ಹರಿಹರ: ಗಲೀಜಾಗಿದ್ದ ಶೌಚಾಲಯಗಳಿಗೆ ಬ್ರಶ್ ಹಾಕಲಾಗುತ್ತಿದೆ, ಕಚೇರಿಗಳ ಒಳ ಮತ್ತು ಹೊರ ಆವರಣದಲ್ಲಿನ ಕಸದ ರಾಶಿ ಸಾಗಿಸಲಾಗುತ್ತಿದೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ... ಒಟ್ಟಿನಲ್ಲಿ ಸರ್ಕಾರಿ ಕಚೇರಿಗಳು ಹೇಗಿರಬೇಕೋ ಹಾಗೇ ಆಗುತ್ತಿವೆ.
ಸರ್ಕಾರಿ ಕಚೇರಿಗಳಲ್ಲಿ ಸೌಲಭ್ಯಗಳ ಕೊರತೆ ನೀಗಿಸುವಂತೆ ಸಾರ್ವಜನಿಕರು ಹತ್ತಾರು ಬಾರಿ ದೂರಿದರೂ ಅಧಿಕಾರಿಗಳು ಕ್ಯಾರೆ ಎಂದಿರಲಿಲ್ಲ. ಈ ಚಮತ್ಕಾರ ನಡೆಯಲು ಮುಖ್ಯ ಕಾರಣ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಜನರ ಅಹವಾಲು ಆಲಿಸಲು ಏ.22ರಿಂದ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಳ್ಳುತ್ತಿರುವುದು.
ನಗರಸಭೆ ವತಿಯಿಂದ ಇಲ್ಲಿನ ಪ್ರಮುಖ ರಸ್ತೆಗಳ ಅಕ್ಕಪಕ್ಕದ ಚರಂಡಿಗಳ ಹೂಳನ್ನು ತೆಗೆಯಿಸಲಾಗುತ್ತಿದೆ. ಕಸ ಸಂಗ್ರಹವಾಗುತ್ತಿದ್ದ ಸ್ಥಳಗಳು ಸ್ವಚ್ಛವಾಗುತ್ತಿವೆ. ತಿಂಗಳುಗಟ್ಟಲೆ ಬೆನ್ನು ಹತ್ತಿದರೂ ಹಾಕಿರದಿದ್ದ ಕಡೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ.
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ನಾಲ್ಕು ದಿನಗಳಿಂದ ಸ್ವಚ್ಛತಾ ಅಭಿಯಾನ ನಡೆದಿದೆ. ವರ್ಷಗಳಿಂದ ಉಗ್ರಾಣದಲ್ಲಿ ಬಿದ್ದಿದ್ದ ಬೇಡವಾದ ವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ದೂಳು ಹೊಡೆಯಲಾಗುತ್ತಿದೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಲು ಆರ್‌ಒ ಘಟಕವನ್ನು ರಜಾ ದಿನವಾದ ಶುಕ್ರವಾರದಂದೇ ಅಳವಡಿಸಲಾಗಿದೆ. ಕಚೇರಿಯ ಒಳ ಹಾಗೂ ಹೊರ ಆವರಣದಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಸಾಗಿಸಲಾಗಿದೆ. ಕೆಟ್ಟು ಹೋಗಿದ್ದ ಕಚೇರಿಯೊಳಗಿನ ದೀಪಗಳ ಜಾಗದಲ್ಲಿ ಹೊಸ ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ.
ಉಳಿದಂತೆ ಇತರೆ ಸರ್ಕಾರಿ ಕಚೇರಿ, ಆಸ್ಪತ್ರೆಗಳಲ್ಲೂ ಅಧಿಕಾರಿಗಳು ಮತ್ತು ಸಿಬ್ಬಂದಿ ನಿದ್ದೆಯಿಂದ ಎಚ್ಚೆತ್ತಿದ್ದಾರೆ. ಅಲರ್ಟ್ ಆಗುತ್ತಿದ್ದಾರೆ. ವಿವಿಧ ಕೆಲಸ, ಕಾರ್ಯಗಳ ನಿಮಿತ್ತ ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಆತ್ಮೀಯವಾಗಿ ಮಾತನಾಡುತ್ತಿದ್ದಾರೆ. ತಾಲ್ಲೂಕಿನ ಕಚೇರಿಗಳಲ್ಲಿ ಮಿಂಚಿನ ಸಂಚಾರ ಕಂಡುಬಂದಿದೆ.
ಉಪ ಲೋಕಾಯುಕ್ತರು ಎರಡು ತಿಂಗಳಿಗೆ ಒಮ್ಮೆಯಾದರೂ ಜಿಲ್ಲೆಗೆ ಭೇಟಿ ನೀಡಬೇಕು. ಆಗಲಾದರೂ ತಾಲ್ಲೂಕಿನ ಸರ್ಕಾರಿ ಅಧಿಕಾರಿಗಳು ಕಚೇರಿಗಳು ಜನಮುಖಿಯಾಗಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳುತ್ತಾರೆಮಂಜಪ್ಪ ಹೊಳೆಸಿರಿಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.