ADVERTISEMENT

ದಾವಣಗೆರೆ | ಮೋದಿ ಅಣಕು ಶವ ಸಂಸ್ಕಾರ ಮಾಡಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 8:19 IST
Last Updated 24 ಜೂನ್ 2020, 8:19 IST
   

ದಾವಣಗೆರೆ: ಪೆಟ್ರೋಲ್, ಡೀಸೆಲ್‌ಗಳ ಬೆಲೆ ಏರಿಕೆಗೆ ಖಂಡನೆ ಹಾಗೂ ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಸಮಿತಿ ವಿಭಾಗದ ಸದಸ್ಯರು ನರೇಂದ್ರ ಮೋದಿ ಅಣಕು ಸಮಾಧಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಲಕ್ಷ್ಮಿ ಫ್ಲೋರ್ ಮಿಲ್ ಬಳಿ ಇರುವ ಎಚ್‌.ಪಿ. ಪೆಟ್ರೋಲ್ ಮುಂಭಾಗ ವಿಭಾಗದ ಅಧ್ಯಕ್ಷ ಎಚ್.ಬಿ. ವೀರಭದ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ನ ಸದಸ್ಯರು ಮಣ್ಣಿನಲ್ಲಿ ಅಣಕು ಸಮಾಧಿ ರಚಿಸಿ ಅದರ ಮೇಲೆ ನರೇಂದ್ರ ಮೋದಿ ಭಾವಚಿತ್ರವಿಟ್ಟು, ಕಲ್ಲಿನ ಮೇಲೆ ಹೂವಿನ ಹಾರ ಹಾಕಿ, ಅರಿಶಿನ, ಕುಂಕುಮವನ್ನು ಎರಚಿ ಪ್ರತಿಭಟನೆ ನಡೆಸಿದರು.

‘ಯುಪಿಎ ಸರ್ಕಾರದಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 130 ಡಾಲರ್ ಇದ್ದರೂ ಪೆಟ್ರೋಲ್ ಬೆಲೆ ಲೀಟರ್‌ಗೆ ₹ 80 ದಾಟಿರಲಿಲ್ಲ. ಆದರೆ ಈಗ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 39 ಡಾಲರ್ ಇದ್ದರೂ ‍ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ದಿನ ಹೆಚ್ಚುತ್ತಲೇ ಇದೆ. ಇದೇ ರೀತಿ ಏರುತ್ತಾ ಹೋದರೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ’ ಎಂದು ವೀರಭದ್ರಪ್ಪ ಆರೋಪಿಸಿದರು.

ADVERTISEMENT

‘ಆರು ವರ್ಷಗಳಿಂದ ವಿದ್ಯಾವಂತ ಯುವಕರಿಗೆ ನೌಕರಿ ಹಾಗೂ ರೈತರ ಬೆಳೆಗೆ ಬೆಂಬಲ ಬೆಲೆ ಕೊಡಿಸುತ್ತೇನೆ ಎಂದು ಸುಳ್ಳು ಭರವಸೆ ನೀಡಿದ್ದಾರೆ. ಜನರ ಪಾಲಿಗೆ ಮೋದಿ ಇಲ್ಲವಾಗಿದ್ದಾರೆ’ ಎಂದು ಆರೋಪಿಸಿದರು.

ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಉತ್ತರ ವಲಯದ ಅಧ್ಯಕ್ಷ ಬಿ.ಎನ್. ರಂಗಸ್ವಾಮಿ, ದಕ್ಷಿಣ ವಲಯದ ಅಧ್ಯಕ್ಷ ಎಲ್‌.ಸಿ.ನೀಲಗಿರಿ, ರಾಕೇಶ್, ಬಿ.ಡಿ.ಸುರೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.