ADVERTISEMENT

ಹೊನ್ನಾಳಿ | ಅದಾಲತ್: 463 ಪ್ರಕರಣಗಳು ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 16:14 IST
Last Updated 13 ಜುಲೈ 2024, 16:14 IST
ಹೊನ್ನಾಳಿಯ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ಲೋಕ ಅದಾಲತ್ ನಡೆಯಿತು
ಹೊನ್ನಾಳಿಯ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ಲೋಕ ಅದಾಲತ್ ನಡೆಯಿತು   

ಹೊನ್ನಾಳಿ: ಪರಸ್ಪರ ದ್ವೇಷ, ಅಸೂಯೆ ಇರಬಾರದೆಂಬ ಸದುದ್ದೇಶದಿಂದ ಲೋಕ ಅದಾಲತ್ ಮೂಲಕ ರಾಜಿ ಸಂಧಾನ ಮಾಡಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನ್ಯಾಯಾಲಯಗಳು ಪ್ರಯತ್ನಿಸುತ್ತಿವೆ ಎಂದು ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವದಾಸ್ ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯ, ಜಿಲ್ಲಾ ಹಾಗೂ ರಾಜ್ಯಮಟ್ಟದ ನ್ಯಾಯಾಲಯಗಳಿಗೆ ಸುತ್ತಾಡುವ ಬದಲು, ಸ್ಥಳೀಯ ನ್ಯಾಯಾಲಯದಲ್ಲೇ ತಮ್ಮ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡರೆ ನ್ಯಾಯಾಲಯಗಳಿಗೆ ಅಲೆದಾಡುವುದು ತಪ್ಪುತ್ತದೆ. ಇದರಿಂದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬಹುದು. ಜಮೀನು ವಿಚಾರಗಳಿಗೆ ರಕ್ತ ಸಂಬಂಧಿಗಳು ದ್ವೇಷ ಸಾಧಿಸುವ ಬದಲು, ಇದ್ದುದ್ದರಲ್ಲೇ ಹಂಚಿಕೊಂಡು ವೈರತ್ವ ಮರೆತು ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡರೆ ಸುಂದರ ಬದುಕನ್ನು ಸಾಗಿಸಬಹುದು ಎಂದ ಅವರು ಸಲಹೆ ನೀಡಿದರು.

ADVERTISEMENT

‘ಎರಡು ನ್ಯಾಯಾಲಯಗಳಿಂದ 572 ಪ್ರಕರಣಗಳ ಪೈಕಿ 463 ಪ್ರಕರಣಗಳನ್ನು ರಾಜಿ ಮಾಡಿಸಿದ್ದೇವೆ. ಚೆಕ್‍ಬೌನ್ಸ್ ಹಾಗೂ ಹಣಕಾಸಿನ ಪ್ರಕರಣಗಳಲ್ಲಿ ₹ 85.63 ಲಕ್ಷ ವಸೂಲು ಮಾಡಿ ಆಯಾಯ ಪ್ರಕರಣಗಳ ಕಕ್ಷಿದಾರರಿಗೆ ವಿತರಿಸಲು ವ್ಯವಸ್ಥೆ ಮಾಡಿದ್ದೇವೆ’ ಎಂದರು.

ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ತ್ವರಿತಗತಿಯಲ್ಲಿ ಬಗೆಹರಿಸಲಾಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಎನ್. ಪುಣ್ಯಕೋಟಿ ಹೇಳಿದರು.

ಎಪಿಪಿ ಭರತ್ ಭೀಮಯ್ಯ, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪಿ. ಜಯಪ್ಪ, ಸಂಘದ ಕಾರ್ಯದರ್ಶಿ ಪುರುಷೋತ್ತಮ್, ವಕೀಲರಾದ ಸುನಿಲ್‍ಕುಮಾರ್, ಉಮಾಕಾಂತ್ ಜೋಯ್ಸ್, ಎಸ್.ಎನ್. ಪ್ರಕಾಶ್, ಎಂ. ಚಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.