ADVERTISEMENT

ದಾವಣಗೆರೆ: ಗ್ಯಾರಂಟಿಗೆ ₹ 2,063 ಕೋಟಿ ವೆಚ್ಚ

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 5:54 IST
Last Updated 6 ಜುಲೈ 2025, 5:54 IST
ದಾವಣಗೆರೆಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್ ಚರ್ಚೆ ನಡೆಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್ ಚರ್ಚೆ ನಡೆಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಪಂಚ ಗ್ಯಾರಂಟಿ ಯೋಜನೆಗಳು ಆರಂಭವಾದಾಗಿನಿಂದ ಜೂನ್ ಅಂತ್ಯದವರೆಗೆ ಜಿಲ್ಲೆಯ ಫಲಾನುಭವಿಗಳಿಗೆ ₹ 2,063.10 ಕೋಟಿಯನ್ನು ಸರ್ಕಾರ ವೆಚ್ಚ ಮಾಡಿದೆ. ಈ ಯೋಜನೆ ಜನರ ಬದುಕಿಗೆ ಆಸರೆಯಾಗಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್ ತಿಳಿಸಿದರು.

‘ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ಆಸರೆಯಾಗಿದೆ. ಗ್ರಾಮಾಂತರ ಮಟ್ಟದಲ್ಲಿ ಯೋಜನೆ ಪರಿಣಾಮಕಾರಿಯಾಗಿ ತಲುಪಿರುವ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ’ ಎಂದು ಹೇಳಿದರು.

‘ಶಕ್ತಿ ಯೋಜನೆಯಡಿ ₹ 272.51 ಕೋಟಿಯನ್ನು ಕೆಎಸ್‌ಆರ್‌ಟಿಸಿಗೆ ಪಾವತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 12.42 ಲಕ್ಷ ಫಲಾನುಭವಿಗಳಿಗೆ ₹ 346 ಕೋಟಿ ವೆಚ್ಚ ಮಾಡಲಾಗಿದೆ. ‘ಗೃಹಜ್ಯೋತಿ’ ಯೋಜನೆಯಡಿ 5 ಲಕ್ಷ ಮನೆಗಳಿಗೆ ವಿದ್ಯುತ್ ಸಹಾಯಧನವಾಗಿ ₹ 245 ಕೋಟಿ, ‘ಗೃಹಲಕ್ಷ್ಮಿ’ ಯೋಜನೆಯಡಿ ₹ 1,400 ಕೋಟಿಯನ್ನು ನೇರ ಪಾವತಿ ಮಾಡಲಾಗಿದೆ. ನಿರುದ್ಯೋಗಿ ಭತ್ಯೆಯಾಗಿ ₹ 19 ಕೋಟಿ ಪಾವತಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಪೂರೈಕೆಯಾಗುವ ಆಹಾರ ಧಾನ್ಯದಲ್ಲಿ ಹುಳು ಇರುವುದನ್ನು ಗಮನಿಸಲಾಗಿದೆ’ ಎಂದು ಸಮಿತಿಯ ಸದಸ್ಯರು ಗಮನ ಸೆಳೆದರು. ‘ಅಕ್ಷರ ದಾಸೋಹ ಅಧಿಕಾರಿಗಳು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು. ಕಳಪೆ ಆಹಾರ ಧಾನ್ಯವನ್ನು ವಾಪಾಸ್ ಕಳುಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಟ್ಟೆ ಮಾಧವ ವಿಠ್ಠಲ್ ರಾವ್ ಸೂಚಿಸಿದರು.

‘ಕೆಲವು ನ್ಯಾಯಬೆಲೆ ಅಂಗಡಿ ಕೆಲವೇ ದಿನ ಸೇವೆ ಒದಗಿಸುತ್ತಿವೆ. ಪಡಿತರ ತರಲು ಹೋಗುವ ವೃದ್ಧರನ್ನು ಸರ್ವರ್‌ ನೆಪ ಮುಂದಿಟ್ಟು ವಾಪಾಸ್‌ ಕಳುಹಿಸಲಾಗುತ್ತಿದೆ’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ‘ಪಡಿತರ ಅಂಗಡಿಯಲ್ಲಿ ಸರ್ವರ್‌ ಸಮಸ್ಯೆ ಇಲ್ಲ. ಲೋಪ ಎಸಗಿದ ಪಡಿತರ ಅಂಗಡಿಗಳ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿದರೆ ಕ್ರಮ ಜರುಗಿಸಲಾಗುವುದು’ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ತಿಳಿಸಿದರು.

‘ಯುವನಿಧಿಗೆ ಹೆಚ್ಚು ಜನರನ್ನು ನೋಂದಾಯಿಸಲು ಡಿಪ್ಲೊಮಾ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಸದಸ್ಯರು ಮನವಿ ಮಾಡಿದರು.

ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಅನೀಷ್‌ ಪಾಷ, ನಂಜಾ ನಾಯ್ಕ, ಕೆ.ಎನ್. ಮಂಜುನಾಥ್, ರಾಜೇಶ್ವರಿ, ಸದಸ್ಯರಾದ ಸಿ.ವಿ. ಡೋಲಿಚಂದ್ರ, ಅಲಿ ರೆಹಮತ್, ಎನ್. ನೀಲಗಿರಿಯಪ್ಪ, ಕೆ.ಶಿವಶಂಕರ್, ಎಂ.ಜಿ. ಶಶಿಕಲಾ, ಸಿ.ನಾಗರಾಜ್, ಷಂಶೀರ್ ಅಹ್ಮದ್, ಜಿ.ಆರ್. ರಾಘವೇಂದ್ರ ಗೌಡ, ಎಸ್.ಎಸ್.ಗಿರೀಶ್, ಲಿಯಾಕತ್ ಅಲಿ, ಕೆ.ಜಿ. ಉಮೇಶ್, ಎಚ್.ಎ.ಗದಿಗೇಶ್, ಎನ್.ಎಚ್.ಶ್ರೀನಿವಾಸ್, ಶಿವರಾಂ ನಾಯ್ಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.