ADVERTISEMENT

ದಾವಣಗೆರೆ: ಪೊಲೀಸರೊಂದಿಗೆ ಮ್ಯಾರಥಾನ್‌’ ಮಾರ್ಚ್‌ 1ಕ್ಕೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 15:32 IST
Last Updated 27 ಫೆಬ್ರುವರಿ 2026, 15:32 IST
   

ದಾವಣಗೆರೆ: ನಗರದಲ್ಲಿ 3ನೇ ಬಾರಿಗೆ ‘ಪೊಲೀಸರೊಂದಿಗೆ ಮ್ಯಾರಥಾನ್‌’ ಅನ್ನು ಮಾರ್ಚ್‌ 1ರಂದು ಬೆಳಿಗ್ಗೆ 6ಕ್ಕೆ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಾರ್ವಜನಿಕರು ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಟಿ. ಶೇಖರ್‌ ತಿಳಿಸಿದರು.

‘ಭಾರತೀಯ ಸ್ಟೇಟ್‌ ಬ್ಯಾಂಕ್‌ ಸಹಯೋಗದಲ್ಲಿ ಮ್ಯಾರಥಾನ್‌ ಆಯೋಜಿಸಲಾಗಿದೆ. ಪೂರ್ವ ವಲಯದ ಐಜಿಪಿ ಬಿ.ಆರ್‌. ರವಿಕಾಂತೇಗೌಡ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ. 18 ವರ್ಷ ಮೇಲ್ಪಟ್ಟವರು ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ನೋಂದಣಿಗೆ ಫೆ.28 ಕೊನೆಯ ದಿನ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘10,000 ಮೀಟರ್‌ ಮತ್ತು 5,000 ಮೀಟರ್‌ ವಿಭಾಗದಲ್ಲಿ ಪುರುಷರಿಗೆ ಹಾಗೂ 5,000 ಮೀಟರ್‌ ವಿಭಾಗದಲ್ಲಿ ಮಹಿಳೆಯರಿಗೆ ಸ್ಪರ್ಧೆ ಏರ್ಪಡಿಲಾಗಿದೆ. ಎಲ್ಲ ವಿಭಾಗಗಳಲ್ಲಿ ಅಂದಾಜು ₹ 1 ಲಕ್ಷದಷ್ಟು ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ‘ಡ್ರಗ್ಸ್‌ ಮುಕ್ತ ದಾವಣಗೆರೆ’, ‘ಸೈಬರ್‌ ಸುರಕ್ಷತೆ ನಗರ’ದಂತಹ ಜಾಗೃತಿ ಮೂಡಿಸಲಾಗುತ್ತದೆ’ ಎಂದರು.

ADVERTISEMENT

‘10,000 ಮೀಟರ್‌ ವಿಭಾಗದಲ್ಲಿ ಪ್ರಥಮ ₹ 20,000, ದ್ವಿತೀಯ ₹ 10,000 ಹಾಗೂ ತೃತೀಯ ₹ 5,000 ಬಹುಮಾನ ವಿತರಿಸಲಾಗುತ್ತದೆ. 5,000 ಮೀಟರ್‌ ವಿಭಾಗದಲ್ಲಿ ಪ್ರಥಮ ₹ 10,000, ದ್ವಿತೀಯ ₹ 5,000 ಹಾಗೂ ತೃತೀಯ ₹ 3,000 ಬಹುಮಾನ ನೀಡಲಾಗುತ್ತದೆ. ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 500 ಜನರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗುವ ಮ್ಯಾರಥಾನ್‌ ನಗರದ ವಿವಿಧ ಭಾಗಗಳಲ್ಲಿ ಸಾಗಲಿದೆ. 10,000 ಮೀಟರ್‌ ಮ್ಯಾರಥಾನ್‌ ಡೆಂಟಲ್‌ ಕಾಲೇಜು ರಸ್ತೆ, ಶಾಮನೂರು ರಸ್ತೆ, ಬಾಪೂಜಿ ಬ್ಯಾಂಕ್‌ ಸಮುದಾಯ ಭವನ, ರಿಂಗ್ ರಸ್ತೆ, ಪಿ.ಬಿ. ರಸ್ತೆಯ ಮೂಲಕ ಕ್ರೀಡಾಂಗಣಕ್ಕೆ ಮರಳಲಿದೆ. 5,000 ಮೀಟರ್‌ ಮ್ಯಾರಥಾನ್‌ ಡೆಂಟಲ್‌ ಕಾಲೇಜು ರಸ್ತೆ, ಆಂಜನೇಯ ಬಡಾವಣೆ, ವಿದ್ಯಾನಗರ, ಹದಡಿ ರಸ್ತೆ ಸೇರಿ ವಿವಿಧೆಡೆ ಸಾಗಲಿದೆ’ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ಪರಮೇಶ್ವರ, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಮಾವನ ಕುಮಾರ್‌, ಮುಖ್ಯ ವ್ಯವಸ್ಥಾಪಕ ಕೆ.ಸುರೇಶ್‌, ಡಿವೈಎಸ್‌ಪಿಗಳಾದ ರುದ್ರಪ್ಪ ಉಜ್ಜನಿಕೊಪ್ಪ, ಪ್ರಕಾಶ್‌ ಹಾಜರಿದ್ದರು.

ಮಾದಕವಸ್ತು: ಆರೋಪಿ ಜೈಲಿಗೆ

ಕಾರಾಗೃಹ ಶಿಕ್ಷೆ ಅನುಭವಿಸಿ ಮತ್ತೆ ಮಾದಕವಸ್ತು ಜಾಲದಲ್ಲಿ ಸಕ್ರಿಯನಾಗಿದ್ದ ಆರೋಪಿಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧಿಸಿದ ಪೊಲೀಸರು ಪುನಾ ಜೈಲಿಗೆ ಕಳುಹಿಸಿದ್ದಾರೆ.

‘ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಜಾಕೀರ್‌ (55) ಮಾದಕವಸ್ತು ಮಾರಾಟ, ಸಾಗಣೆ ಪ್ರಕರಣಗಳಲ್ಲಿ ಬಂಧಿತನಾಗಿದ್ದ. ಈತನ ವಿರುದ್ಧ ದಾಖಲಾದ 6 ಪ್ರಕರಣಗಳ ಪೈಕಿ 4ರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ. ಕಾರಾಗೃಹದಿಂದ ಹೊರಬಂದು ಮತ್ತೆ ಇದೇ ಕೃತ್ಯದಲ್ಲಿ ತೊಡಗಿದ್ದ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಟಿ. ಶೇಖರ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.