ADVERTISEMENT

ಸಂತೇಬೆನ್ನೂರು: ಸಾವಯವ ಅಣಬೆ ಕೃಷಿಯಲ್ಲಿ ನಿತ್ಯ ಆದಾಯ

ಹಿರೇಕೋಗಲೂರಿನ ಪ್ರಗತಿಪರ ರೈತ ಶರಣಪ್ಪಗೆ ಪುತ್ರ ಯೋಗೀಶ್‌ ಸಾಥ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 4:22 IST
Last Updated 20 ಅಕ್ಟೋಬರ್ 2021, 4:22 IST
ಪ್ಲಾಸ್ಟಿಕ್ ಬ್ಯಾಗ್ ರಂಧ್ರಗಳಿಂದ ದಟ್ಟವಾಗಿ ಮೊಳಕೆಯೊಡೆದಿರುವ ಅಣಬೆ.
ಪ್ಲಾಸ್ಟಿಕ್ ಬ್ಯಾಗ್ ರಂಧ್ರಗಳಿಂದ ದಟ್ಟವಾಗಿ ಮೊಳಕೆಯೊಡೆದಿರುವ ಅಣಬೆ.   

ಸಂತೇಬೆನ್ನೂರು: ಸಾಂಪ್ರದಾಯಿಕ ಕೃಷಿಯಿಂದ ವಿಭಿನ್ನತೆ ರೂಢಿಸಿಕೊಂಡಿರುವ ಹಿರೇಕೋಗಲೂರಿನ ಪ್ರಗತಿಪರ ರೈತ ಶರಣಪ್ಪ ಅಣಬೆ ಕೃಷಿ ಮೂಲಕ ನಿತ್ಯವೂ ಆದಾಯ ಗಳಿಸುತ್ತಿದ್ದಾರೆ.

ಶರಣಪ್ಪ ಅವರೊಂದಿಗೆ ಪುತ್ರ ಯೋಗೀಶ್ ಅವರೂ ಅಣಬೆ ಕೃಷಿಯಲ್ಲಿ ತಲ್ಲೀನರಾಗಿದ್ದಾರೆ. ಮನೆಯಂಗಳದಲ್ಲಿಯೇ ನಿತ್ಯ ಸರಾಸರಿ 10ರಿಂದ 15 ಕೆ.ಜಿ. ಅಣಬೆ ಉತ್ಪಾದಿಸಿ ಸ್ವಯಂ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಪ್ರತಿ ಕೆ.ಜಿ. ಅಣಬೆ ₹ 250ಕ್ಕೆ ವ್ಯಾಪಾರವಾಗುತ್ತಿದೆ. ಕೆಲ ದಿನಗಳಲ್ಲಿ 20 ಕೆ.ಜಿ.ವರೆಗೂ ಇಳುವರಿ ಬಂದಿದೆ. ಕಳೆದ ನಾಲ್ಕು ತಿಂಗಳಿಂದ ಈ ಕೃಷಿಯಲ್ಲಿ ತೊಡಗಿಕೊಂಡಿದ್ದು, ಜನರಿಂದಲೂ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ.

‘ಶಿವಮೊಗ್ಗ ನಗರದ ಪ್ರಯೋಗಶಾಲೆಯಲ್ಲಿ ₹ 100ಕ್ಕೆ ಕೆ.ಜಿ. ಅಣಬೆ ಬೀಜ ಖರೀದಿಸುತ್ತೇನೆ. ಪಾಲಿಥೀನ್ ಚೀಲದಲ್ಲಿ ಸಣ್ಣಗೆ ತುಂಡರಿಸಿದ ಭತ್ತದ ಹುಲ್ಲನ್ನು 8 ಗಂಟೆ ನೀರಿನಲ್ಲಿ ನೆನೆಯಲು ಬಿಡಬೇಕು. ಆನಂತರ 2 ಗಂಟೆ ನೀರಿನಲ್ಲಿ ಬೇಯಿಸಬೇಕು. ಒಗರು ಹುಲ್ಲನ್ನು ನಾಲ್ಕು ಪದರಗಳಲ್ಲಿ ಪಾಲಿಥೀನ್ ಬ್ಯಾಗ್‌ಗಳಿಗೆ ತುಂಬಿಸುತ್ತೇನೆ. ಪ್ರತಿ ಪದರಗಳ ನಡುವೆ ಅಣಬೆ ಬೀಜಗಳನ್ನು ಇರಿಸಲಾಗುತ್ತದೆ. ಸುಮಾರು ಎರಡು ಕೆ.ಜಿ. ತೂಕ ಹೊಂದಿರುತ್ತವೆ. ಔಷಧ, ಗೊಬ್ಬರ, ನೀರು ಬೇಕಿಲ್ಲ. ಮೊದಲ 22 ದಿನಗಳು ಕತ್ತಲು ಕೋಣೆಯಲ್ಲಿ ಇಂತಹ 500 ಚೀಲಗಳನ್ನು ಪೋಷಿಸಲಾಗುತ್ತದೆ. ಕೋಣೆಯ ಉಷ್ಣಾಂಶ 25 ಡಿಗ್ರಿ ಹಾಗೂ ಆರ್ದ್ರತೆ ಶೇ 99 ಇರುವಂತೆ ನೋಡಿಕೊಳ್ಳುತ್ತೇವೆ. ಪ್ಲಾಸ್ಟಿಕ್ ಚೀಲಗಳಿಗೆ ರಂಧ್ರಗಳನ್ನು ಮಾಡಲಾಗುತ್ತದೆ. ಶೀಲಿಂಧ್ರ ತಳಿ ಬೇಗನೆ ಚೀಲದಲ್ಲಿ ವೃದ್ಧಿಸುತ್ತದೆ’ ಎಂದು ವಿವರಿಸುತ್ತಾರೆ ಶರಣಪ್ಪ.

ADVERTISEMENT
ಅಣಬೆ ಕೃಷಿಯಲ್ಲಿ ಪುತ್ತ ಯೋಗೀಶ್ ಜತೆ ಶರಣಪ್ಪ.

‘23ನೇ ದಿನದಲ್ಲಿ ಕಟಾವು ಕೋಣೆಗೆ ಬೆಡ್‌ಗಳನ್ನು ವರ್ಗಾಯಿಸಲಾಗುತ್ತದೆ. ಇಲ್ಲಿ ಗಾಳಿ, ಬೆಳಕು ಸಮೃದ್ಧವಾಗಿ ಲಭಿಸುವಂತೆ ವ್ಯವಸ್ಥೆ ಮಾಡಲಾಗಿದೆ. 5 ಪ್ಲಾಸ್ಟಿಕ್ ಚೀಲದ ಬೆಡ್‌ಗಳನ್ನು ಹಗ್ಗದ ನೆರವಿನಿಂದ ತೂಗು ಬಿಡುತ್ತೇವೆ. 25ನೇ ದಿನದಿಂದ ಪಾಲಿಥೀನ್ ಬೆಡ್‌ಗಳ ರಂಧ್ರಗಳ ಮೂಲಕ ಅಣಬೆ ಹೂವಿನ ದಳಗಳಂತೆ ಅರಳಿ ಹೊರಹೊಮ್ಮುತ್ತೆ. 45 ದಿನಗಳ ಜೀವಿತಾವಧಿಯಲ್ಲಿ ಒಂದು ಬ್ಯಾಗ್‌ನಿಂದ ಮೂರು ಬಾರಿ ಕೊಯ್ಲು ಮಾಡಲಾಗುತ್ತದೆ. ಒಂದು ಬ್ಯಾಗ್‌ನಲ್ಲಿ 800 ಗ್ರಾಂ ಇಳುವರಿ ತೆಗೆದಿದ್ದೇನೆ. ನಿತ್ಯ ಬೆಳಿಗ್ಗೆ ಅವುಗಳನ್ನು ಬಿಡಿಸುತ್ತೇವೆ. ತಲಾ 200 ಗ್ರಾಂ ಪೌಚ್‌ಗಳಲ್ಲಿ ಅವುಗಳ ಪ್ಯಾಕಿಂಗ್ ಮಾಡಿದರೆ ಮಾರಾಟಕ್ಕೆ ಸಿದ್ಧ. ನಿತ್ಯ ಮೂರು ಬಾರಿ ನೀರು ಸಿಂಪಡಿಸುತ್ತೇನೆ. ಸದ್ಯ 700 ಚೀಲಗಳನ್ನು ಪೋಷಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

‘ಶಿವಮೊಗ್ಗ, ದಾವಣಗೆರೆ ನಗರಗಳಲ್ಲಿ ಮಾರುಕಟ್ಟೆ ಕಂಡುಕೊಳ್ಳಲಾಗಿದೆ. ಸ್ಥಳೀಯವಾಗಿ ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಉನ್ನತ ಅಧಿಕಾಗಳು ಕರೆ ಮಾಡಿ ಪಡೆಯುತ್ತಿದ್ದಾರೆ. ಶಿವಮೊಗ್ಗದಲ್ಲಿ ಸರ್ಕಾರಿ ಕಚೇರಿ ಎದುರು ಅಣಬೆಗೆ ಬೇಡಿಕೆ ಹೆಚ್ಚು. ಒಮ್ಮೆ ಕಿತ್ತು ಪ್ಯಾಕಿಂಗ್ ಮಾಡಿದ ಅಣಬೆ ಮೂರು ದಿನಗಳು ಪೋಷಕಾಂಶ ಭರಿತವಾಗಿರುತ್ತವೆ’ ಎನ್ನುತ್ತಾರೆ ಪುತ್ರ ಯೋಗೀಶ್.

ಮಾರಾಟಕ್ಕೆ ಸಿದ್ಧವಾಗಿರುವ ತಲಾ 200 ಗ್ರಾಂ ಪ್ಯಾಕ್‌ ಮಾಡಿರುವ ಅಣಬೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.