
ದಾವಣಗೆರೆ: ಜಿಲ್ಲೆಯ ವಿವಿಧೆಡೆ ಫೆಬ್ರುವರಿಯಲ್ಲಿ ಜಾತ್ರೆಗಳು ನಡೆದಿದ್ದು, ಮದ್ಯ ಮಾರಾಟ ಕೂಡ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2,787 ಪೆಟ್ಟಿಗೆ ಹೆಚ್ಚುವರಿ ಮದ್ಯ ಮಾರಾಟವಾಗಿದೆ.
ದಾವಣಗೆರೆ ನಗರದ 107 ಮದ್ಯದಂಗಡಿ ಸೇರಿದಂತೆ ಜಿಲ್ಲೆಯಲ್ಲಿ 281 ಮದ್ಯ ಮಾರಾಟ ಮಳಿಗೆಗಳಿವೆ. ಮದ್ಯ ಮಾರಾಟಗಾರರು ಕರ್ನಾಟಕ ರಾಜ್ಯ ಪಾನೀಯ ನಿಗಮದ ಉಗ್ರಾಣದಿಂದ ಮದ್ಯ ಖರೀದಿಸುತ್ತಾರೆ. ಫೆಬ್ರುವರಿ ತಿಂಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚು ಮದ್ಯ ಎತ್ತುವಳಿಯಾಗಿದೆ.
2025ರ ಫೆಬ್ರುವರಿಯಲ್ಲಿ ಜಿಲ್ಲೆಯಲ್ಲಿ ವಿಸ್ಕಿ, ಬ್ರಾಂಡಿ, ಬಿಯರ್‌ನ 1,35,570 ಪೆಟ್ಟಿಗೆ ಮಾರಾಟವಾಗಿತ್ತು. 2026ರ ಫೆಬ್ರುವರಿಯಲ್ಲಿ 1,38,357 ಬಾಕ್ಸ್ ಮದ್ಯ ಮಾರಾಟವಾಗಿದೆ. 2026ರ ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ 5,336 ಪೆಟ್ಟಿಗೆ ಮದ್ಯ ಮಾರಾಟ ಹೆಚ್ಚಳವಾಗಿದೆ.
ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಫೆ.22ರಿಂದ ಫೆ.25ರವರೆಗೆ ನಡೆದಿದೆ. ಹರಿಹರ, ಚನ್ನಗಿರಿ, ಜಗಳೂರು ಹಾಗೂ ಹೊನ್ನಾಳಿ ತಾಲ್ಲೂಕಿನ ವಿವಿಧೆಡೆ ಇದೇ ರೀತಿಯ ಜಾತ್ರೆಗಳು ಜರುಗಿವೆ. ಗ್ರಾಮೀಣ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿಯೂ ಕುರಿ, ಕೋಳಿಗಳನ್ನು ಬಲಿಕೊಡಲಾಗಿದೆ. ಮಾಂಸದೂಟದ ಜೊತೆಗೆ ಮದ್ಯವನ್ನು ಜನರು ಇಷ್ಟಪಟ್ಟು ಸೇವಿಸಿದಂತೆ ಕಾಣುತ್ತಿದೆ.
2,787 ಪೆಟ್ಟಿಗೆ ಹೆಚ್ಚುವರಿ ಮದ್ಯದಲ್ಲಿ ದಾವಣಗೆರೆ ನಗರವೊಂದರಲ್ಲೇ 2,500 ಪೆಟ್ಟಿಗೆ ಮದ್ಯ ಮಾರಾಟವಾಗಿದೆ. 226 ಪೆಟ್ಟಿಗೆ ಚನ್ನಗಿರಿ, 32 ಪೆಟ್ಟಿಗೆ ಹರಿಹರ ಹಾಗೂ 10 ಪೆಟ್ಟಿಗೆ ಮದ್ಯ ಹೊನ್ನಾಳಿ ತಾಲ್ಲೂಕಿನಲ್ಲಿ ಮಾರಾಟವಾಗಿದೆ. ಇದರಲ್ಲಿ ಅತಿ ಹೆಚ್ಚು ವಿಸ್ಕಿ ಹಾಗೂ ಬೇಸಿಗೆ ತಾಪಮಾನ ಏರಿಕೆಯಾಗುತ್ತಿರುವುದರಿಂದ ಬಿಯರ್ ಸೇವನೆ ಕೂಡ ಏರಿಕೆ ಕಂಡಿದೆ.
‘ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಮದ್ಯ ಮಾರಾಟ ಹೆಚ್ಚಾಗುತ್ತದೆ. ಮಾಂಸದೂಟದ ಜೊತೆಗೆ ಮದ್ಯದ ಆತಿಥ್ಯ ಒದಗಿಸುವುದು ಜೀವನಶೈಲಿಯ ಭಾಗವಾಗುತ್ತಿದೆ. ಉತ್ತಮ ದರ್ಜೆಯ ಮದ್ಯವೇ ಹೆಚ್ಚು ಮಾರಾಟವಾಗಿದೆ’ ಎನ್ನುತ್ತಾರೆ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಈಶ್ವರ್ ಸಿಂಗ್.
ಜಾತ್ರೆಗಳ ಸಂದರ್ಭದಲ್ಲಿ ಮದ್ಯ ಮಾರಾಟ ಸಹಜವಾಗಿ ಹೆಚ್ಚಾಗುತ್ತದೆ. ಮಾಂಸದೂಟದ ಜೊತೆಗೆ ಮದ್ಯ ಸೇವನೆಯನ್ನು ಜನ ಇಷ್ಟಪಡುತ್ತಾರೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೆವುಸಿ.ಎನ್.ಜುನೈ ಉಪ ಆಯುಕ್ತ ಅಬಕಾರಿ ಇಲಾಖೆ
ದಾವಣಗೆರೆ ನಗರದ ಮದ್ಯದಂಗಡಿಗಳಲ್ಲಿ ಫೆ.25ರಂದು ಹೆಚ್ಚು ಮದ್ಯ ಮಾರಾಟವಾಗಿದೆ. ಒಂದೇ ದಿನ ಅಂದಾಜು ₹ 45 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿದೆಈಶ್ವರ್ ಸಿಂಗ್ ಅಧ್ಯಕ್ಷ ಜಿಲ್ಲಾ ಮದ್ಯ ಮಾರಾಟಗಾರರ ಸಂಘ
ಮದ್ಯ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧೆಡೆ ಫೆಬ್ರುವರಿಯಲ್ಲಿ 6 ಪ್ರಕರಣಗಳು ದಾಖಲಾಗಿವೆ. ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ‘ಗೋವಾದಿಂದ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದವರನ್ನು ಪತ್ತೆ ಮಾಡಿದ 2 ಪ್ರಕರಣಗಳನ್ನು ದಾಖಲಿಸಲಾಗಿದೆ. ಗೋವಾದ ಮದ್ಯ ರೈಲಿನಲ್ಲಿ ಬರುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು. 13 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ದು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದವರ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಎನ್. ಜುನೈ ತಿಳಿಸಿದ್ದಾರೆ.
Cut-off box - ದೇಗುಲದ ಸುತ್ತ ಮದ್ಯ ನಿಷೇಧವಿತ್ತು ದುರ್ಗಾಂಬಿಕಾ ದೇವಿ ಹಾಗೂ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲದ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಫೆ.22ರಿಂದ ಫೆ.25ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಿಸುವುದು ಸೂಕ್ತ ಎಂಬ ಪ್ರಸ್ತಾವವನ್ನು ಪೊಲೀಸ್ ಇಲಾಖೆ ಜಿಲ್ಲಾಧಿಕಾರಿ ಮುಂದೆ ಇಟ್ಟಿತ್ತು. ದೇಗುಲ ಹಾಗೂ ಜಾತ್ರಾ ಮಹೋತ್ಸವದ ಪಾವಿತ್ರ್ಯದ ದೃಷ್ಟಿಯಿಂದಲೂ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾಡಳಿತವನ್ನು ಅನೇಕರು ಕೋರಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.