ADVERTISEMENT

ದಾವಣಗೆರೆಯಲ್ಲಿ ಫಲಪುಷ್ಪ ಪ್ರದರ್ಶನ: 4 ಲಕ್ಷ ಸೇವಂತಿಯಲ್ಲಿ ಅರಳಿದ ವಿಧಾನಸೌಧ

ಹೂವಿನಲ್ಲಿ ಕಂಗೊಳಿಸುತ್ತಿದೆ ಹಂಪಿಯ ಕಲ್ಲಿನ ರಥ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:34 IST
Last Updated 26 ಫೆಬ್ರುವರಿ 2026, 6:34 IST
<div class="paragraphs"><p>ದಾವಣಗೆರೆಯ ಗಾಜಿನ ಮನೆಯಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿರುವ ವಿಧಾನಸೌಧದ ಮಾದರಿ &nbsp;</p></div>

ದಾವಣಗೆರೆಯ ಗಾಜಿನ ಮನೆಯಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿರುವ ವಿಧಾನಸೌಧದ ಮಾದರಿ  

   

ಪ್ರಜಾವಾಣಿ ಚಿತ್ರ: ಸತೀಶ್‌ ಬಡಿಗೇರ

ದಾವಣಗೆರೆ: ಹಳದಿ ಮತ್ತು ನೇರಳೆ ಬಣ್ಣದ ಪ್ರತಿಕೃತಿಯ ಮೇಲಿನ ‘ಅಶೋಕ ಸ್ತಂಭ’ ನೋಡುತ್ತಿದ್ದಂತೆ ಮನಸಿನಲ್ಲಿ ಆಲೋಚನೆಗಳು ಮೊಳೆಯುತ್ತವೆ. ಸಮೀಪಕ್ಕೆ ಸಾಗುತ್ತಿದ್ದಂತೆ ಕಣ್ಣಿಗೆ ಬೀಳುವ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ನಾಮಫಲಕ ವಿಧಾನಸೌಧ ಎಂಬುದನ್ನು ಖಚಿತಪಡಿಸುತ್ತದೆ. 4 ಲಕ್ಷ ಸೇವಂತಿಯಲ್ಲಿ ಅರಳಿದ ಈ ಕಲಾಕೃತಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ADVERTISEMENT

ಇಲ್ಲಿನ ಗಾಜಿನ ಅರಮನೆಯಲ್ಲಿ ಐದು ದಿನ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿಧಾನಸೌಧ ಪ್ರಮುಖ ಆಕರ್ಷಣೆಯಾಗಿದೆ. ಹಂಪಿಯ ಕಲ್ಲಿನ ರಥ 60,000 ಪುಷ್ಪಗಳಲ್ಲಿ ಅರಳಿದೆ. ಸಿರಿಧಾನ್ಯದಲ್ಲಿ ಕಂಗೊಳಿಸುವ ‘ದುರ್ಗಾಂಬಿಕಾ ದೇವಿ’ ಭಕ್ತಿ ಭಾವ ಸ್ಫುರಿಸುತ್ತಿದೆ.

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ ಫಲ–ಪುಷ್ಪ ಪ್ರದರ್ಶನಕ್ಕೆ ಬುಧವಾರ ಸಂಜೆ ಚಾಲನೆ ಸಿಕ್ಕಿತು. ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದರು. ಮಾರ್ಚ್‌ 1ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ವೀಕ್ಷಣೆಗೆ ಅವಕಾಶವಿದೆ.

ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ‘ಐ ಲವ್‌ ದಾವಣಗೆರೆ’ಯತ್ತ ಹೆಜ್ಜೆ ಸಾಗುತ್ತದೆ. 15 ಅಡಿ ಉದ್ದ, 7 ಅಡಿ ಎತ್ತರದ ಇದಕ್ಕೆ 10,000 ಸೇವಂತಿ ಹೂ ಬಳಸಲಾಗಿದೆ. 50,000 ಕಾಮಿನಿ ಎಲೆಗಳಿಂದ ಶೃಂಗರಿಸಲಾಗಿದೆ. ಇದರ ಅಡಿಯಲ್ಲಿ ‘ದುರ್ಗಾಂಬಿಕಾ ದೇವಿ’ಯ ಮೂರ್ತಿ ಇದೆ. ಸುತ್ತ ಈರುಳ್ಳಿ, ಕ್ಯಾರೆಟ್‌, ಮೆಣಸು, ಟೊಮೆಟೊ, ಬೀನ್ಸ್‌, ಆಲುಗಡ್ಡೆ, ಸಾಂಬರ ಸೌತೆ ಸೇರಿ ಹಲವು ಬಗೆಯ ತರಕಾರಿಗಳ ಚಿತ್ತಾರ ಕಣ್ಮನ ಸೆಳೆಯುತ್ತದೆ.

ಲಕ್ಷಾಂತರ ಪುಷ್ಪಗಳ ಬಳಕೆ: ಇಲ್ಲಿಂದ ಮುಂದಡಿ ಇಡುತ್ತಿದ್ದಂತೆ ವಿಧಾನಸೌಧ ಗಮನ ಸೆಳೆಯುತ್ತದೆ. ಗಾಜಿನ ಮನೆಯ ಮಧ್ಯ ಭಾಗದಲ್ಲಿ 4 ಲಕ್ಷಕ್ಕೂ ಅಧಿಕ ಪುಷ್ಪಗಳಿಂದ ಇದನ್ನು ನಿರ್ಮಿಸಲಾಗಿದೆ. 42 ಅಡಿ ಉದ್ದ, 14 ಅಡಿ ಅಗಲ ಹಾಗೂ 18 ಅಡಿ ಎತ್ತರದ ಈ ಕಲಾಕೃತಿ ಸೂಜಿಗಲ್ಲಿನಂತೆ ಹಿಡಿದಿಡುತ್ತದೆ.

ಹಳದಿ, ಬಿಳಿ ಹಾಗೂ ನೇರಳೆ ಬಣ್ಣದ ಸೇವಂತಿ ಹೂಗಳನ್ನು ಮಾತ್ರ ಬಳಸಲಾಗಿದೆ. ಬೆಂಗಳೂರಿನ ವಿ.ದಿನೇಶ್‌ ಅವರ ‘ದಿನಿ–ಸಿನಿ ಕ್ರಿಯೇಷನ್ಸ್‌’ ಸಂಸ್ಥೆ ಇದನ್ನು ನಿರ್ಮಿಸಿದೆ. ಪುಷ್ಪಗಳು ಬಾಡದಿರುವಂತೆ ನೀರು ಚುಮುಕಿಸುವ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಕಲಾಕೃತಿಯ ಎದುರು ಜನರು ಸೆಲ್ಫಿ, ಚಿತ್ರಗಳಿಗೆ ಮುಗಿಬೀಳುತ್ತಿದ್ದಾರೆ.

ಪುಷ್ಪದಲ್ಲಿ ಕಲ್ಲಿನ ರಥ: ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥ ಫಲಪುಷ್ಪ ಪ್ರದರ್ಶನದ ಮತ್ತೊಂದು ಪ್ರಮುಖ ಆಕರ್ಷಣೆ. ವಿಧಾನಸೌಧದ ಹಿಂಭಾಗದಲ್ಲಿ ಈ ರಥದ ಕಲಾಕೃತಿ ನಿರ್ಮಿಸಲಾಗಿದೆ. 10 ಅಡಿ ಉದ್ದ, 10 ಅಡಿ ಅಗಲ ಮತ್ತು 12 ಅಡಿ ಎತ್ತರದ ಕಲಾಕೃತಿ ರಚಿಸಿ ಕಾಮಿನಿ ಎಲೆಗಳಿಂದ ಅಲಂಕರಿಸಲಾಗಿದೆ. 50,000 ಸೇವಂತಿ, 10,000 ಇತರೆ ಹೂವುಗಳಲ್ಲಿ ಇದು ಅರಳಿದೆ.

‘ಕಲ್ಲಿನ ರಥ ಹಾಗೂ ವಿಧಾನಸೌಧ ಕಲಾಕೃತಿಗಳು ಪುಷ್ಪಗಳಲ್ಲಿ ಕಂಗೊಳಿಸುತ್ತಿವೆ. ಫ್ಯಾಬ್ರಿಕೇಷನ್‌ ಕೆಲಸ ಮುಗಿಸಿ ಪುಷ್ಪಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನ ಲಾಲ್‌ಬಾಗ್‌, ಕಬ್ಬನ್‌ಪಾರ್ಕ್‌ ಸೇರಿ ಹಲವು ಫಲಪುಷ್ಪ ಪ್ರದರ್ಶನಗಳಲ್ಲಿ ಇಂತಹ ಕಲಾಕೃತಿಗಳನ್ನು ನಿರ್ಮಿಸಿದ ಅನುಭವ ಇಲ್ಲಿ ಕೈಹಿಡಿದಿದೆ’ ಎಂದು ದಿನಿ–ಸಿನಿ ಕ್ರಿಯೇಷನ್ಸ್‌ ಮುಖ್ಯಸ್ಥ ವಿ.ದಿನೇಶ್‌ ತಿಳಿಸಿದರು.

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ, ಮಾಜಿ ಸಚಿವ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಬದುಕಿನ ವೃತ್ತಾಂತ ಕೂಡ ಇಲ್ಲಿದೆ. ಜಿಲ್ಲೆಯಲ್ಲಿ ಬೆಳೆಯುವ ವೈವಿಧ್ಯಮಯ ತೋಟಗಾರಿಕಾ ಬೆಳೆಗಳು ಗಮನ ಸೆಳೆಯುತ್ತವೆ. ರಾಜ್ಯ, ಹೊರ ರಾಜ್ಯದ ರೇಷ್ಮೆ, ಖಾದಿ ಬಟ್ಟೆ, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವಿದೆ. ಪ್ರತಿ ದಿನ ಸಂಜೆ ಸಂಗೀತ ಕಾರಂಜಿಯ ಪ್ರದರ್ಶನವಿದೆ. ವಯಸ್ಕರಿಗೆ ₹ 30 ಮತ್ತು ಮಕ್ಕಳಿಗೆ ₹ 10 ಟಿಕೆಟ್‌ ದರ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.