ದಾವಣಗೆರೆ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ಪರಿಸ್ಥಿತಿ ಸೃಷ್ಟಿಯಾದರೆ ಆ ಹುದ್ದೆಗೆ ಪರಿಶಿಷ್ಟ ಜಾತಿ, ಪಂಗಡದ ನಾಯಕರನ್ನು ಪರಿಗಣಿಸಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಚಿವರಾದ ಜಿ.ಪರಮೇಶ್ವರ, ಎಚ್.ಸಿ.ಮಹದೇವಪ್ಪ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಛಲವಾದಿ ಮಹಾಸಭಾ ಆಗ್ರಹಿಸಿದೆ.
‘ಮಲ್ಲಿಕಾರ್ಜುನ್ ಖರ್ಗೆ 50 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ. ಜಿ. ಪರಮೇಶ್ವರ ಸತತ 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇವರು ಮುಖ್ಯಮಂತ್ರಿ ಹುದ್ದೆಗೆ ಏರುವ ಅವಕಾಶ ಹಲವು ಬಾರಿ ತಪ್ಪಿ ಹೋಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಲಕ್ಷ್ಯ ತೋರಿದರೆ ಬಲಗೈ ಸಮುದಾಯ ಪಕ್ಷನಿಷ್ಠೆ ಬದಲಿಸಲಿದೆ’ ಎಂದು ಮಹಾಸಭಾ ಅಧ್ಯಕ್ಷ ಎಚ್.ಕೆ. ಬಸವರಾಜ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
‘ಪರಿಶಿಷ್ಟ ಜಾತಿಯ ಬಲಗೈ ಸಮುದಾಯ ಕಾಂಗ್ರೆಸ್‌ಗೆ ನಿಷ್ಠವಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರನ್ನು ಪಕ್ಷಕ್ಕೆ ನೀಡಿದೆ. ಸಮುದಾಯವು ಕಾಂಗ್ರೆಸ್ ಬೆನ್ನೆಲುಬಾಗಿ ನಿಂತಿದೆ. ಸಮುದಾಯದ ನಾಯಕರಿಗೆ ಪಕ್ಷದ ಸ್ಥಾನಮಾನಗಳು ಸಿಕ್ಕಿವೆಯೇ ಹೊರತು ಸಾಂವಿಧಾನಿಕ ಹುದ್ದೆ ಸರಿಯಾಗಿ ದೊರಕಿಲ್ಲ. ಸಾಂವಿಧಾನಿಕ ಹುದ್ದೆಗಳ ವಿಚಾರದಲ್ಲಿ ಸಮುದಾಯಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪರಿಶಿಷ್ಟ ಜಾತಿ ಮತ್ತು ಪಂಗಡ ರಾಜ್ಯದಲ್ಲಿ 1.40 ಕೋಟಿ ಜನಸಂಖ್ಯೆ ಹೊಂದಿದೆ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಕಳೆದರೂ ದಲಿತ ಸಮುದಾಯದ ಒಬ್ಬ ನಾಯಕರಿಗೂ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಸಚಿವರಾದ ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ದಲಿತ ನಾಯಕರಿಗೆ ಅವಕಾಶ ಕಲ್ಪಿಸದೇ ಹೋದರೆ, ಸಾಂವಿಧಾನಿಕ ಹಕ್ಕು ಕಿತ್ತುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಬಹುದು’ ಎಂದು ಹೇಳಿದರು.
ಛಲವಾದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರುದ್ರಮುನಿ, ಮುಖಂಡರಾದ ಎಚ್.ಬಿ.ಜಯಪ್ರಕಾಶ್, ಎ.ಡಿ.ರೇವಣಸಿದ್ಧಪ್ಪ, ಜಿ.ವಿ.ಗಂಗಾಧರ್, ಎಚ್.ಚಂದ್ರಪ್ಪ, ಟಿ.ಎಸ್.ರಾಮಯ್ಯ, ಅಣ್ಣಪ್ಪ ತಣ್ಣೀಗೆರೆ ಹಾಜರಿದ್ದರು.
‘ಅಲೆಮಾರಿ: ಶೇ 1 ಮೀಸಲಾತಿ ನೀಡಿ’:
‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಸೌಲಭ್ಯ ಕಲ್ಪಿಸುವ ಭರದಲ್ಲಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗಿದೆ. ನಾಗಮೋಹನದಾಸ್ ಆಯೋಗದ ಶಿಫಾರಸ್ಸಿನಂತೆ ಅಲೆಮಾರಿ ಸಮುದಾಯಕ್ಕೆ ಶೇ 1ರಷ್ಟು ಮೀಸಲಾತಿ ನೀಡಬೇಕು’ ಎಂದು ಛಲವಾದಿ ಮಹಾಸಭಾ ಅಧ್ಯಕ್ಷ ಎಚ್.ಕೆ. ಬಸವರಾಜ್ ಆಗ್ರಹಿಸಿದರು.
‘ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ವರ್ಗ ಸೃಷ್ಟಿಸಿ ಶೇ 1ರಷ್ಟು ಮೀಸಲಾತಿಗೆ ಆಯೋಗ ಶಿಫಾರಸು ಮಾಡಿತ್ತು. ಸ್ಪೃಶ್ಯ ಜಾತಿಗಳ ‘ಸಿ’ ಗುಂಪಿಗೆ ಶೇ 4 ಮೀಸಲಾತಿ ನಿಗದಿಪಡಿಸಿತ್ತು. ರಾಜ್ಯ ಸರ್ಕಾರವು ಅಲೆಮಾರಿ ಸಮುದಾಯವನ್ನು ‘ಸಿ’ ಗುಂಪಿಗೆ ಸೇರಿಸುವ ಮೂಲಕ ಅನ್ಯಾಯ ಮಾಡಿದೆ. ‘ಸಿ’ ಗುಂಪಿನಿಂದ ಅಲೆಮಾರಿ ಸಮುದಾಯವನ್ನು ಬೇರ್ಪಡಿಸಿ ಶೇ 1ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.