
ದಾವಣಗೆರೆ: ಪ್ರಾಣಿ ಕಳೇಬರದ ತುಂಡು ಹಿಡಿದಿದ್ದ ವ್ಯಕ್ತಿಯೊಬ್ಬ ದುರ್ಗಮ್ಮನ ಜಾತ್ರೆಗೆ ಬಂದಿದ್ದ ಜನರ ಮೇಲೆ ಏಕಾಏಕಿ ದಾಳಿ ನಡೆಸಿ ನೂಕುನುಗ್ಗಲಿಗೆ ಕಾರಣವಾಗಿರುವ ಘಟನೆ ಇಲ್ಲಿನ ಬಸವರಾಜಪೇಟೆಯಲ್ಲಿ ಬುಧವಾರ ನಸುಕಿನಲ್ಲಿ ನಡೆದಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಾಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜನರು ಚೆಲ್ಲಾಪಿಲ್ಲಿಯಾಗಿದ್ದ ರಿಂದ ನೂಕುನುಗ್ಗಲು ಉಂಟಾಗಿದೆ. ಅನೇಕರು ಭಯದಿಂದ ಕೆಳಗೆ ಬಿದ್ದು ತೀವ್ರ ಸಮಸ್ಯೆ ಎದುರಿಸಿದ್ದಾರೆ. ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ದಿನ ಜನರಲ್ಲಿ ಭೀತಿ ಉಂಟುಮಾಡಿದ ವ್ಯಕ್ತಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಪ್ರಾಣಿಯ ರಕ್ತಸಿಕ್ತ ಕಾಲನ್ನು ಆಯುಧದ ರೀತಿಯಲ್ಲಿ ಹಿಡಿದು ವ್ಯಕ್ತಿ ಜನರತ್ತ ನುಗ್ಗಿದ್ದಾನೆ. ದಿಕ್ಕಾಪಾಲಾಗಿ ಓಡುವಾಗ ಕೆಲವರು ಕೆಳಗೆ ಬಿದ್ದಿರುವುದು ವಿಡಿಯೊದಲ್ಲಿದೆ.
‘ವಿಡಿಯೊ ಪರಿಶೀಲಿಸಲಾಗುತ್ತಿದೆ. ಮದ್ಯ ಸೇವಿಸಿದ್ದ ಯುವಕ ದುಂಡಾವರ್ತನೆ ತೋರಿದ್ದು ಪತ್ತೆಗೆ ಕ್ರಮ ವಹಿಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಡಾ.ಎಚ್.ಟಿ. ಶೇಖರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.