ADVERTISEMENT

ದಾವಣಗೆರೆ | ರಸ್ತೆ ಅಪಘಾತ; 3 ವರ್ಷದಲ್ಲಿ 927 ಸಾವು

ಜಿಲ್ಲೆಯಲ್ಲಿ 2023ರಿಂದ 3,188 ಅಪಘಾತ;ಪ್ರತಿ ವರ್ಷ 300ಕ್ಕೂ ಹೆಚ್ಚು ಜನರ ಪ್ರಾಣಕ್ಕೆ ಸಂಚಕಾರ

ರಾಮಮೂರ್ತಿ ಪಿ.
Published 24 ಜನವರಿ 2026, 2:44 IST
Last Updated 24 ಜನವರಿ 2026, 2:44 IST
   

ದಾವಣಗೆರೆ: ಜಿಲ್ಲೆಯ ವಿವಿಧೆಡೆ 2023ರಿಂದ 2025ರ ನಡುವಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 3,188 ರಸ್ತೆ ಅಪಘಾತಗಳು ಸಂಭವಿಸಿದ್ದು, ಒಟ್ಟು 927 ಜನ ಮೃತಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

2023ರಲ್ಲಿ ಒಟ್ಟು 1,082 ರಸ್ತೆ ಅಪಘಾತಗಳು ಸಂಭವಿಸಿವೆ. ಈ ಪೈಕಿ 293 ಅಪಘಾತಗಳಲ್ಲಿ 307 ಜನ ಅಸುನೀಗಿದ್ದಾರೆ. ಇನ್ನು 789 ಮಾರಣಾಂತಿಕವಲ್ಲದ ಅಪಘಾತಗಳಲ್ಲಿ ನೂರಾರು ಜನ ಗಾಯಗೊಂಡಿದ್ದಾರೆ.

2024ರಲ್ಲಿ 1,029 ಅಪಘಾತಗಳು ನಡೆದಿವೆ. ಈ ಪೈಕಿ 289 ಅಪಘಾತಗಳಲ್ಲಿ 265 ಜನ ಕೊನೆಯುಸಿರೆಳೆದಿದ್ದಾರೆ. 740 ಅಪಘಾತಗಳು ಗಾಯಗಳನ್ನುಂಟುಮಾಡಿವೆ. 

ADVERTISEMENT

2025ರಲ್ಲಿ 1,077 ಅಪಘಾತ ಸಂಭವಿಸಿವೆ. 297 ಅಪಘಾತಗಳಲ್ಲಿ 269 ಜನ ಪ್ರಾಣ ಕಳೆದುಕೊಂಡಿದ್ದರೆ, 756 ಅಪಘಾತಗಳಲ್ಲಿ ನೂರಾರು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅತಿ ವೇಗ/ ಚಾಲಕರ ಅಜಾರೂಕತೆಯಿಂದ 22 ಅಪಘಾತಗಳು ಹಾಗೂ ವೀಲ್ಹಿ ಹುಚ್ಚಾಟದಿಂದ 2 ಅಪಘಾತಗಳು ನಡೆದಿವೆ.

ಮೃತರಲ್ಲಿ ಪುರುಷರೇ ಹೆಚ್ಚು:

3 ವರ್ಷಗಳಲ್ಲಿ ವಿವಿಧ ಬಗೆಯ ರಸ್ತೆ ಅಪಘಾತಗಳಲ್ಲಿ ಮೃತಪಟ್ಟ 927 ಜನರ ಪೈಕಿ ಪುರುಷರ ಸಂಖ್ಯೆಯೇ ಹೆಚ್ಚಿದೆ. 2023ರಲ್ಲಿ 263, 2024ರಲ್ಲಿ 265 ಹಾಗೂ 2025ರಲ್ಲಿ 269 ಪುರುಷರು (ಒಟ್ಟು 797) ಮೃತಪಟ್ಟಿದ್ದಾರೆ. 2023ರಲ್ಲಿ 41, 2024ರಲ್ಲಿ 35 ಹಾಗೂ 2025ರಲ್ಲಿ 44 (ಒಟ್ಟು 120) ಮಹಿಳೆಯರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. 3 ವರ್ಷಗಳಲ್ಲಿ 10 ಮಕ್ಕಳೂ ಅಸುನೀಗಿದ್ದಾರೆ. 

ಯಮಸ್ವರೂಪಿ ರಾಜ್ಯ ಹೆದ್ದಾರಿಗಳು:

ಮಾರಣಾಂತಿಕ ಅಪಘಾತಗಳ ಪೈಕಿ ರಾಜ್ಯ ಹೆದ್ದಾರಿಗಳಲ್ಲೇ ಹೆಚ್ಚು ಅವಘಡಗಳು ಸಂಭವಿಸಿವೆ. ಮೂರು ವರ್ಷಗಳ ಅವಧಿಯಲ್ಲಿ ರಾಜ್ಯ ಹೆದ್ದಾರಿಗಳಲ್ಲಿ (ಎಸ್‌ಎಚ್‌) ಒಟ್ಟು 373 ಮಾರಣಾಂತಿಕ ಅಪಘಾತಗಳು ಘಟಿಸಿವೆ. ಇನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ (ಎನ್‌ಎಚ್‌) 209 ಅಪಘಾತಗಳು ಸಂಭವಿಸಿವೆ.

ಗ್ರಾಮೀಣ ರಸ್ತೆಗಳಲ್ಲಿ 170, ಉಪರಸ್ತೆಗಳಲ್ಲಿ (ಇತರೆ ರಸ್ತೆಗಳು) 78, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ (ಎಂಡಿಆರ್‌) 33 ಹಾಗೂ ರಿಂಗ್‌ ರಸ್ತೆಗಳಲ್ಲಿ 16 ಅಪಘಾತಗಳು ಸಂಭವಿಸಿವೆ.

ಯುವಜನರೇ ಹೆಚ್ಚು ಬಲಿ: 

2025ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 21ರಿಂದ 30 ವಯಸ್ಸಿನ 63 ಜನರು ಮೃತಪಟ್ಟಿದ್ದಾರೆ. 31ರಿಂದ 40 ವಯಸ್ಸಿನ 74 ಜನ, 51ರಿಂದ 60 ವಯೋಮಾನದವರ ಪೈಕಿ 58 ಜನ, 41ರಿಂದ 50 ವಯೋಮಾನದವರ ಪೈಕಿ 55 ಜನ ಅಸುನೀಗಿದ್ದಾರೆ ಎನ್ನುತ್ತವೆ ಪೊಲೀಸ್ ಇಲಾಖೆಯ ಅಂಕಿ ಅಂಶಗಳು. 

ಟ್ರ್ಯಾಕ್ಟರ್‌ ಹಾಗೂ ಆಟೊಗಳಲ್ಲಿ ಜೋರು ಸದ್ದಿನೊಂದಿಗೆ ಹಾಡು ಹಾಕಿಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಟ್ರ್ಯಾಕ್ಟರ್‌ಗಳ ಟ್ರಾಲಿಗೆ ರೇಡಿಯಂ ಸ್ಟಿಕರ್‌ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಪಘಾತ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ
ಉಮಾ ಪ್ರಶಾಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ದ್ವಿಚಕ್ರ ವಾಹನ ಸವಾರರೇ ಅಧಿಕ
ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಪೈಕಿ ದ್ವಿಚಕ್ರ ವಾಹನ ಸವಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಪ್ರತಿ ವರ್ಷವೂ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬೈಕ್‌ ಸವಾರರು ಜಿಲ್ಲೆಯಲ್ಲಿ ಅಸುನೀಗಿದ್ದಾರೆ. 3 ವರ್ಷಗಳಲ್ಲಿ 438 ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದರೆ 107 ಜನ ಹಿಂಬದಿ ಸವಾರರು ಸಾವಿಗೀಡಾಗಿದ್ದಾರೆ. ಕಾರು ಅಪಘಾತಗಳಲ್ಲಿ 28 ಜನ ಹಾಗೂ 180 ಜನ ಪಾದಚಾರಿಗಳು ವಿವಿಧ ಬಗೆಯ ಅಪಘಾತಗಳಿಗೆ ಬಲಿಯಾಗಿದ್ದಾರೆ.  ‘ತಲೆ ಎದೆ ಭಾಗ ಕೈಕಾಲುಗಳಿಗೆ ತೀವ್ರ ಪೆಟ್ಟು ಬೀಳುವ ಕಾರಣ ಇತರೆ ವಾಹನಗಳಿಗೆ ಹೋಲಿಸಿದರೆ ದ್ವಿಚಕ್ರ ವಾಹನ ಸವಾರರ ಸಾವಿನ ಪ್ರಮಾಣ ಹೆಚ್ಚಾಗಿರುತ್ತದೆ. ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನಗಳನ್ನು ಓಡಿಸುವುದು ಕೂಡ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ’ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.