
ದಾವಣಗೆರೆಯ ರೇಣುಕ ಮಂದಿರದಲ್ಲಿ ಆಯೋಜಿಸಿದ್ದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದ್ದರು.
ದಾವಣಗೆರೆ: ಹೊಸ ಕನಸು, ಭರವಸೆಯೊಂದಿಗೆ ನೂತನ ವರ್ಷವನ್ನು (2026) ಸ್ವಾಗತಿಸಲು ಜಿಲ್ಲೆ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿ ಕೇಕ್ ಕತ್ತರಿಸಲು ಜನತೆ ಕುತೂಹಲದಿಂದ ಕಣ್ಣರಳಿಸುತ್ತಿದೆ. ನವ ಸಂವತ್ಸರಕ್ಕೆ ಕಾಲಿಡುವ ಮುನ್ನ ಹಿಂದಿನ ವರ್ಷದ ಪ್ರಮುಖ ಘಟನಾವಳಿಗಳನ್ನು ಅವಲೋಕಿಸುವ ಸಮಯ ಇದಾಗಿದೆ.
2025– ಜಿಲ್ಲೆಯ ಪಾಲಿಗೆ ಸಿಹಿ – ಕಹಿಗಳ ಸಮ್ಮಿಶ್ರಣದ ವರ್ಷವಾಗಿದೆ. ಮಹಾ ದಾನಿ, ಉದ್ಯಮಿ, ಜನಾನುರಾಗಿಯಾಗಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಡಿ.14ರಂದು ಕೊನೆಯುಸಿರೆಳೆದಿದ್ದರು. ಅವರ ಸಾವಿನೊಂದಿಗೆ ಜಿಲ್ಲೆಯ ಬಹು ದೊಡ್ಡ ರಾಜಕೀಯ, ಶೈಕ್ಷಣಿಕ ಹಾಗೂ ಸಮಾಜಮುಖಿ ಕೊಂಡಿಯೊಂದು ಕಳಚಿದಂತಾಯಿತು.
ಎಸ್‌ಎಸ್ ನಿಧನಕ್ಕೆ ಇಡೀ ಜಿಲ್ಲೆಯೇ ಕಣ್ಣೀರಾಯಿತು. ಅವರ ಶಿವಗಣಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಪಕ್ಷಬೇಧ ಮರೆತು ವಿವಿಧ ಪಕ್ಷಗಳ ರಾಜಕೀಯ ಧುರೀಣರು, ವಿವಿಧ ಕ್ಷೇತ್ರಗಳ ಗಣ್ಯರು, ಮಠಾಧೀಶರು ಭಾಗಿಯಾಗಿದ್ದರು. ಇದು ಅವರು ಗಳಿಸಿದ್ದ ‘ಜನಪ್ರೀತಿ’ಯನ್ನು ಸಾಕ್ಷೀಕರಿಸಿತು.
ಈ ಬಾರಿ ಉತ್ತಮ ಮಳೆ– ಬೆಳೆಯಾದರೂ, ಕೆಲವು ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿತು. ವಾರಗಳ ಕಾಲ ನಿರಂತರವಾಗಿ ಸುರಿದ ವರ್ಷಧಾರೆಯಿಂದ ರೈತರು ಕಂಗೆಡುವ ಸ್ಥಿತಿಯೂ ಎದುರಾಗಿತ್ತು. ಭತ್ತಕ್ಕೆ ಎಂಎಸ್‌ಪಿಗಿಂತಲೂ ಅಧಿಕ ದರ ದೊರೆತದ್ದು ಅನ್ನದಾತರ ಖುಷಿಗೆ ಕಾರಣವಾದರೆ, ಮೆಕ್ಕೆಜೋಳಕ್ಕೆ ನಿರೀಕ್ಷಿತ ದರ ದೊರೆಯದಿರುವುದು ಬೇಸರಕ್ಕೆ ದೂಡಿತು.
ಬಿಜೆಪಿ ಜಿಲ್ಲಾ ಘಟಕದ ಬಣ ರಾಜಕೀಯ ಈ ವರ್ಷವೂ ಮುಂದುವರಿಯಿತು. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗುಂಪುಗಳ ನಡುವಿನ ತಿಕ್ಕಾಟ, ವಾಗ್ದಾಳಿಗೆ ಕಡಿವಾಣ ಬೀಳಲಿಲ್ಲ.
ದಾವಣಗೆರೆ ತಾಲ್ಲೂಕಿನ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ಎರಡು ರಾಟ್‌ವೈಲರ್ ನಾಯಿಗಳು ನಡೆಸಿದ ದಾಳಿಗೆ ಮಹಿಳೆಯೊಬ್ಬರು ಪ್ರಾಣ ತೆತ್ತರು. ಸೈಬರ್ ಅಪರಾಧ ಠಾಣೆ ಪೊಲೀಸರು ₹2,200 ಕೋಟಿ ಮೊತ್ತದ ವಹಿವಾಟು ನಡೆದಿದ್ದ ವಂಚನೆಯ ಪ್ರಕರಣವನ್ನು ಬಯಲಿಗೆಳೆದರು.
ನ್ಯಾಮತಿ ಪಟ್ಟಣದಲ್ಲಿನ ಎಸ್‌ಬಿಐ ಶಾಖೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಗಳನ್ನೂ ಪೊಲೀಸರು ಹೆಡೆಮುರಿ ಕಟ್ಟಿದರು. ಒಟ್ಟು 17 ಕೆ.ಜಿ 750 ಗ್ರಾಂ ಚಿನ್ನಾಭರಣದ ಪೈಕಿ 17 ಕೆ.ಜಿ. 100 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ಯಾತ್ರೆ ಸಾಗಿದ್ದಾಗ ಸೇರಿದ್ದ ಜನಸ್ತೋಮ
ಜನವರಿ
6, 7: ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾಡಳಿತದಿಂದ ಎರಡು ದಿನಗಳ ರಾಜ್ಯಮಟ್ಟದ ಯುವಜನೋತ್ಸವ ನಡೆದಿತ್ತು.
* 11, 12: ಜಗಳೂರು ಪಟ್ಟಣದಲ್ಲಿ 3 ದಶಕಗಳ ತರುವಾಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಎ.ಬಿ.ರಾಮಚಂದ್ರಪ್ಪ ಸಮ್ಮೇಳನದ ಅಧ್ಯಕ್ಷರಾಗಿದ್ದರು.
* 14: ಹರಿಹರ ಹೊರವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಮಕರ ಸಂಕ್ರಾಂತಿ, ಕಿತ್ತೂರು ರಾಣಿ ಚನ್ನಮ್ಮ ದ್ವಿಶತಮಾನೋತ್ಸವ, ವಚನಾನಂದ ಶ್ರೀಗಳ 7ನೇ ವಾರ್ಷಿಕ ಪೀಠಾರೋಹಣ ಮತ್ತು ಹರಜಾತ್ರೆ ನಡೆದಿತ್ತು.
* ಫೆಬ್ರುವರಿ
8, 9: ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ನಡೆದಿತ್ತು.
* 13, 15: ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಭಾಯಾಗಡದಲ್ಲಿ ಸಂತ ಸೇವಾಲಾಲ್ ಅವರ 286ನೇ ಜನ್ಮ ದಿನಾಚರಣೆ ಪ್ರಯುಕ್ತ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
ಮಾರ್ಚ್
29: ಜೆಜೆಎಂ ವೈದ್ಯಕೀಯ ಕಾಲೇಜು ಆವರಣದ ಬಾಪೂಜಿ ಸಭಾಂಗಣದಲ್ಲಿ ‘ಸಂವಾದ ಹಾಗೂ ಹಾಸ್ಯ ನಾಟಕ’ ಪ್ರದರ್ಶನ ನಡೆದಿತ್ತು. ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಭಾಗವಹಿಸಿದ್ದರು.
ಏಪ್ರಿಲ್
26: ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ಸಂವಿಧಾನ ಸಂರಕ್ಷಣಾ ಪಡೆ ವತಿಯಿಂದ ಸಂವಿಧಾನ ಸಂರಕ್ಷಕರ ಸಮಾವೇಶ ನಡೆದಿತ್ತು. ಚಿಂತಕರಾದ ಬರಗೂರು ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಬಿ.ಟಿ.ಲಲಿತಾ ನಾಯಕ್, ಗುರುಪ್ರಸಾದ್ ಕೆರಗೋಡು, ನೂರ್ ಶ್ರೀಧರ್ ಸೇರಿ ಹಲವರು ಭಾಗವಹಿಸಿದ್ದರು.
ಜೂನ್
16: ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು 95ನೇ ಜನ್ಮದಿನ ಆಚರಿಸಿಕೊಂಡಿದ್ದರು.
ಆಗಸ್ಟ್
3: ದಾವಣಗೆರೆ ವಿಶ್ವವಿದ್ಯಾಲಯ, ಎಸ್.ಎಸ್. ಕೇರ್ ಟ್ರಸ್ಟ್ ಹಾಗೂ ‘ಐಎಎಸ್ ಬಾಬಾ’ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ಆರಂಭಿಸಿದ್ದ ‘ಸಂಕಲ್ಪ’ ಕೇಂದ್ರಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಚಾಲನೆ ನೀಡಿದ್ದರು.
ಸೆಪ್ಟೆಂಬರ್
24: ದಾವಣಗೆರೆಯ ಬೇತೂರು ರಸ್ತೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಎರಡು ಗುಂಪುಗಳ ನಡುವೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿತ್ತು. ‘ಐ ಲವ್ ಮಹಮ್ಮದ್’ ಎಂಬ ಫ್ಲೆಕ್ಸ್ ಅಳವಡಿಕೆ ವಿಚಾರಕ್ಕೆ ಘರ್ಷಣೆ ನಡೆದಿತ್ತು.
ನವೆಂಬರ್
28: 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಜವಳಿ ಮಳಿಗೆ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ 7 ಕಿ.ಮೀ. ಉದ್ದದ ಕನ್ನಡ ಬಾವುಟದ ಮೆರವಣಿಗೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.
23: ಬೀರಲಿಂಗೇಶ್ವರ ಮೈದಾನದಲ್ಲಿ ಭಾರೀ ಕಾಟಾ ನಿಕಾಲಿ ಜಂಗಿ ಬಯಲು ಕುಸ್ತಿ ನಡೆದಿತ್ತು. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಭಾಗವಹಿಸಿದ್ದರು.
25: ನಗರ ಹೊರ ವಲಯದ ಕುಂದವಾಡ ಕೆರೆಯಲ್ಲಿ ಯುವಕರಿಬ್ಬರು ರಾತ್ರಿ ವೇಳೆ ಮೀನು ಹಿಡಿಯಲು ಹೋಗಿ ಬಲೆಗೆ ಸಿಲುಕಿ, ಹೊರಬಾರಲಾಗದೇ ಮೃತಪಟ್ಟಿದ್ದರು.
ಆತಂಕ ಮೂಡಿಸಿದ್ದ ಅಮ್ಜದ್ ದುಷ್ಕೃತ್ಯ
ಬಾಲಕಿಯೂ ಸೇರಿದಂತೆ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಆ ದೃಶ್ಯ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟ ಪ್ರಕರಣದಲ್ಲಿ ಪೊಲೀಸರು ಆರೋಪಿ ಅಮ್ಜದ್‌ನನ್ನು ಜ.31ರಂದು ಬಂಧಿಸಿದ್ದರು.
ಚನ್ನಗಿರಿ ಪಟ್ಟಣದಲ್ಲಿ ಮೆಡಿಕಲ್ ಶಾಪ್ ಹೊಂದಿದ್ದ ಆರೋಪಿ, ಅಂಗಡಿಗೆ ಬರುವ ಹೆಣ್ಣುಮಕ್ಕಳನ್ನು ಪುಸಲಾಯಿಸಿ ಬಲೆಗೆ ಬೀಳಿಸಿಕೊಂಡು, ಲೈಂಗಿಕ ದೌರ್ಜನ್ಯ ಎಸಗಿದ್ದ.
ಚಿತ್ರೀಕರಿಸಿಕೊಂಡಿದ್ದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಮಹಿಳೆಯರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದ ಎಂಬ ಆರೋಪ ಕೇಳಿಬಂದಿತ್ತು.
ಬೆಚ್ಚಿಬೀಳಿಸಿದ್ದ ರೌಡಿಶೀಟರ್ ಕೊಲೆ
ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಇಸ್ಪೀಟ್ ಕ್ಲಬ್ ಒಂದರಲ್ಲಿ ರೌಡಿಶೀಟರ್ ಸಂತೋಷಕುಮಾರ್ ಅಲಿಯಾಸ್ ಕಣುಮ ಸಂತೋಷ್ (50)ನನ್ನು ದುಷ್ಕರ್ಮಿಗಳು ಮೇ 5ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದ ಕೆಟಿಜೆ ನಗರ ನಿವಾಸಿ ಕಣುಮ ಸಂತೋಷ್ ವಿರುದ್ಧ ಕೊಲೆ, ವಂಚನೆ ಸೇರಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕೆಲ ವರ್ಷಗಳ ಹಿಂದೆ ನಗರದಲ್ಲಿ ನಡೆದಿದ್ದ ರೌಡಿ ಬುಳ್ಳ ನಾಗನ ಕೊಲೆ ಪ್ರಕರಣದಲ್ಲಿ ಕಣುಮ ಪ್ರಮುಖ ಆರೋಪಿಯಾಗಿದ್ದ.
ಆಟೊದಲ್ಲಿ ಬಂದಿದ್ದ ಏಳೆಂಟು ಜನರ ಗುಂಪು ಮುಖಕ್ಕೆ ಕಾಳುಮೆಣಸಿನ ಪುಡಿ ಎರಚಿ, ದಾಳಿ ನಡೆಸಿತ್ತು. ಕೊಲೆ ಪ್ರಕರಣದ 10 ಆರೋಪಿಗಳು ಹೊಳಲ್ಕೆರೆ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದರು.
ಪಂಚಪೀಠಗಳ ಪೀಠಾಧ್ಯಕ್ಷರ ದರ್ಶನ
ಜುಲೈ 21 ಮತ್ತು 22ರಂದು ದಾವಣಗೆರೆಯ ಅಭಿನವ ರೇಣುಕ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ವತಿಯಿಂದ ವೀರಶೈವ ಪೀಠಾಚಾರ್ಯ, ಶಿವಾಚಾರ್ಯರ ಶೃಂಗ ನಡೆದಿತ್ತು. ವೀರಶೈವ ಪಂಚಪೀಠಗಳ ಪೀಠಾಧ್ಯಕ್ಷರು ಒಗ್ಗೂಡಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.