ಮೃತ ಸಿದ್ದಲಿಂಗಪ್ಪ.
ದಾವಣಗೆರೆ: ಆಸ್ತಿ ವಿಚಾರವಾಗಿ ತಮ್ಮನ ಕೊಲೆಗೆ ಸುಪಾರಿ ನೀಡಿದ್ದ ಅಣ್ಣನ ಕುಟುಂಬದ ಮೂವರು ಸದಸ್ಯರು ಹಾಗೂ ಕೃತ್ಯ ಎಸಗಿದ ಇಬ್ಬರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆ ನಡೆಸಿದ ಚನ್ನಗಿರಿ ಠಾಣೆಯ ಪೊಲೀಸರಿಗೆ ಕೊಲೆಯಾದ ವ್ಯಕ್ತಿಯ ಸಹೋದರ ಸಂಬಂಧಿಗಳೇ ಸಿಕ್ಕಿಬಿದ್ದಿದ್ದಾರೆ.
ದಾವಣಗೆರೆ ತಾಲ್ಲೂಕಿನ ಗೋಪನಾಳ್ ಗ್ರಾಮದ ಸಿದ್ದಲಿಂಗಪ್ಪ (55) ಕೊಲೆಯಾದ ವ್ಯಕ್ತಿ. ಇವರ ಅಣ್ಣ ಶಿವಮೂರ್ತೆಪ್ಪ, ಇವರ ಪುತ್ರ ಸತೀಶ್, ಸೊಸೆ ಸುಜಾತಾ, ಸುಪಾರಿ ಹಂತಕರಾದ ಲಿಂಗದಹಳ್ಳಿಯ ಪ್ರಭು ಹಾಗೂ ನಿಟುವಳ್ಳಿಯ ಪ್ರಶಾಂತ್ ನಾಯ್ಕ ಬಂಧಿತರು. ವಿಚಾರಣೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಿದ್ದಲಿಂಗಪ್ಪ ಅವರ ಮೃತದೇಹ ಚನ್ನಗಿರಿ ತಾಲ್ಲೂಕಿನ ನಲ್ಲೂರು ಸಮೀಪದ ಭದ್ರಾ ನಾಲೆಯಲ್ಲಿ ನ.23ರಂದು ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬಂತೆ ಕಾಣುತ್ತಿದ್ದ ಪ್ರಕರಣದ ಬಗ್ಗೆ ಸಿದ್ದಲಿಂಗಪ್ಪ ಅವರ ಸೊಸೆ ದೊಡ್ಡಮ್ಮ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಕೊಲೆ ಆರೋಪಿಗಳು ಪತ್ತೆಯಾಗಿದ್ದಾರೆ.
ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣ
‘ಗೋಪನಾಳ್ ಗ್ರಾಮದ ಸಿದ್ದಪ್ಪ ಎಂಬುವರ ಮೂವರು ಪುತ್ರರಲ್ಲಿ ಸಿದ್ದಲಿಂಗಪ್ಪ ಹಾಗೂ ಶಿವಮೂರ್ತೆಪ್ಪ ನಡುವೆ ಆಸ್ತಿ ವಿಚಾರವಾಗಿ ಕಲಹ ನಡೆಯುತ್ತಿತ್ತು. ಗ್ರಾಮದಲ್ಲಿ ನಡೆದ ರಾಜಿಯಲ್ಲಿ ಇತ್ಯರ್ಥವಾಗದ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಪ್ರಕರಣ ಬಗೆಹರಿಯುವುದು ವಿಳಂಬವಾದ ಹಿನ್ನೆಲೆಯಲ್ಲಿ ಸಿದ್ದಲಿಂಗಪ್ಪ ಅವರ ಕೊಲೆಗೆ ಸತೀಶ್ ಸಂಚು ರೂಪಿಸಿದ್ದ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
‘ಗಾರೆ ಕೆಲಸ ಮಾಡಿಕೊಂಡಿದ್ದ ಪ್ರಭು ಮತ್ತು ಪ್ರಶಾಂತ್ ನಾಯ್ಕ ಅವರನ್ನು ಸಂಪರ್ಕಿಸಿದ ಸತೀಶ್, ಚಿಕ್ಕಪ್ಪನ ಕೊಲೆಗೆ ₹ 1 ಲಕ್ಷಕ್ಕೆ ಸುಪಾರಿ ನೀಡಿದ್ದ. ಮುಂಗಡವಾಗಿ ಒಂದಷ್ಟು ಹಣ ಕೊಟ್ಟು ಚಿಕ್ಕಪ್ಪನ ಕುರಿತು ಮಾಹಿತಿ ಒದಗಿಸಿದ್ದ. ಕೊಳವೆಬಾವಿ ಕೊರೆಸುವ ಪಾಯಿಂಟ್ ನೋಡುವ ಕೆಲಸ ಮಾಡುತ್ತಿದ್ದ ಸಿದ್ದಲಿಂಗಪ್ಪ ಅವರ ಮೊಬೈಲ್ ಸಂಖ್ಯೆ ನೀಡಿದ್ದ. ಈ ಸಂಚಿನಲ್ಲಿ ಶಿವಮೂರ್ತೆಪ್ಪ ಹಾಗೂ ಸುಜಾತಾ ಕೂಡ ಭಾಗಿಯಾಗಿದ್ದರು’ ಎಂದು ವಿವರಿಸಿದ್ದಾರೆ.
ಪಾಯಿಂಟ್ ನೋಡುವ ನೆಪದಲ್ಲಿ ಸಂಪರ್ಕ
‘ಸಿದ್ದಲಿಂಗಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಪ್ರಭು ಮತ್ತು ಪ್ರಶಾಂತ್, ‘ಕೊಳವೆಬಾವಿ ಕೊರೆಸಲು ಪಾಯಿಂಟ್ ನೋಡಬೇಕಿದೆ’ ಎಂಬ ನೆಪ ಹೇಳಿದ್ದರು. ಸಂತೆಬೆನ್ನೂರು ಸಮೀಪದ ತೊಗಲೇರಿ ಕ್ರಾಸ್ ಬಳಿಗೆ ಕರೆಸಿಕೊಂಡು ಆಟೊದಲ್ಲಿ ಹೊನ್ನೆಬಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ರಾತ್ರಿ ಕತ್ತಲಾದ ಬಳಿಕ ಅಲ್ಲಿ ಮದ್ಯ ಸೇವನೆ ಮಾಡಿ ಪೂರ್ವ ನಿಯೋಜನೆಯಂತೆ ಕೊರಳಿಗೆ ಟವೆಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
‘ಅಲ್ಲಿಂದ ಮೃತದೇಹವನ್ನು ಆಟೊದಲ್ಲಿ ನಲ್ಲೂರು ಸಮೀಪದ ನಾಲೆಯ ಬಳಿಗೆ ಸಾಗಿಸಿದ್ದಾರೆ. ಮೃತದೇಹಕ್ಕೆ ಕಲ್ಲುಕಟ್ಟಿ ನಾಲೆಗೆ ಉರುಳಿಸಿದ್ದರು. ಎರಡು ದಿನಗಳ ಬಳಿಕ ನಾಲೆಯಲ್ಲಿ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆಗೆ ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು’ ಎಂದು ಹೇಳಿದ್ದಾರೆ.
*****
ಕೊಲೆಯನ್ನು ಖಚಿತಪಡಿಸಿಕೊಳ್ಳಲು ಚಿಕ್ಕಪ್ಪನ ಚಿತ್ರಗಳನ್ನು ಸತೀಶ್ ವಾಟ್ಸ್‌ಆಪ್ ಮೂಲಕ ತರಿಸಿಕೊಂಡಿದ್ದ. ಆನ್‌ಲೈನ್ ಮೂಲಕ ₹ 10,000 ಹಣ ಸಂದಾಯ ಮಾಡಿದ್ದ. ಉಳಿದ ಹಣಕ್ಕೆ ಕಾಲಾವಕಾಶ ಕೇಳಿದ್ದ
–ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.