
ದಾವಣಗೆರೆ: ಮಧ್ಯ ಕರ್ನಾಟಕದ ಬೆಣ್ಣೆನಗರಿಯಲ್ಲಿ ಬುಧವಾರ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬಣ್ಣದೋಕಳಿ, ಕಣ್ಮನ ಸೆಳೆಯುವ ವರ್ಣಗಳಲ್ಲಿ ಕಂಗೊಳಿಸುತ್ತಿದೆ. ತರಹೇವಾರಿ ಬಣ್ಣಗಳನ್ನು ಎರಚಿ ಡಿ.ಜೆ ಸಂಗೀತದ ಅರಬ್ಬಕ್ಕೆ ಯುವಜನ ಕುಣಿದು ಕುಪ್ಪಳಿಸುತ್ತಿದ್ದಾರೆ.
ಮಂಗಳವಾರ ರಾತ್ರಿ ಕಾಮಣ್ಣನ ದಹನ ಮಾಡಿದ ಜನರು ಬೆಳಗಾಗುವ ಹೊತ್ತಿಗೆ ಬಣ್ಣದ ಹಬ್ಬಕ್ಕೆ ಸಜ್ಜಾಗಿದ್ದರು. ಬೀದಿ ಬೀದಿಗಳಲ್ಲಿ ಬಣ್ಣಗಳನ್ನು ಎರಚಿ ಮುನ್ನುಡಿ ಬರೆದರು. ನಗರದ ಯಾವುದೇ ಬೀದಿಗೆ ಕಾಲಿಟ್ಟರೂ ಹೋಳಿ ಸಡಗರ ತುಂಬಿದೆ. ಪ್ರಮುಖ ವೃತ್ತ, ಬೀದಿ ಹಾಗೂ ಇತರ ಸ್ಥಳಗಳಲ್ಲಿ ಸಾಮೂಹಿಕವಾಗಿ ಜಮಾಯಿಸಿ ಹೋಳಿ ಆಚರಿಸುತ್ತಿದ್ದಾರೆ.
ಬಣ್ಣವನ್ನು ಕೈಯಲ್ಲಿ ಹಿಡಿದ ಮಕ್ಕಳು, ಯುವಜನರು ಬೀದಿ ಬೀದಿಗಳಲ್ಲಿ ಸುತ್ತಾಡುತ್ತಿದ್ದಾರೆ. ಸ್ನೇಹಿತರು, ಸಂಬಂಧಿಕರು ಹಾಗೂ ಪರಿಚಯಸ್ಥರಿಗೆ ಬಣ್ಣ ಹಚ್ಚಿದರು. ನೀರಿನಲ್ಲಿ ಬೆರೆಸಿದ ಬಣ್ಣದ ಓಕಳಿಯನ್ನು ಎರಚಿದರು. ಹಿರಿಯರು, ಕುಟುಂಬದ ಸದಸ್ಯರು ಜೊತೆಯಾದರು. ದ್ವಿಚಕ್ರ ವಾಹನಗಳಲ್ಲಿ ಸುತ್ತುತ್ತ ಬಣ್ಣಗಳನ್ನು ಗಾಳಿಯಲ್ಲಿ ತೂರಿದರು.
ಹೋಳಿ ಹಬ್ಬದ ಪ್ರಮುಖ ಆಕರ್ಷಣೆ ಆಗಿರುವ ‘ರಾಮ್ ಅಂಡ್ ಕೋ’ ವೃತ್ತ ಹೋಳಿ ಹಬ್ಬಕ್ಕೆ ವಿಶೇಷ ರೀತಿಯಲ್ಲಿ ಸಜ್ಜಾಗಿತ್ತು. ವೃತ್ತವನ್ನು ಸಂಪರ್ಕಿಸುವ ನಾಲ್ಕು ರಸ್ತೆಗಳನ್ನು ಬಣ್ಣದ ಬಟ್ಟೆಯಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆ ಮನೆ, ಬೀದಿ ಹಾಗೂ ಬಡಾವಣೆಯಲ್ಲಿ ಹಬ್ಬ ಆಚರಿಸಿದ ಜನರು ಬಳಿಕ ‘ರಾಮ್ ಅಂಡ್ ಕೋ’ ವೃತ್ತದಲ್ಲಿ ಜಮಾಯಿಸಿದರು. ಸಾವಿರಾರು ಜನರು ಸಾಮೂಹಿಕವಾಗಿ ಹಬ್ಬ ಆಚರಿಸಿದರು.
ಬಣ್ಣದ ಜೊತೆಗೆ ಡಿ.ಜೆ ಸಂಗೀತ ಜೊತೆಯಾಗಿದ್ದು ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತ್ತು. ಕನ್ನಡ ಹಾಗೂ ಹಿಂದಿಯ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕುತ್ತ ಪರಸ್ಪರ ಬಣ್ಣ ಹಚ್ಚಿಕೊಂಡರು. ಕೇಕೆ ಹಾಕುತ್ತ, ಸಿಳ್ಳೆ ಹೊಡೆಯುತ್ತ ಖುಷಿ ಹಂಚಿಕೊಂಡರು. ಯುವಕರು ಮೈ ಮೇಲಿನ ಟೀ ಷರ್ಟ್ ಬಿಚ್ಚಿ ಗಾಳಿಯಲ್ಲಿ ತೂರಿದರು. ಶಾಲೆ, ಕಾಲೇಜುಗಳಿಗೆ ರಜೆ ಇದ್ದ ಕಾರಣಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು.
ಎಂಸಿಸಿ ‘ಬಿ’ ಬಡಾವಣೆಯ ಈಜುಕೊಳ ಸಮೀಪ, ಎಸ್.ಎಸ್. ಬಡಾವಣೆ, ದೇವರಾಜ ಅರಸು ಬಡಾವಣೆ, ವಿದ್ಯಾನಗರ, ಆಂಜನೇಯ ಬಡಾವಣೆ, ಪಿ.ಜೆ.ಬಡಾವಣೆ ಸೇರಿದಂತೆ ನಗರದ ವಿವಿಧೆಡೆ ಸಂಘಟನೆಗಳು, ಸ್ನೇಹಿತರ ಬಳಗಗಳ ವತಿಯಿಂದ ಸಾಮೂಹಿಕ ಹೋಳಿ ಆಚರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇಂತಹ ಸ್ಥಳಗಳಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರಿಂದ ಸಂಚಾರ ಸಮಸ್ಯೆ ಉಂಟಾಗಿದೆ. ಕೆಲ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪೊಲೀಸರು ವೀಕ್ಷಣಾ ಗೋಪುರಗಳ ಮೇಲೆ ನಿಂತು ನಿಗಾ ಇಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.