ADVERTISEMENT

ನಸುಕಿನಲ್ಲೇ ನಡೆಯಿತು ಕೋವಿಡ್‌ನಿಂದ ಮೃತ ವೃದ್ಧನ ಅಂತ್ಯಕ್ರಿಯೆ

ದಾವಣಗೆರೆಯ ಖಬರಸ್ತಾನದಲ್ಲಿ ಪಿಪಿಇ ಕಿಟ್‌ ಧರಿಸಿ ಸಮಾಧಿ

​ಪ್ರಜಾವಾಣಿ ವಾರ್ತೆ
Published 2 ಮೇ 2020, 7:41 IST
Last Updated 2 ಮೇ 2020, 7:41 IST
   

ದಾವಣಗೆರೆ: ಕೋವಿಡ್‌–19 ರೋಗದಿಂದ ಮೃತಪಟ್ಟಿದ್ದ ಜಾಲಿನಗರದ 69 ವರ್ಷದ ವೃದ್ಧನ (ಪಿ–556) ಅಂತ್ಯಕ್ರಿಯೆಯನ್ನು ನಗರದ ಪಿ.ಬಿ. ರಸ್ತೆ ಪಕ್ಕದ ಖಬರಸ್ಥಾನ್‌ನಲ್ಲಿ ಶನಿವಾರ ಬೆಳಗಿನಜಾವ ಕೋವಿಡ್‌ ಮಾರ್ಗಸೂಚಿ ಪ್ರಕಾರ ನೆರವೇರಿಸಲಾಯಿತು.

ಅತಿಯಾದ ಮಧುಮೇಹ, ರಕ್ತದೊತ್ತಡ ಕಾಯಿಲೆಯನ್ನೂ ಹೊಂದಿದ್ದ ಸೋಂಕಿತ ವೃದ್ಧ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಶುಕ್ರವಾರ ರಾತ್ರಿ 9 ಗಂಟೆಗೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವೃದ್ಧನ ಮಗ, ಮೂವರು ಸೊಸೆ ಮತ್ತು ಒಂದು ವರ್ಷದ ಮೊಮ್ಮಗನಿಗೂ ಕೋವಿಡ್‌ ಇರುವುದು ಶುಕ್ರವಾರವಷ್ಟೇ ದೃಢಪಟ್ಟಿತ್ತು.

‘ಸೋಂಕಿತ ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಶನಿವಾರ ಬೆಳಗಿನಜಾವ 4 ಗಂಟೆಯೊಳಗೆ ಪ್ರೋಟೊಕಾಲ್‌ ಪ್ರಕಾರ ಪೂರ್ಣಗೊಳಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ನೇತೃತ್ವದಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವೈದ್ಯಾಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಹಾಗೂ ಮೃತನ ಸಮುದಾಯದ ಮುಖಂಡರು ತಡರಾತ್ರಿ ಅಂತ್ಯಕ್ರಿಯೆ ನಡೆಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಶನಿವಾರ ಬೆಳಿಗ್ಗೆವರೆಗೂ ಕಾಯ್ದರೆ ಅಂತ್ಯಕ್ರಿಯೆ ನಡೆಸುವ ಸ್ಥಳದ ಬಗ್ಗೆ ಜನ ಆಕ್ಷೇಪ ವ್ಯಕ್ತಪಡಿಸಬಹುದು ಹಾಗೂ ಹೆಚ್ಚಿನ ಜನ ಸೇರಬಹುದು ಎಂಬ ಕಾರಣಕ್ಕೆ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಪಿ.ಬಿ. ರಸ್ತೆಯ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಯಿತು.

‘ಪಾಲಿಕೆಯ ಜೆಸಿಬಿ ಯಂತ್ರದ ಸಹಾಯದಿಂದ ಖಬರಸ್ಥಾನದಲ್ಲಿ ಗುಂಡಿ ತೋಡಿಸಲಾಗಿತ್ತು. ಜೆಸಿಬಿ ಚಾಲಕನಿಗೂ ಪಿಪಿಇ ಕಿಟ್‌ ಹಾಕಿಸಲಾಗಿತ್ತು. ಸೋಂಕಿತ ವ್ಯಕ್ತಿಯ ಮೂಗು, ಬಾಯಿಯಿಂದ ದ್ರಾವಣ ಹೊರಗೆ ಬರಬಾರದು ಎಂಬ ಕಾರಣಕ್ಕೆ ಶವವನ್ನು ಎರಡು ಲೇಯರ್‌ಗಳಲ್ಲಿ ಸುತ್ತಲಾಗಿತ್ತು. ಪಿಪಿಇ ಕಿಟ್‌ ಹಾಕಿಕೊಂಡು ಜಿಲ್ಲಾ ಆಸ್ಪತ್ರೆಯ ಶವಾಗಾರದ ಇಬ್ಬರು ಸಿಬ್ಬಂದಿ ಹಾಗೂ ಚಾಲಕ ಶವವನ್ನು ವಾಹನದಲ್ಲಿ ಖಬರಸ್ಥಾನಕ್ಕೆ ತೆಗೆದುಕೊಂಡು ಬಂದಿದ್ದರು. 6–7 ಅಡಿ ಆಳದ ಗುಂಡಿಯಲ್ಲಿ ಶವವನ್ನು ಇಟ್ಟು ಸೋಂಕು ನಿವಾರಣೆಗಾಗಿ ಅದರ ಮೇಲೆ ಸೋಡಿಯಂ ಹೈಪೊಕ್ಲೊರೈಟ್‌ ದ್ರಾವಣವನ್ನು ಸಿಂಪಡಿಸಿ, ಮಣ್ಣು ಮುಚ್ಚಲಾಗಿದೆ. ಬೆಳಗಿನಜಾವ 4 ಗಂಟೆ ವೇಳೆಗೆ ಎಲ್ಲಾ ಪ್ರಕ್ರಿಯೆ ಮುಗಿಯಿತು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ನೇತೃತ್ವದಲ್ಲಿ ಪಿಪಿಇ ಕಿಟ್‌ ಧರಿಸಿದ್ದ ಸಿಬ್ಬಂದಿ ಸುತ್ತಲೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು. ಸಮಾಧಿ ಪ್ರಕ್ರಿಯೆ ಮುಗಿದ ಬಳಿಕ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲರೂ ಪಿಪಿಇ ಕಿಟ್‌ ಅನ್ನು ರಸ್ತೆಯ ಪಕ್ಕದಲ್ಲಿ ಸುಟ್ಟು ಹಾಕಿದರು. ಅಂತ್ಯಕ್ರಿಯೆ ವೇಳೆ ಮೃತನ ಕುಟುಂಬದ ಕಡೆಯಿಂದ ನಾಲ್ವರು ಬಂದು ದೂರದಲ್ಲಿ ನಿಂತಿದ್ದರು’ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಜಾಲಿನಗರ ಎಪಿಸೆಂಟರ್‌ನ ಕಂಟೈನ್ವೆಂಟ್‌ ಝೋನ್‌ನ ಇನ್ಸಿಡೆಂಟ್‌ ಕಮಾಂಡರ್‌ ಆಗಿರುವ ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಪೊಲೀಸ್‌ ಸಿಬ್ಬಂದಿ ಇದ್ದರು.

ಸೋಂಕಿತ ನರ್ಸ್‌ ಆರೋಗ್ಯ ಸ್ಥಿರ

‘ಕೊರೊನಾ ಸೋಂಕು ಕಾಣಿಸಿಕೊಂಡಿರುವ ಬಾಷಾನಗರದ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‌ (ಪಿ–533) ಆರೋಗ್ಯ ಸ್ಥಿರವಾಗಿದೆ. ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನ ಐಸೋಲೇಷನ್‌ ವಾರ್ಡ್‌ನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.