ADVERTISEMENT

ಎಸ್‌ಸಿ, ಎಸ್‌ಟಿ ಅನುದಾನ ಕಡಿಗೊಳಿಸಿ ಅನ್ಯಾಯ: ಕೆ.ಬಿ.ನರಸಿಂಹ

ರಾಷ್ಟ್ರೀಯ ಮಾದಿಗ ದಂಡೋರ ಸಮಿತಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:11 IST
Last Updated 18 ಏಪ್ರಿಲ್ 2021, 4:11 IST
ದಾವಣಗೆರೆಯಲ್ಲಿ ಶನಿವಾರ ಮಾದಿಗ ದಂಡೋರ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಅಭಿನಂದನಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಾವಣಗೆರೆಯಲ್ಲಿ ಶನಿವಾರ ಮಾದಿಗ ದಂಡೋರ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಅಭಿನಂದನಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.   

ದಾವಣಗೆರೆ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಈ ಬಾರಿ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಡುವ ಅನುದಾನವನ್ನು ಕಡಿತಗೊಳಿಸಿದೆ. ಇದು ಈ ಸಮುದಾಯಗಳಿಗೆ ಮಾಡಿದ ಅನ್ಯಾಯ ಎಂದು ಎಂದು ರಾಷ್ಟ್ರೀಯ ಮಾದಿಗ ದಂಡೋರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬಿ. ನರಸಿಂಹ ಆರೋಪಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಮಾದಿಗ ದಂಡೋರ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕೇಂದ್ರ ಸರ್ಕಾರ ಶೇ 18ರ ಅಡಿ ₹ 5.4 ಲಕ್ಷ ಕೋಟಿ ಮೀಸಲಿಡಬೇಕು. ಕೇವಲ ₹ 50 ಸಾವಿರ ಕೋಟಿ ಮೀಸಲಿಟ್ಟಿದೆ. ಅದೇ ರೀತಿ ರಾಜ್ಯದಲ್ಲಿ ಶೇ‌ 24.1 ರಡಿ ₹ 60 ಸಾವಿರ ಕೋಟಿ ಮೀಸಲಿಡಬೇಕು. ₹ 30 ಸಾವಿರ ಕೋಟಿ ಮಾತ್ರ ಮೀಸಲಿಡಲಾಗಿದೆ ಎಂದು ಅಂಕಿ ಅಂಶ ನೀಡಿದರು.

ADVERTISEMENT

ಆದಿ ಜಾಂಬವ ಅಭಿವೃದ್ಧಿ ನಿಗಮದಲ್ಲಿ ಅನುದಾನ ಇಲ್ಲದೆ 8 ಅರ್ಜಿಗಳು ಬಾಕಿ ಉಳಿದಿವೆ. ಮುಖ್ಯಮಂತ್ರಿಗಳು ಬೇರೆ ಅಭಿವೃದ್ಧಿ ನಿಗಮಗಳಿಗೆ ₹ 500 ಕೋಟಿ ನೀಡಿದ್ದು, ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ₹ 50 ಕೋಟಿ ನೀಡಿ ಅನ್ಯಾಯ ಮಾಡಿದ್ದಾರೆ. ಅಲ್ಲದೇ, ರಾಜ್ಯದ 8 ಮಹಾನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲೂ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಸುಮಾರು 1.50 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ಇದರಿಂದ ಪರಿಶಿಷ್ಟ ವರ್ಗಗಳ ಉನ್ನತ ಶಿಕ್ಷಣ ಪಡೆದ ಯುವಕರು ನಿರುದ್ಯೋಗಿಗಳಾಗಿ ಬೀದಿ ಪಾಲಾಗುವಂತಾಗಿದೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಹುನ್ನಾರದಿಂದ ಈ ಎಲ್ಲಾ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ವಿದ್ಯಾವಂತ ಯುವಕರು ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ಸರ್ಕಾರಿ ಸೌಲಭ್ಯಗಳು ಸಿಗಲು ಸಾಧ್ಯವಿದೆ ಎಂದು ತಿಳಿಸಿದರು.

ಮಾದಿಗ ದಂಡೋರ ಸಮಿತಿ ಜಿಲ್ಲಾ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದವರು ಪಂಚಾಯಿತಿ ಆಡಳಿತದ ಬಗ್ಗೆ ತಿಳಿದುಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಇತ್ತೀಚಿಗೆ ನಿಧನರಾದ ಒಳಮೀಸಲಾತಿ ಹೋರಾಟಗಾರರಾದ ಜಿ.ರಾಮಕೃಷ್ಣ, ಕೆ.ಬಿ.ಸಿದ್ದಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ ಸಹಿತಿ ವಿವಿಧ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಮಾದಿಗ ಸಮುದಾಯದ ಟಿ. ಮರಿಯಪ್ಪ, ಬಿ.ಎಚ್. ಶೇಖರಪ್ಪ ಮಳಲಕೆರೆ, ಪಿ. ನಾಗರಾಜ್, ಎ.ಕೆ. ನಾಗೇಂದ್ರಪ್ಪ, ಜಿ.ಎಚ್. ತಮ್ಮಣ್ಣ, ಎನ್. ಕೆಂಚಪ್ಪ ಈಚಘಟ್ಟ, ರವಿಕುಮಾರ್, ಹುಲಿಗಪ್ಪ ಬಳ್ಳಾರಿ, ಹೆಗ್ಗೆರೆ ರಂಗಪ್ಪ, ಹನುಮಂತಪ್ಪ ಕುಂಬಳೂರು ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.