
ದಾವಣಗೆರೆ: ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ನಿರೀಕ್ಷಿತ ರೀತಿಯಲ್ಲಿ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಸರ್ಕಾರಿ ಆಸ್ಪತ್ರೆಗಳು ಬಳಲುತ್ತಿವೆ. ಮೂಲಸೌಲಭ್ಯ ಇದ್ದರೂ ಬಳಸಿಕೊಳ್ಳಲು ಸಾಧ್ಯವಾಗದ ಅಸಹಾಯಕತೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೊಳಲಾಡುತ್ತಿದೆ.
ಜಿಲ್ಲಾ ಆಸ್ಪತ್ರೆ, ಒಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆ, 4 ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, 5 ಸಮುದಾಯ ಆರೋಗ್ಯ ಕೇಂದ್ರ, 116 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಜಿಲ್ಲೆಯಲ್ಲಿ 557 ಕೇಂದ್ರಗಳಲ್ಲಿ ವೈದ್ಯಕೀಯ ಸೇವೆ ಲಭ್ಯವಿದೆ. ಇವುಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ, ಅಗತ್ಯ ಸೇವೆಯೇ ಸಿಗುತ್ತಿಲ್ಲ.
ಜಿಲ್ಲೆಯಲ್ಲಿ 85 ಎಂಬಿಬಿಎಸ್ ವೈದ್ಯರು, 16 ವೈದ್ಯಾಧಿಕಾರಿಗಳು, 8 ದಂತ ವೈದ್ಯರು, 48 ತಜ್ಞ ವೈದ್ಯರು, 453 ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ 1,495 ಮಂಜೂರಾತಿ ಹುದ್ದೆಗಳಿವೆ. ಇದರಲ್ಲಿ 400ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಗುತ್ತಿಗೆ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಂಡಿದ್ದರೂ, ರೋಗಿಗಳಿಗೆ ಸೇವೆ ಒದಗಿಸುವಷ್ಟು ಸಿಬ್ಬಂದಿ ಇಲ್ಲ. ಇದರಿಂದ ವೈದ್ಯಕೀಯ ಸೇವೆಯಲ್ಲಿ ಲೋಪಗಳು ಉಂಟಾಗುತ್ತಿವೆ.
ಹರಿಹರ ತಾಲ್ಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪ್ರತ್ಯೇಕವಾಗಿ ನಿರ್ಮಾಣಗೊಂಡು 6 ತಿಂಗಳು ಕಳೆದಿದೆ. ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ನಿಯೋಜಿಸುವಂತೆ 2024ರ ಅಕ್ಟೋಬರ್‌ನಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಈವರೆಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.
‘ದಾವಣಗೆರೆ ಆಸ್ಪತ್ರೆಗಳ ಮೇಲೆ ಹಲವು ಜಿಲ್ಲೆಗಳು ಆಶ್ರಯಿಸಿವೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ಸೇರಿದಂತೆ ಹಲವು ಭಾಗಗಳ ರೋಗಿಗಳು ದಾವಣಗೆರೆಗೆ ಚಿಕಿತ್ಸೆಗೆ ಬರುವುದು ಹೆಚ್ಚಾಗಿದೆ. ಇದರಿಂದ ಜಿಲ್ಲೆಯ ಆಸ್ಪತ್ರೆಗಳ ಮೇಲೆ ಒತ್ತಡ ಸೃಷ್ಟಿಯಾಗಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾಧಿಕಾರಿ ಡಾ.ಎಸ್. ಷಣ್ಮುಖಪ್ಪ.
ಚನ್ನಗಿರಿ, ಹೊನ್ನಾಳಿ, ಜಗಳೂರು ಹಾಗೂ ಹರಿಹರ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಉಪಕರಣಗಳಿವೆ. ತಜ್ಞರ ಕೊರತೆಯಿಂದ ಕೆಲ ಉಪಕರಣಗಳು ಬಳಕೆಗೆ ಲಭ್ಯವಾಗುತ್ತಿಲ್ಲ. ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಸಿಗದೇ ರೋಗಿಗಳು ದಾವಣಗೆರೆಗೆ ಅಲೆದಾಡುವಂತಾಗಿದೆ. ಹೊನ್ನಾಳಿ, ಚನ್ನಗಿರಿ ತಾಲ್ಲೂಕಿನ ಜನರು ವೈದ್ಯಕೀಯ ಸೇವೆಗಳಿಗೆ ಶಿವಮೊಗ್ಗ ಜಿಲ್ಲಾ ಕೇಂದ್ರವನ್ನು ಹೆಚ್ಚು ಅವಲಂಬಿಸಿದ್ದಾರೆ.
ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ, ಈ ವರೆಗೆ ತಾಲ್ಲೂಕು ಆಸ್ಪತ್ರೆಗೆ ಮಂಜೂರಾತಿ ಸಿಕ್ಕಿಲ್ಲ. ಸ್ತ್ರೀರೋಗ ತಜ್ಞರು, ಮಕ್ಕಳ ವೈದ್ಯರ ಸ್ಥಳ ಬದಲಾವಣೆಯಿಂದ ಹಲವೆಡೆ ಜನರಿಗೆ ತೊಂದರೆ ಉಂಟಾಗುತ್ತಿದೆ.
ಪ್ರಸೂತಿ ಸೇವೆ ಸಿಗದೇ ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಹೆರಿಗೆ, ಅಪಘಾತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡುವುದು ಮುಂದುವರಿದಿದೆ. ಇದರಿಂದ ಜಿಲ್ಲಾ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆ ಕೂಡ ಶಿಥಿಲಾವಸ್ಥೆಯಲ್ಲಿದ್ದು ಎಲ್ಲ ಸೇವೆಗಳು ಲಭ್ಯವಾಗುತ್ತಿಲ್ಲ.
ಹರಿಹರ ಮತ್ತು ಸಾಸ್ವೆಹಳ್ಳಿ ಆಸ್ಪತ್ರೆಗಳಿಗೆ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅಗತ್ಯ ವೈದ್ಯಕೀಯ ಸಿಬ್ಬಂದಿ ನೀಡಿದರೆ ಸೇವೆ ಒದಗಿಸಲು ಸಿದ್ಧರಿದ್ದೇವೆಡಾ.ಎಸ್.ಷಣ್ಮುಖಪ್ಪ ಜಿಲ್ಲಾ ಆರೋಗ್ಯಾಧಿಕಾರಿ
ಹರಿಹರದಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದರೂ ಜನರಿಗೆ ಸೇವೆ ಸಿಗದಿರುವುದು ವಿಪರ್ಯಾಸ. ರಾಜಕೀಯ ಕೆಸರೆರಚಾಟಕ್ಕೆ ವಿರಾಮ ನೀಡಿ ಆಸ್ಪತ್ರೆಗೆ ಸೂಕ್ತ ಸಿಬ್ಬಂದಿ ನೇಮಿಸಬೇಕುಐರಣಿ ಹನುಮಂತಪ್ಪ ಸಾಮಾಜಿಕ ಕಾರ್ಯಕರ್ತ ಹರಿಹರ
ಈ ಭಾಗದ ಮಹಿಳೆಯರು ಮತ್ತು ಗರ್ಭಿಣಿಯರು ಚಿಕಿತ್ಸೆಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಸಿಬ್ಬಂದಿ ನೇಮಕ ಮಾಡಿ ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಬೇಕುಸವಿತಾ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ
ಟಿ.ಇನಾಯತ್ ಉಲ್ಲಾ
ಹರಿಹರ: ಸುರಕ್ಷಿತ ಹೆರಿಗೆ ಮಕ್ಕಳ ಆರೈಕೆ ಹಾಗೂ ಜನನ ನಿಯಂತ್ರಣದ ದೃಷ್ಟಿಯಿಂದ ₹ 20 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಿಸಿದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಕೊರತೆಯಿಂದ 6 ತಿಂಗಳಿಂದ ಸೇವೆ ಒದಗಿಸದೇ ಪಾಳುಬಿದ್ದಿದೆ. 50 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯ ನಿರ್ಮಾಣ ಕಾರ್ಯ ಸಂಪೂರ್ಣ ಮುಕ್ತಾಯವಾಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೂ ಹಸ್ತಾಂತರಗೊಂಡಿದೆ. ಆಸ್ಪತ್ರೆಗೆ ಅಗತ್ಯವಿರುವ ಯಂತ್ರೋಪಕರಣಗಳು ಕೂಡ ಸೇವೆ ಒದಗಿಸದೇ ಉಳಿದಿವೆ.
ನಗರದಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಇದೆ. ಗರ್ಭಿಣಿಯರು ಬಾಣಂತಿಯರು ಹಾಗೂ ಮಕ್ಕಳಿಗೆ ಉತ್ತಮ ಚಿಕಿತ್ಸೆ ಸಿಗಬೇಕು ಎಂಬ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಆದರೆ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ. ನೂತನ ಕಟ್ಟಡವು ಪಾಳು ಬಂಗಲೆಯಂತೆ ಧೂಳು ಹಿಡಿಯುತ್ತಿದೆ. ಹೀಗೆ ಇನ್ನೂ 6 ತಿಂಗಳು ಕಳೆದರೆ ಕಟ್ಟಡದ ಒಳಗಿರುವ ಯಂತ್ರಗಳು ಜಂಗು ಹಿಡಿದು ಗುಜರಿಗೆ ಹಾಕುವ ಸ್ಥಿತಿ ನಿರ್ಮಾಣವಾದರೂ ಆಶ್ಚರ್ಯಪಡಬೇಕಿಲ್ಲ ಎಂಬುದು ಸಾರ್ವಜನಿಕರ ಕಳವಳ.
ಹರಿಹರದ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಿದೆ. ಶಸ್ತ್ರಚಿಕಿತ್ಸೆಯ ಮೂಲಕ ನಡೆಯುವ ಹೆರಿಗೆಗೆ ಬಡವರು ಲಕ್ಷಗಟ್ಟಲೆ ವೆಚ್ಚ ಮಾಡಬೇಕಾದ ಸ್ಥಿತಿ ಇದೆ. ಇದರಿಂದ ತಾಲ್ಲೂಕಿನ ಅನೇಕರು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದಾರೆ. ನೂತನ ಆಸ್ಪತ್ರೆ ಶೀಘ್ರ ಕಾರ್ಯಾರಂಭವಾದರೆ ಜನರಿಗೆ ಅನುಕೂಲವಾಗಲಿದೆ ಎಂಬುದು ಜನರ ಒತ್ತಾಯ. ‘100 ಹಾಸಿಗೆಯ ತಾಲ್ಲೂಕು ಆಸ್ಪತ್ರೆಯಲ್ಲೇ ವೈದ್ಯರು ಸಿಬ್ಬಂದಿ ಕೊರತೆ ಇದೆ. ಇಲ್ಲಿಂದ ಹೊಸ ಆಸ್ಪತ್ರೆಗೆ ಸಿಬ್ಬಂದಿ ನಿಯೋಜಿಸಲು ಸಾಧ್ಯವಿಲ್ಲ. ಹೊಸದಾಗಿ ಸಿಬ್ಬಂದಿ ನೇಮಕಗೊಂಡರೆ ಮಾತ್ರ ನೂತನ ಆಸ್ಪತ್ರೆಯಲ್ಲಿ ಸೇವೆ ಒದಗಿಸಲು ಸಾಧ್ಯವಿದೆ’ ಎನ್ನುತ್ತಾರೆ ಪ್ರಭಾರ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಲತಾದೇವಿ.
ಗಿರೀಶ್ ಎಂ ನಾಡಿಗ್
ಸಾಸ್ವೆಹಳ್ಳಿ: ಅಂದಾಜು ₹9.6 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಗೊಂಡು ಆರು ತಿಂಗಳು ಕಳೆದರೂ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರಿಗೆ ಸೇವೆ ಲಭ್ಯವಾಗುತ್ತಿಲ್ಲ. ಹೋಬಳಿ ಕೇಂದ್ರವಾದ ಸಾಸ್ವೆಹಳ್ಳಿಯಲ್ಲಿ ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ಆಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಈ ಆಸ್ಪತ್ರೆ ನಿರ್ಮಾಣವಾಗಿದೆ. ಆದರೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಂತೆಯೇ 24x7 ಸೇವೆ ಲಭ್ಯವಿದ್ದರೂ ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲದೆ ಗರ್ಭಿಣಿಯರು ಮತ್ತು ತುರ್ತು ಚಿಕಿತ್ಸೆಗೆ ಬರುವ ರೋಗಿಗಳು ಪರದಾಡುವಂತಾಗಿದೆ. ‘ಆಸ್ಪತ್ರೆಯ ಕಾಮಗಾರಿ ಶೇ 70ರಷ್ಟು ಪೂರ್ಣಗೊಂಡಾಗಲೇ ಸಿಬ್ಬಂದಿ ಮಂಜೂರಾತಿಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆಸ್ಪತ್ರೆಗೆ 4 ತಜ್ಞ ವೈದ್ಯರು 6 ಶುಶ್ರೂಷಕರು ಹಾಗೂ 11 ‘ಡಿ’ ಗ್ರೂಪ್ ನೌಕರರ ಅವಶ್ಯಕತೆ ಇದೆ. ಈವರೆಗೂ ಸಿಬ್ಬಂದಿ ನೇಮಕವಾಗದ ಕಾರಣ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ತಾಲ್ಲೂಕು ಪ್ರಭಾರ ವೈದ್ಯಾಧಿಕಾರಿ ಡಾ.ಗಿರೀಶ್ ಎನ್.ಎಚ್. ತಿಳಿಸಿದ್ದಾರೆ.
‘ಅಪಘಾತ ಸಂಭವಿಸಿದಾಗ ಮತ್ತು ತುರ್ತು ಚಿಕಿತ್ಸೆಯ ಅಗತ್ಯವಿದ್ದಾಗ ಇಲ್ಲಿಂದ 20 ಕಿ.ಮೀ ದೂರದಲ್ಲಿರುವ ಹೊನ್ನಾಳಿ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಹೋಬಳಿಯ ಸುತ್ತಮುತ್ತದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಉದ್ಘಾಟನೆ ಬಳಿಕ ಸೇವೆಗೆ ಲಭ್ಯವಾಗುತ್ತದೆ ಎಂದು ಭಾವಿಸಿದ್ದೆವು’ ಎಂದು ಸ್ಥಳೀಯ ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಡಿ. ಶ್ರೀನಿವಾಸ್
ಜಗಳೂರು: ಅರ್ಧ ಶತಮಾನಕ್ಕೂ ಹೆಚ್ಚು ಹಳೆಯದಾದ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಕೊನೆಗೂ ಕಾಯಕಲ್ಪ ಒದಗಿ ಬಂದಿದ್ದು ಶೀಘ್ರವೇ ಪಟ್ಟಣದ ಹೊರವಲಯದಲ್ಲಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಲಿದೆ. ಇಲ್ಲಿನ 100 ಹಾಸಿಗೆಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ 60 ವರ್ಷದಷ್ಟು ಹಳೆಯದು. ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಜೀರ್ಣಾವಸ್ಥೆ ತಲುಪಿದ್ದು ಪ್ರತಿ ಮಳೆಗಾಲದಲ್ಲಿ ಕಟ್ಟಡದಲ್ಲಿ ನೀರು ಸೋರಿಕೆಯಾಗಿ ಯಾವುದೇ ಸಂದರ್ಭದಲ್ಲಾದರೂ ಅನಾಹುತ ಎದುರಾಗುವ ಆತಂಕ ಇದೆ.
ಇದರಿಂದ ಹೊಸ ಆಸ್ಪತ್ರೆಯ ಕಟ್ಟಡಕ್ಕೆ ₹ 50 ಕೋಟಿ ಅನುದಾನವನ್ನು ಸರ್ಕಾರ ಘೋಷಿಸಿತ್ತು. ಪಟ್ಟಣದ ಹೊರವಲಯದ ಮರೇನಹಳ್ಳಿ ರಸ್ತೆಯಲ್ಲಿ 5 ಎಕರೆ ಜಮೀನು ಕೂಡ ಗುರುತಿಸಲಾಗಿದೆ. ‘ತಾಲ್ಲೂಕು ಆಸ್ಪತ್ರೆಗೆ ನೂರಾರು ರೋಗಿಗಳು ಚಿಕಿತ್ಸೆಗೆ ಪ್ರತಿನಿತ್ಯ ಧಾವಿಸುತ್ತಾರೆ. ಕಟ್ಟಡ ತೀರಾ ಶಿಥಿಲಗೊಂಡಿದ್ದು ಹೊಸ ಕಟ್ಟಡ ನಿರ್ಮಾಣಕ್ಕಾಗಿ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದರ ಮೇರೆಗೆ ಬಜೆಟ್‌ನಲ್ಲಿ ₹ 50 ಕೋಟಿ ಘೋಷಿಸಲಾಗಿದೆ. ಅನುದಾನದ ಮೊತ್ತ ಅಂತಿಮವಾಗಬೇಕಿದೆ. ಸುಸಜ್ಜಿತ ಆಸ್ಪತ್ರೆಯನ್ನು ಆಧುನಿಕವಾಗಿ ನಿರ್ಮಾಣ ಮಾಡಲಾಗುವುದು’ ಎಂದು ಶಾಸಕ ಬಿ. ದೇವೇಂದ್ರಪ್ಪ ’ಪ್ರಜಾವಾಣಿ‘ಗೆ ಮಾಹಿತಿ ನೀಡಿದರು. ‘ಹಣಕಾಸು ಇಲಾಖೆ ಸೇರಿದಂತೆ ವಿವಿದ ಇಲಾಖೆಗಳ ಅನುಮೋದನೆ ಬಾಕಿ ಇದ್ದು ನಂತರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ತ್ವರಿತವಾಗಿ ನೂತನ ಆಸ್ಪತ್ರೆಯನ್ನು ನಿರ್ಮಿಸಲಾಗುವುದು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.