ದಾವಣಗೆರೆ: ನಗರದ ಹೊಂಡದ ವೃತ್ತದ ಕಟ್ಟಡವೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಆವರಿಸಿಕೊಂಡು ಅಪಾಯಕ್ಕೆ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಠಾಣೆಯ ಸಿಬ್ಬಂದಿ ಭಾನುವಾರ ರಕ್ಷಿಸಿದ್ದಾರೆ.
ಕಟ್ಟಡದ ಮೂರನೇ ಮಹಡಿಯ ನಿವಾಸಿ ಗೀತಾ ಗಂಗಾಧರ್ (49) ಹಾಗೂ ಇವರ ಪುತ್ರಿ ಮಧು (24) ರಕ್ಷಿಸಲ್ಪಟ್ಟವರು.
ಮೂರು ಮಹಡಿಯ ಕಟ್ಟಡದ ಎರಡನೇ ಮಹಡಿಯ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಮೂರನೇ ಮಹಡಿಯಲ್ಲಿದ್ದ ತಾಯಿ–ಮಗಳಿಗೆ ಕೆಳಗೆ ಇಳಿಯಲು ಸಾಧ್ಯವಾಗದೇ ಪರದಾಡುತ್ತಿದ್ದರು. ದಟ್ಟ ಹೊಗೆ ಆವರಿಸಿಕೊಂಡು ಅಪಾಯಕ್ಕೆ ಸಿಲುಕಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಯ ಸಿಬ್ಬಂದಿ ಏಣಿಯ ನೆರವಿನಿಂದ ಕಟ್ಟಡ ಏರಿದ್ದಾರೆ. 3ನೇ ಮಹಡಿ ತಲುಪಿ ಕಿಟಕಿಯ ಮೂಲಕ ಮನೆಯನ್ನು ಪ್ರವೇಶಿಸಿದ್ದಾರೆ. ಸಿಲಿಂಡರ್, ವಿದ್ಯುತ್ ಪರಿಶೀಲಿಸಿ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ. ಅಪಾಯಕ್ಕೆ ಸಿಲುಕಿದ್ದ ಇಬ್ಬರಿಗೂ ಧೈರ್ಯತುಂಬಿ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ.
‘ಕಟ್ಟಡದ ಮೂರನೇ ಮಹಡಿಯಲ್ಲಿ ನೆಲೆಸಿದ್ದ ನಮಗೆ ಅಗ್ನಿ ಅವಘಡದ ಸಂಭವಿಸಿದ್ದು ಅರಿವಿಗೆ ಬಂದಿರಲಿಲ್ಲ. ಕೆಳಗೆ ಇಳಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲಕ್ಕೆ ಧಾವಿಸಿ ರಕ್ಷಿಸಿದರು’ ಎಂದು ಗೀತಾ ಗಂಗಾಧರ್ ತಿಳಿಸಿದರು.
ಅಗ್ನಿ ಅವಘಡ ಸಂಭವಿಸಿದ 2ನೇ ಮಹಡಿಯ ಮನೆಯಲ್ಲಿ ಯಾರೊಬ್ಬರೂ ಇರಲಿಲ್ಲ. ಮನೆಯಲ್ಲಿದ್ದ ಗೃಹ ಬಳಕೆಯ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿವೆ. ವಸ್ತುಗಳನ್ನು ಕಳೆದುಕೊಂಡ ಮಹಿಳೆಯ ಕುಟುಂಬಕ್ಕೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆರ್ಥಿಕ ನೆರವು ನೀಡಿದ್ದಾರೆ.
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಎನ್. ನಾಗೇಶ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಾಲಿಂಗಪ್ಪ ಲಂಗೋಟಿ, ಠಾಣಾಧಿಕಾರಿ ಫಕೀರಪ್ಪ ಉಪ್ಪಾರ, ಸಂಜೀವ್ ಕುಮಾರ್, ಎಚ್. ವೆಂಕಟೇಶ್, ಟಿ.ಸಿ. ನಾಗರಾಜ್, ರಮೇಶ್ ಕುಮಾರ್ ಕೆ.ಆರ್, ಶಿವರಾಜ್ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.