ದಾವಣಗೆರೆ: ಮಳೆ ಹೆಚ್ಚಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಅಪಾರ ಹಾನಿಯುಂಟಾಗಿದ್ದು, ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ಪರಿಹಾರ ವಿತರಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಒತ್ತಾಯಿಸಿದರು.
‘ಪೂರ್ವ ಮುಂಗಾರು ನಿರೀಕ್ಷೆ ಮೀರಿ ಸುರಿದರೂ ಕೃಷಿ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಈರುಳ್ಳಿ ಸೇರಿದಂತೆ ತರಕಾರಿ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಅಡಿಕೆಗೆ ಕೊಳೆರೋಗ ಕಾಣಿಸಿಕೊಂಡು ಇಳುವರಿ ಕುಂಠಿತ ಆಗುವ ಆತಂಕ ಎದುರಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಗುಂಗಿನಿಂದ ಹೊರಬಂದಿರುವಂತೆ ಕಾಣುತ್ತಿಲ್ಲ. ರಸಗೊಬ್ಬರದ ಕೊರತೆ ಆಗುವ ಬಗ್ಗೆ ಈ ಮುಂಗಾರು ಪೂರ್ವದಲ್ಲೇ ಕಳವಳ ವ್ಯಕ್ತಪಡಿಸಿದ್ದೆವು. ಈವರೆಗೂ ಯೂರಿಯಾ ರಸಗೊಬ್ಬರ ಸರಿಯಾಗಿ ಸಿಗುತ್ತಿಲ. ಆಂಧ್ರಪ್ರದೇಶ, ಕೇರಳ ಸೇರಿ ಹಲವು ರಾಜ್ಯಗಳಿಗೆ ಕಾಳಸಂತೆಯಲ್ಲಿ ಮಾರಾಟವಾಗಿದೆ’ ಎಂದು ದೂರಿದರು.
ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್, ‘ಭದ್ರಾ ನಾಲೆ ಸೀಳಿ ನಡೆಸಿದ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸುಳ್ಳು ಹೇಳಿದ್ದಾರೆ. ಜನರ ದಿಕ್ಕುತಪ್ಪಿಸಿದ ಸಚಿವರು ಕೂಡಲೇ ಕ್ಷಮೆ ಕೇಳಬೇಕು. ಗದ್ದುಗೆ ಗುದ್ದಾಟದಲ್ಲಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜಲಾಶಯಗಳ ಸುರಕ್ಷತೆಗೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ರಾಂಪುರ ನರೇಂದ್ರ, ಬಿ.ಕೆ.ಶಿವಕುಮಾರ್ ಹಾಜರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಮೇಲೆ ನಿಜವಾಗಿಯೂ ಕಾಳಜಿ ಇದ್ದರೆ ಶೀಘ್ರ ಪರಿಹಾರ ವಿತರಿಸಬೇಕು. ಕೇಂದ್ರ ಸರ್ಕಾರ ನೀಡಿದ ಅನುದಾನ ಸದ್ಬಳಕೆ ಆಗಬೇಕುಲೋಕಿಕೆರೆ ನಾಗರಾಜ್ ಉಪಾಧ್ಯಕ್ಷ ಬಿಜೆಪಿ ರೈತ ಮೋರ್ಚಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.