ದಾವಣಗೆರೆ: ನಗರದ ವಿಶೇಷ ದತ್ತು ಸಂಸ್ಥೆ ‘ಅಮೂಲ್ಯ’ದಲ್ಲಿರುವ ಮಗುವೊಂದು ಇಟಲಿ ದಂಪತಿಯ ಮಡಿಲು ಸೇರಲು ಸಜ್ಜಾಗಿದೆ. ವಿಶೇಷ ಅಗತ್ಯವುಳ್ಳ ಒಂದು ವರ್ಷದ ಗಂಡು ಶಿಶುವನ್ನು ವಿದೇಶಿಗರು ದತ್ತು ಸ್ವೀಕರಿಸುವ ಪ್ರಕ್ರಿಯೆ ಮೇ 12ಕ್ಕೆ ನಿಗದಿಯಾಗಿದೆ.
2012ರಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ 75 ಮಕ್ಕಳು ದತ್ತು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. ಇದರಲ್ಲಿ 66 ಮಕ್ಕಳು ದೇಶದೊಳಗೆ ಹಾಗೂ 9 ಮಕ್ಕಳು ವಿದೇಶಿಗರ ಮಡಿಲು ಸೇರಿದ್ದಾರೆ. ವಿದೇಶಿ ಪೋಷಕತ್ವಕ್ಕೆ ಒಳಪಡುತ್ತಿರುವ 10ನೇ ಶಿಶು ಶೀಘ್ರ ಇಟಲಿಗೆ ಪ್ರಯಾಣ ಬೆಳೆಸಲಿದೆ.
‘ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ’ (ಕಾರಾ) ಮಕ್ಕಳ ದತ್ತು ಪ್ರಕ್ರಿಯೆಗೆ ಇರುವ ಸ್ವಾಯತ್ತ ಸಂಸ್ಥೆ. ದತ್ತು ಪ್ರಕ್ರಿಯೆ ಈ ಸಂಸ್ಥೆಯ ಮೂಲಕವೇ ನಡೆಯುತ್ತದೆ. ಮಕ್ಕಳ ದತ್ತು ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ಅನುಮತಿ ನೀಡಲಾಗುತ್ತದೆ. ಭಾರತೀಯರು ಹೆಚ್ಚಾಗಿ ಆಸಕ್ತಿ ತೋರದ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ದತ್ತು ಪಡೆಯಲು ವಿದೇಶಿಗರು ಮುಂದಾಗುತ್ತಿದ್ದಾರೆ. ಹಲವು ದೇಶದ ದಂಪತಿ ‘ಅಮೂಲ್ಯ’ದ ಮಕ್ಕಳನ್ನು ದತ್ತು ಸ್ವೀಕರಿಸಿದ್ದಾರೆ.
‘ಮಕ್ಕಳನ್ನು ದತ್ತು ಪಡೆಯಲು ಆಸಕ್ತಿ ತೋರುವ ವಿದೇಶಿಗರ ಪೂರ್ವಾಪರವನ್ನು ‘ಕಾರಾ’ ಪರಿಶೀಲಿಸಿ ಒಪ್ಪಿಗೆ ನೀಡುತ್ತದೆ. ದತ್ತು ಪ್ರಕ್ರಿಯೆಗೆ ಸರಾಸರಿ 6 ತಿಂಗಳು ಕಾಲಾವಕಾಶ ಹಿಡಿಯುತ್ತದೆ. ಇಟಲಿ ದಂಪತಿಗೆ ಮಗು ದತ್ತು ನೀಡಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಆದೇಶಿಸಿದೆ. ಮಗು ಹಸ್ತಾಂತರ ಪ್ರಕ್ರಿಯೆ ಮಾತ್ರ ಬಾಕಿ ಇದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್.ಕವಿತಾ ಮಾಹಿತಿ ನೀಡಿದರು.
ಮಕ್ಕಳಿಲ್ಲದವರು ಮಗುವಿನ ಹಕ್ಕನ್ನು ಕಾನೂನುಬದ್ಧವಾಗಿ ಪಡೆಯುವ ದತ್ತು ಪ್ರಕ್ರಿಯೆಗೆ ವಿಶೇಷ ದತ್ತು ಸಂಸ್ಥೆಯನ್ನು 13 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಈ ಸಂಸ್ಥೆಗೆ ಈವರೆಗೆ ಪರಿತ್ಯಕ್ತ, ನಿರ್ಗತಿಕ ಹಾಗೂ ಸ್ವ ಇಚ್ಛೆಯಿಂದ ಒಪ್ಪಿಸಿದ 212 ಮಕ್ಕಳು ದಾಖಲಾಗಿವೆ. ಇದರಲ್ಲಿ 54 ಮಕ್ಕಳಿಗೆ ಜೈವಿಕ ಪಾಲಕರೊಂದಿಗೆ ಪುನರ್ವಸತಿ ಕಲ್ಪಿಸಲಾಗಿದೆ. 25 ಮಕ್ಕಳು ಅನಾರೋಗ್ಯದಿಂದ ಪ್ರಾಣ ಕಳೆದುಕೊಂಡಿವೆ.
‘ದತ್ತು ಪ್ರಕ್ರಿಯೆ ಪೂರ್ಣಗೊಂಡ ಮಗುವಿನ ಮೇಲೆ ಎರಡು ವರ್ಷ ನಿಗಾ ಇಡಲಾಗುತ್ತದೆ. ಮಗುವಿನ ಪಾಲನೆ, ಕಾಳಜಿಯ ಕುರಿತು 3 ತಿಂಗಳಿಗೊಮ್ಮೆ ವರದಿ ಪಡೆಯಲಾಗುತ್ತದೆ’ ಎಂದು ಹೇಳುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ.
ದತ್ತು ಸ್ವೀಕಾರಕ್ಕೆ ಕಾಯುತ್ತಿರುವ ಜನರ ಸಂಖ್ಯೆ ದೊಡ್ಡದಿದೆ. ಇದಕ್ಕೆ ಅನುಗುಣವಾಗಿ ದತ್ತು ಪ್ರಕ್ರಿಯೆಗೆ ಒಳಪಡುವ ಮಕ್ಕಳಿಲ್ಲ. ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ಸಾಮರ್ಥ್ಯ ಹೊಂದಿದ ಪಾಲಕರ ಪೂರ್ವಾಪರ ಖಾತರಿಪಡಿಸಿಕೊಂಡು ದತ್ತು ನೀಡಲಾಗುತ್ತದೆ. ಎಲ್ಲೊ ಸಿಕ್ಕ ಮಗು, ಸಂಬಂಧಿಕರ ಶಿಶುವನ್ನು ದತ್ತು ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ.
ಅನೈತಿಕ ಸಂಬಂಧ, ಅಂಗವೈಕಲ್ಯ, ಬಡತನ, ಅವಧಿ ಪೂರ್ವ ಜನನ, ಬಾಲ್ಯವಿವಾಹ ಸೇರಿ ಹಲವು ಕಾರಣಗಳಿಗೆ ಶಿಶುಗಳು ಪರಿತ್ಯಕ್ತವಾಗುತ್ತಿವೆ. ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಶೌಚಾಲಯ, ದೇಗುಲ, ಕಸದ ತೊಟ್ಟಿಯಲ್ಲಿ ಶಿಶುಗಳು ಪತ್ತೆಯಾದ ನಿದರ್ಶನಗಳಿವೆ. ಈ ಶಿಶುಗಳಿಗಾಗಿ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ‘ಮಮತೆಯ ತೊಟ್ಟಿಲು’ ಇಡಲಾಗಿದೆ. ಈ ಶಿಶುಗಳನ್ನು ರಕ್ಷಿಸುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ದತ್ತು ಸಂಸ್ಥೆಯಲ್ಲಿ ಆಶ್ರಯ ಕಲ್ಪಿಸುತ್ತದೆ. ಜೈವಿಕ ಪಾಲಕರು ಲಭ್ಯವಾಗದಿದ್ದಾಗ ಈ ಶಿಶುಗಳನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.
ವಿಶೇಷ ಅಗತ್ಯವುಳ್ಳ ಮಕ್ಕಳನ್ನು ವಿದೇಶಿಗರು ದತ್ತು ಪಡೆಯುತ್ತಾರೆ. ಮತ್ತೊಂದು ಶಿಶು ಅಮೆರಿಕಕ್ಕೆ ತೆರಳುವ ಸಾಧ್ಯತೆ ಇದೆ. ದತ್ತು ಪ್ರಕ್ರಿಯೆ ಪ್ರಗತಿಯಲ್ಲಿದೆಟಿ.ಎನ್.ಕವಿತಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
212 ದತ್ತು ಸಂಸ್ಥೆಗೆ ದಾಖಲಾದ ಮಕ್ಕಳು
75 ಮಕ್ಕಳು ದತ್ತು ಪ್ರಕ್ರಿಯೆಗೆ ಒಳಪಟ್ಟವರು
33 ಮಕ್ಕಳು ಬೇರೆ ಜಿಲ್ಲೆಗೆ ವರ್ಗಾವಣೆ
25 ಮರಣ ಹೊಂದಿದ ಮಕ್ಕಳು
54 ಜೈವಿಕ ಪೋಷಕರೊಂದಿಗೆ ಪುನರ್ವಸತಿ ಪಡೆದವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.