದಿ ಪಿಪಿಇ ಕಿಟ್‌ ಹಾಕಿಕೊಂಡಿರುತ್ತಾರೆ. ಆಂಬುಲೆನ್ಸ್‌ ಚಾಲಕರು ಕೂಡ ಕಿಟ್‌ ಧರಿಸಿರುತ್ತಾರೆ. ಮೃತದೇಹ ದಫನ್‌ ಮಾಡಿದ ಮೇಲೆ ಈ ಪಿಪಿಇ ಕಿಟ್‌ಗಳನ್ನು ತೆಗೆದು ಬಯೊಮೆಡಿಕಲ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ (ಬಿನ್‌) ಮಾಡುವ ತಂಡಕ್ಕೆ ಒಪ್ಪಿಸಲಾಗುತ್ತದೆ. ಅವರು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಾರೆ. ನಮ್ಮ ಸಿಬ್ಬಂದಿ ಪಿಪಿಇ ಕಿಟ್‌ ತೆಗೆದ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿಯು ಅವರಿಗೆ ಅಲ್ಲೇ ಸ್ಯಾನಿಟೈಸ್‌ ಮಾಡುತ್ತಾರೆ. ಆಂಬುಲೆನ್ಸ್‌ ಅನ್ನು ಶುಚಿಗೊಳಿಸಲಾಗುತ್ತದೆ. ಬಳಿಕ ಶವಾಗಾರಕ್ಕೆ ವಾಪಸ್ಸಾಗುತ್ತೇವೆ. ಅಲ್ಲಿ ಸ್ನಾನ ಮಾಡುತ್ತೇವೆ. ನಾನು ಮನೆಗೆ ಹೋಗುತ್ತೇನೆ. ಸಿಬ್ಬಂದಿ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ. ಅವರು ಅಲ್ಲಿಗೆ ತೆರಳುತ್ತಾರೆ’ ಎಂದು ಮಾಹಿತಿ ನೀಡಿದರು.

***

‘ನಾನು ಮನೆಗೆ ಬಂದಮೇಲೆ ಮತ್ತೊಮ್ಮೆ ಸ್ನಾನ ಮಾಡುತ್ತೇನೆ. ಮನೆಯಲ್ಲಿ ಮಕ್ಕಳು, ಪತ್ನಿ ಪೂರ್ಣ ಸಹಕಾರ ಕೊಡುತ್ತಿದ್ದಾರೆ. ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಉಳಿದುಕೊಳ್ಳುತ್ತೇನೆ’ ಎಂದು ವಿವರಿಸಿದರು.

ಪ್ಯಾಕಿಂಗ್ ಮಾಡುವ ನಾಗರಾಜ್‌, ತಿಪ್ಪೇಸ್ವಾಮಿ

***

ಮೃತದೇಹಕ್ಕೆ ಬ್ಲೀಚಿಂಗ್‌, ಸೊಲ್ಯುಶನ್‌, ಸ್ಯಾನಿಟೈಸರ್‌ ಹಾಕಿ ಪ್ಯಾಕಿಂಗ್‌ ಮಾಡುವವರೇ ‘ಡಿ’ ಗ್ರೂಪ್ ನೌಕರರಾದ 52 ವರ್ಷದ ನಾಗರಾಜ್‌ ಮತ್ತು 57 ವರ್ಷದ ತಿಪ್ಪೇಸ್ವಾಮಿ ಅವರು. ಇವರು 1998ರಿಂದ ಮಾರ್ಚರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ತಿಪ್ಪೇಸ್ವಾಮಿ ಅವರಿಗೆ ಕಾಲಿನ ಸಮಸ್ಯೆ ಇದ್ದರೂ ಲೆಕ್ಕಿಸದೇ ಸಹೋದ್ಯೋಗಿ ನಾಗರಾಜ್‌ ಜತೆ ಕಾರ್ಯನಿರ್ವಹಿಸುತ್ತಿದ್ದಾರೆ.

ನರೇಂದ್ರ, ಲೋಕೇಶ್‌, ದಾದಾಪೀರ್‌, ದಿನೇಶ್‌ ಆಂಬುಲೆನ್ಸ್‌ ಚಾಲಕರಾಗಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಇವರು ಯಾರೂ ಮೂರು ತಿಂಗಳುಗಳಿಂದ ಮನೆಗೆ ತೆರಳುತ್ತಿಲ್ಲ. ‍ರೂಂ ಮಾಡಿಕೊಂಡು ಪ್ರತ್ಯೇಕವಾಗಿದ್ದಾರೆ.

ಈ ಆರು ಮಂದಿಯೇ ಶವ ದಫನ್‌ ಮಾಡುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.