ADVERTISEMENT

ಕೋವಿಡ್‌ ಗೆದ್ದವರ ಕಥೆಗಳು | ಶೀತಕ್ಕಿಂತಲೂ ಸಣ್ಣ ಕಾಯಿಲೆ ಕೊರೊನಾ

ಕೊರೊನಾ ಮುಕ್ತರಾದ ಮೇಯರ್‌ ಬಿ.ಜಿ. ಅಜಯ್ ಕುಮಾರ್‌

ಬಾಲಕೃಷ್ಣ ಪಿ.ಎಚ್‌
Published 5 ಆಗಸ್ಟ್ 2020, 8:55 IST
Last Updated 5 ಆಗಸ್ಟ್ 2020, 8:55 IST
ಬಿ.ಜಿ. ಅಜಯ್‌ಕುಮಾರ್
ಬಿ.ಜಿ. ಅಜಯ್‌ಕುಮಾರ್   

ದಾವಣಗೆರೆ: ‘ಸಾಮಾನ್ಯವಾಗಿ ಬರುವ ಶೀತ, ಜ್ವರ ಕೆಮ್ಮುಗಳಿಗಿಂತಲೂ ಸಣ್ಣ ಕಾಯಿಲೆ ಇದು. ಕೊರೊನಾ, ಕೋವಿಡ್‌–19 ಎಂದೆಲ್ಲ ಹೆಸರಿಟ್ಟು ದೊಡ್ಡದೆಂದು ಬಿಂಬಿಸಿ ಜನರನ್ನು ಭೀತರನ್ನಾಗಿಸಲಾಗಿದೆ. ಮೊದಲು ಜನರನ್ನು ಹೆದರಿಸುವುದನ್ನು ನಿಲ್ಲಿಸಿ’ ಎಂದು ಮೇಯರ್‌ ಬಿ.ಜಿ. ಅಜಯ್‌ ಕುಮಾರ್‌ ಸಲಹೆ ನೀಡಿದ್ದಾರೆ.

ಕೊರೊನಾದಿಂದ ಗುಣಮುಖರಾದ ಬಳಿಕ ಅವರು ‘ಪ್ರಜಾವಾಣಿ’ ಜತೆ ಅನುಭವ ಹಂಚಿಕೊಂಡರು.

‘ಒಂದು ದಿನ ಸ್ವಲ್ಪ ತಲೆನೋವು, ಬೆನ್ನು ನೋವು ಉಂಟಾಯಿತು. ಸುಸ್ತು ಕೂಡ ಆಯಿತು. ಯಾವಾಗಲೂ ಬೆಳಿಗ್ಗೆ ಬೇಗ ಏಳುವ ನಾನು ಅಂದು ಬೆಳಿಗ್ಗೆ 10ರ ವರೆಗೆ ಮಲಗಿದೆ. ಮರುದಿನವೂ ಇದು ಮರುಕಳಿಸಿತು. ನನ್ನ ಸ್ನೇಹಿತರಿಗೆ ವಿಷಯ ತಿಳಿಸಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ತಂಡವೊಂದು ಬಂದು ರ‍್ಯಾಪಿಡ್‌ ಟೆಸ್ಟ್‌ ಮಾಡಿಸಿತು. ನನಗೆ ಮಾತ್ರವಲ್ಲದೇ ಹೆಂಡತಿ ಮತ್ತು ಮಗನಿಗೂ ಕೊರೊನಾ ಪಾಸಿಟಿವ್‌ ಬಂತು’ ಎಂದು ವಿವರಿಸಿದರು.

ADVERTISEMENT

‘ಹೋಂ ಐಸೋಲೇಶನ್‌ನಲ್ಲಿ ಇದ್ದೆ. ವೈದ್ಯರು ಗುಳಿಗೆ ನೀಡಿದರು. ಎರಡೇ ದಿನಗಳಲ್ಲಿ ಯಾವ ಲಕ್ಷಣವೂ ಇಲ್ಲದಾಯಿತು. ಪರೀಕ್ಷೆ ಅವಾಗಲೇ ಮಾಡಿದ್ದರೆ ನೆಗೆಟಿವ್‌ ಬರುತ್ತಿತ್ತು ಎಂಬ ಧೈರ್ಯ ನನಗಿತ್ತು. ಆದರೆ ಪ್ರೊಸೀಜರ್‌ ಪ್ರಕಾರವೇ ನಡೆಯಲಿ ಎಂದು ಕಾದೆ’ ಎಂದರು.

‘ಕೊರೊನಾ ಎಂದರೆ ನನಗೇನೂ ಭಯ ಇರಲಿಲ್ಲ. ನನಗೆ ಧೈರ್ಯ ತುಂಬಲೆಂದು ಫೋನ್‌ ಮಾಡುವವರಿಗೆ ನಾನೇ ಧೈರ್ಯ ತುಂಬುತ್ತಿದ್ದೆ. ಕೊರೊನಾ ಬಗ್ಗೆ ದೃಶ್ಯ ಮಾಧ್ಯಮಗಳನ್ನು ನೋಡಿ ನೋಡಿ ಜನರಲ್ಲಿ ಭಯ ಸೃಷ್ಟಿಯಾಗಿದೆ. ಸರ್ಕಾರದ ಅಧಿಕಾರಿಗಳು ಕೂಡ ಜಾಗೃತಿ ಮೂಡಿಸುವ ಬದಲು ಭಯ ಹೆಚ್ಚಿಸುವ ರೀತಿಯ ಕೆಲಸಗಳನ್ನೇ ಮಾಡಿದ್ದಾರೆ’ ಎಂದು ಟೀಕಿಸಿದರು.

ಋತುಗಳು ಬದಲಾದಾಗ ವಾತಾವರಣ ಬದಲಾಗುತ್ತದೆ. ಆಗ ಸಣ್ಣ ಮಟ್ಟಿನ ಕೆಮ್ಮು, ಶೀತ, ಜ್ವರ ಬರುವುದು ಸಾಮಾನ್ಯ. ಈ ರೀತಿ ಬಾರದೇ ಇರುವ ಒಬ್ಬನೇ ಒಬ್ಬ ಮನುಷ್ಯ ಇಲ್ಲ. ಅದಕ್ಕಿಂತಲೂ ಸಣ್ಣ ಕಾಯಿಲೆ ಇದು. ಶೀತ, ಜ್ವರ ಬಂದರೆ ಕೊರೊನಾ ಎಂದು ತಿಳಿದುಕೊಳ್ಳುವುದನ್ನು ಮೊದಲು ಬಿಡಬೇಕು. ಸೀಲ್‌ಡೌನ್‌ ಮಾಡಬಾರದು. ಪಿಪಿಇ ಕಿಟ್‌ಗಳನ್ನು ಹಾಕಿಕೊಂಡು ಭೂತದಂತೆ ಮನೆಗೆ ಬಂದು ಕರೆದುಕೊಂಡು ಹೋಗಬಾರದು. ಆಗ ಜನರಿಗೆ ಹೆದರಿಕೆ ಕಡಿಮೆಯಾಗುತ್ತದೆ ಎಂದು ವಿವರಿಸಿದರು.

ಎಲ್ಲರಿಗೂ ಅವರವರ ಜೀವದ ಮೇಲೆ ಕಾಳಜಿ, ಪ್ರೀತಿ ಇರುತ್ತದೆ. ಇಷ್ಟೆಲ್ಲ ಜಾಗೃತಿ ಮೂಡಿಸಿದ ಮೇಲೂ ಬರುತ್ತದೆ ಎಂದರೆ ಬಿಟ್ಟುಬಿಡಬೇಕು. ಯಾರೂ ಕೊರೊನಾದಿಂದ ಸತ್ತಿಲ್ಲ. ಮೂತ್ರಪಿಂಡ, ಹೃದಯ ಕಾಯಿಲೆ, ಬಿ.ಪಿ, ಶುಗರ್‌ ಹೀಗೆ ನಾನಾ ಕಾಯಿಲೆ ಇದ್ದವರಿಗೆ ಕೊರೊನಾ ಬಂದಾಗ ಅವರು ಇನ್ನಷ್ಟು ಹೆದರಿಕೊಂಡಿದ್ದರಿಂದ ಸತ್ತಿದ್ದಾರೆ. ಸಾವಿಗೆ ಬೇರೆ ಕಾಯಿಲೆಗಳೇ ಕಾರಣ ಎಂದು ವಿಶ್ಲೇಷಿಸಿದರು.

‘ಸೀಲ್‌ಡೌನ್‌ ಸರಿಯಿಲ್ಲ’
‘ನನಗೆ ಶನಿವಾರ ಪಾಸಿಟಿವ್‌ ಎಂದು ವರದಿ ಬಂದಿತ್ತು. ಬುಧವಾರ ಒಂದು ಫೋನ್‌ ಬಂತು. ನಿಮ್ಮ ಮನೆ ಸೀಲ್‌ಡೌನ್‌ ಮಾಡಬೇಕು. ವಿಳಾಸ ತಿಳಿಸಿ ಎಂದು ಕೇಳಿದರು. ನೀವ್ಯಾರು ಮಾತನಾಡುತ್ತಿರುವುದು ಎಂದು ಕೇಳಿದೆ. ಪಾಲಿಕೆಯ ಹೆಲ್ತ್‌ ಇನ್‌ಸ್ಪೆಕ್ಟರ್‌ ಎಂದು ಆ ಕಡೆಯಿಂದ ಉತ್ತರಿಸಿದರು. ನೀವೇನು ಕೆಲಸ ಮಾಡುತ್ತಿದ್ದೀರಿ ಎಂದು ನನ್ನನ್ನು ಮರುಪ್ರಶ್ನಿಸಿದರು. ಹೋಟೆಲ್‌ ನಡೆಸುತ್ತಿದ್ದೇನೆ ಎಂದೆ. ಕೊನೆಗೆ ನಾನು ಮೇಯರ್‌ ಅಂದೆ. ಸಾರ್‌..ಸಾರ್‌.. ಎಂದರು. ನನ್ನ ಫೋನ್‌ ನಂಬರ್ ಇಲ್ವ ಕೇಳಿದೆ. ಮೊಬೈಲಲ್ಲಿ ಇದೆ. ಪಾಸಿಟಿವ್‌ ಬಂದವರ ನಂಬರ್‌ ಒದಗಿಸಿದ್ದಾರೆ. ಅವರಿಗೆ ಲ್ಯಾಂಡ್‌ಲೈನ್‌ನಿಂದ ಫೋನ್ ಮಾಡುತ್ತಿದ್ದೇನೆ ಎಂದರು. ಇದು ಸೀಲ್‌ಡೌನ್‌ ಕಥೆ’ ಎಂದು ಅಜಯ್‌ ಕುಮಾರ್‌ ವಿವರಿಸಿದರು.

‘ನನಗೆ ಐದು ದಿನ ಬಿಟ್ಟು ಫೋನ್‌ ಬಂತು. ನನ್ನ ಜತೆಗೆ ಗೆಳೆಯ ಜಗದೀಶ್‌ ಅವರಿಗೂ ಸೋಂಕು ಇರುವುದು ಖಚಿತವಾಗಿತ್ತು. 10 ದಿನಗಳ ಬಳಿಕ ಅವರಿಗೆ ನೆಗೆಟಿವ್‌ ಎಂದು ವರದಿ ಬಂದಿದೆ. ಅದಾಗಿ ಎರಡು ದಿನಗಳ ಬಳಿಕ ನಿಮ್ಮ ಮನೆ ಸೀಲ್‌ಡೌನ್‌ ಮಾಡಲು ವಿಳಾಸ ತಿಳಿಸಿ ಎಂದು ಫೋನ್‌ ಬಂದಿದೆ. ಹೀಗಾದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಮೇಯರ್‌ ಮನೆಯನ್ನೇ ಸೀಲ್‌ಡೌನ್‌ ಮಾಡಿಲ್ಲ ಎಂದು ವಿರೋಧ ಪಕ್ಷದವರು ಫೋಟೊ ತೆಗೆದು ಹರಿಯಬಿಡೋದು ಬೇಡ ಎಂದು ನಾನೇ ಸೋಂಕು ಇದೆ ಎಂದು ಗೊತ್ತಾದ ಕೂಡಲೇ ಕರೆಸಿ ಮನೆ ಸೀಲ್‌ಡೌನ್‌ ಮಾಡಿಸಿಕೊಂಡೆ. ಸೀಲ್‌ಡೌನ್‌ ಅನ್ನುವ ಸಬ್ಜೆಕ್ಟೇ ಸರಿ ಇಲ್ಲ’ ಎಂದರು.

‘ಕಚೇರಿ ಬಂದ್‌ ಯಾಕೆ?’
ಧೂಡಾ ಕಚೇರಿಯ ಒಬ್ಬ ಸಿಬ್ಬಂದಿಗೆ ಕೊರೊನಾ ಬಂದಾಗ ಒಂದು ವಾರ ಕಚೇರಿ ಬಂದ್‌ ಮಾಡಿದರು. ಪಾಲಿಕೆಯ ಸಿಬ್ಬಂದಿಗೆ ಬಂದಾಗ ಕಚೇರಿ ನಾಲ್ಕೈದು ದಿನ ಬಂದ್‌ ಆಯಿತು. ಪಿಡಬ್ಲ್ಯುಡಿಯ ಒಬ್ಬರಿಗೆ ಬಂದಾಗ ಉಳಿದ ಅಧಿಕಾರಿಗಳು ಒಬ್ಬರೂ ಕೆಲಸಕ್ಕೆ ಬಾರದೆ ವಾರಗಟ್ಟಲೆ ಕಚೇರಿ ತೆರೆಯಲಿಲ್ಲ. ಕೊರೊನಾ ನೆಪ ಮಾಡಿಕೊಂಡು ರಜಾ ಮಾಡುತ್ತಿದ್ದಾರೆ ಎಂದು ಮೇಯರ್‌ ಆರೋಪಿಸಿದರು.

ಯಾರಿಗೋ ಸಿಬ್ಬಂದಿಗೆ ಬಂದರೆ ಒಂದು ದಿನ ಸ್ಯಾನಿಟೈಸ್‌ ಮಾಡಿ. ಮರುದಿನ ಕಚೇರಿ ತೆರೆಯಬೇಕು. ಕೊರೊನಾ ಅಂದರೆ ಏನು? ನೆಲದಲ್ಲಿ 8 ಗಂಟೆ ಜೀವಂತ ಇರುತ್ತದೆ. ಸ್ಯಾನಿಟೈಸ್‌ ಮಾಡಿದಾಗ ಹೋಗುತ್ತದೆ ಎಂದು ಅಧಿಕಾರಿಗಳಿಗೆ ಗೊತ್ತು. ಆದರೂ ಜನರ ಕೆಲಸ ಮಾಡುವುದನ್ನು ತಪ್ಪಿಸಿಕೊಳ್ಳಲು ಅವರಿಗೆ ಕೊರೊನಾ ನೆಪ ಆಗಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.