ADVERTISEMENT

ದಾವಣಗೆರೆ: ಪಿಂಚಣಿ ಸಮಸ್ಯೆಗೆ ಸಿಕ್ಕಿತು ಪರಿಹಾರ

ಮಾಜಿ ಸೈನಿಕರಿಗೆ ನೆರವಾದ ಭಾರತೀಯ ವಾಯು ಸೇನೆ ಸಂಘ, ಎರಡು ದಿನಗಳ ಶಿಬಿರ ಆರಂಭ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 10:48 IST
Last Updated 14 ಫೆಬ್ರುವರಿ 2026, 10:48 IST
ದಾವಣಗೆರೆಯ ಬಿಐಇಟಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ‘ಸ್ಪರ್ಶ್‌ ಸಹಾಯತಾ ಶಿಬಿರ’ದಲ್ಲಿ ಮಾಜಿ ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರ ಪಿಂಚಣಿ ಸಂಬಂಧಿ ಸಮಸ್ಯೆಗಳನ್ನು ಆಲಿಸಿದ ಭಾರತೀಯ ಸೇನೆಯ ಅಧಿಕಾರಿಗಳು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಬಿಐಇಟಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ‘ಸ್ಪರ್ಶ್‌ ಸಹಾಯತಾ ಶಿಬಿರ’ದಲ್ಲಿ ಮಾಜಿ ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರ ಪಿಂಚಣಿ ಸಂಬಂಧಿ ಸಮಸ್ಯೆಗಳನ್ನು ಆಲಿಸಿದ ಭಾರತೀಯ ಸೇನೆಯ ಅಧಿಕಾರಿಗಳು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಸೇವಾ ಪುಸ್ತಕ, ಬ್ಯಾಂಕ್‌ ಹಾಗೂ ಆಧಾರ್‌ ದಾಖಲೆಗಳ ಹೊಂದಾಣಿಕೆಯ ಸಮಸ್ಯೆಯಿಂದ ಪಿಂಚಣಿ ಪಡೆಯಲು ಪರದಾಡುತ್ತಿದ್ದ ಮಾಜಿ ಸೈನಿಕರಿಗೆ ‘ಸ್ಪರ್ಶ್‌’ ಶಿಬಿರ ಪರಿಹಾರ ಒದಗಿಸಿತು. ಪ್ರಯಾಗ್‌ರಾಜ್‌ನಿಂದ ಆಗಮಿಸಿರುವ ಅಧಿಕಾರಿಗಳು ನೂರಾರು ಮಾಜಿ ಸೈನಿಕರ ಪಿಂಚಣಿ ಸಮಸ್ಯೆಗಳನ್ನು ಬಗೆಹರಿಸಿದರು.

ಮಾಜಿ ಸೈನಿಕರಿಗೆ ಪಿಂಚಣಿ ನೀಡಲು ರೂಪಿಸಿರುವ ‘ಸ್ಪರ್ಶ್‌’ ತಂತ್ರಾಂಶ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಭಾರತೀಯ ವಾಯು ಸೇನೆ ಸಂಘವು ನಗರದ ಬಾಪೂಜಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಶಿಬಿರಕ್ಕೆ ಶುಕ್ರವಾರ ಚಾಲನೆ ಸಿಕ್ಕಿತು. ಸಂಘದ ಅಧ್ಯಕ್ಷ, ನಿವೃತ್ತ ಏರ್‌ ಮಾರ್ಷಲ್‌ ಎಚ್‌.ಬಿ. ರಾಜಾರಾಮ್‌ ಶಿಬಿರವನ್ನು ಉದ್ಘಾಟಿಸಿದರು. ಶನಿವಾರ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಲಿದೆ.

ದಾವಣಗೆರೆ, ಚಿತ್ರದುರ್ಗ, ಹಾವೇರಿ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಯ ಮಾಜಿ ಸೈನಿಕರು ಶಿಬಿರಕ್ಕೆ ಧಾವಿಸಿದ್ದರು. ಸೇವಾ ಪುಸ್ತಕದಲ್ಲಿನ ನ್ಯೂನತೆ, ಅಗತ್ಯ ದಾಖಲೆಗಳ ತಿದ್ದುಪಡಿ, ಪತ್ನಿ ಹೆಸರು ನೋಂದಣಿ ಸೇರಿದಂತೆ ಹಲವು ತೊಂದರೆಗಳನ್ನು ಹೊತ್ತು ತಂದಿದ್ದರು. ಉತ್ತರಪ್ರದೇಶದ ಪ್ರಯಾಗ್‌ರಾಜ್‌ ಸೇನಾ ಪಿಂಚಣಿ ಕೇಂದ್ರ ಕಚೇರಿಯಿಂದ ಬಂದಿದ್ದ ಅಧಿಕಾರಿಗಳು ಅಹವಾಲುಗಳನ್ನು ಆಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಕ್ಕಿತು. ಇನ್ನೂ ಕೆಲ ತೊಂದರೆಗಳಿಗೆ ದಾಖಲೆಗಳ ತಿದ್ದುಪಡಿಗೆ ಸಲಹೆಗಳನ್ನು ನೀಡಲಾಯಿತು.

ADVERTISEMENT

ಶಿಬಿರದಲ್ಲಿ ಪಿಂಚಣಿ ಮಂಜೂರು ಮಾಡುವ ಅಧಿಕಾರಿಗಳು, ಬ್ಯಾಂಕ್‌ ಸಿಬ್ಬಂದಿ ಪಾಲ್ಗೊಂಡಿದ್ದರು. ಮಾಜಿ ಸೈನಿಕರ ಸಮಸ್ಯೆಯನ್ನು ಆಲಿಸಿದ ಅಧಿಕಾರಿಗಳು ಆನ್‌ಲೈನ್‌ ಮೂಲಕ ತಿದ್ದುಪಡಿ ಮಾಡಿಕೊಟ್ಟರು. ಆಧಾರ್‌ ಕಾರ್ಡ್‌ ತಿದ್ದುಪಡಿಗೆ ಕರ್ನಾಟಕ ಒನ್‌ ಅಥವಾ ದಾವಣಗೆರೆ ಒನ್‌ ಕೇಂದ್ರ ಸಂಪರ್ಕಿಸುವಂತೆ ಸೂಚಿಸಿದರು. ಬ್ಯಾಂಕ್‌ ಸಂಬಂಧಿ ನ್ಯೂನತೆಗಳನ್ನು ಪರಿಹರಿಸಿದರು. ಭೂಸೇನೆ, ವಾಯುಸೇನೆ ಹಾಗೂ ನೌಕಾದಳದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದವರು ಶಿಬಿರದಲ್ಲಿ ಸೇವೆ ಪಡೆದರು.

‘ಭಾರತೀಯ ಸೇನೆ ಸೇರುವ ಬಹುತೇಕರ ವಯಸ್ಸು 20. ಸೇವಾ ಪುಸ್ತಕದಲ್ಲಿ ಹೆಸರು, ವಿಳಾಸ, ಹುದ್ದೆ, ಕುಟುಂಬ ಸೇರಿದಂತೆ ಇತರ ವಿವರ ನಮೂದಿಸುವಾಗ ತೊಂದರೆಗಳು ಆಗಿವೆ. ಸೇನೆಯಲ್ಲಿ ಸೇವೆ ಸಲ್ಲಿಸುವವರೆಗೂ ತೊಂದರೆ ಆಗುವುದಿಲ್ಲ. ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ಕಿರಿಕಿರಿ ಆರಂಭವಾಗುತ್ತದೆ. ಅಕ್ಷರ ವ್ಯತ್ಯಾಸ, ವಿಳಾಸ ಬದಲಾವಣೆ, ಕುಟುಂಬದ ಸದಸ್ಯರ ಹೆಸರು ಸೇರ್ಪಡೆಗೆ ಅಲೆದಾಡುವ ಸ್ಥಿತಿ ಇತ್ತು. ಶಿಬಿರ ಇದಕ್ಕೆ ಪರಿಹಾರ ಒದಗಿಸಿತು’ ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ನಿರ್ದೇಶಕ ಚಾಮರಸ ದೇವರಮನೆ ಮಾಹಿತಿ ನೀಡಿದರು.

ಸೇವಾ ಪುಸ್ತಕ ಹಾಗೂ ಆಧಾರ್ ಹೊಂದಾಣಿಕೆ ಸಮಸ್ಯೆ ಆಗಿತ್ತು. ಇದರಿಂದ ಪಿಂಚಣಿ ಪಡೆಯಲು ತೊಂದರೆ ಆಗಿತ್ತು. ಆಧಾರ್‌ ತಿದ್ದುಪಡಿಗೆ ಸೂಚಿಸಿದ್ದಾರೆ
ಎಂ.ಬಸವಣ್ಯಪ್ಪ ಮಾಜಿ ಸೈನಿಕ ಹಾವೇರಿ

‘ರಾಜ್ಯದ ಎಲ್ಲೆಡೆ ಶಿಬಿರ’

ಪಿಂಚಣಿ ಪಡೆಯಲು ಮಾಜಿ ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲೆಡೆ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮಾಜಿ ಸೈನಿಕರ ಬಳಿಗೆ ತೆರಳಿ ನ್ಯೂನತೆಗಳನ್ನು ಸರಿಪಡಿಸಲಾಗುತ್ತಿದೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ನಿವೃತ್ತ ಏರ್‌ ಮಾರ್ಷಲ್‌ ಎಚ್‌.ಬಿ. ರಾಜಾರಾಮ್‌ ಮನವಿ ಮಾಡಿದರು. ‘ಪಿಂಚಣಿ ಪಡೆಯಲು ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿ ಶಿಬಿರ ಆಯೋಜಿಸಲಾಗಿದೆ. ಇಲ್ಲಿ ಪರಿಹಾರ ಸಿಗದೇ ಇದ್ದರೆ ಬೆಂಗಳೂರಿನ ಭಾರತೀಯ ವಾಯು ಸೇನೆ ಸಂಘಕ್ಕೆ ಬನ್ನಿ. ಖಂಡಿತ ಸಹಾಯ ಮಾಡುತ್ತೇವೆ’ ಎಂದು ಆಶ್ವಾಸನೆ ನೀಡಿದರು. ಭಾರತೀಯ ವಾಯು ಸೇನೆ ಸಂಘದ ಉಪಾಧ್ಯಕ್ಷ ಅಹಿಂ ಕುಮಾರ್‌ ಪಾತ್ರ ಕಾರ್ಯದರ್ಶಿ ಎಸ್‌.ಆರ್‌. ದಶರತಿ ಪಿಂಚಣಿ ಅಧಿಕಾರಿಗಳಾದ ಸಿ.ಸಿ.ಮಲ್ಲಿಕ್‌ ಎಸ್‌.ಕೆ. ಸುಮಂತ್‌ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಎಸ್‌. ಮಹೇಂದ್ರಕರ್‌ ಮುಖಂಡರಾದ ಬಸಪ್ಪ ಬೇತೂರು ಬಿ.ವಿ. ಚಂದ್ರಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.