ADVERTISEMENT

ದಾವಣಗೆರೆ: ಮಳೆಗೆ ಮೂವರ ಸಾವು

ಹಿರಿಯೂರು: ವಾಣಿವಿಲಾಸ ಜಲಾಶಯಕ್ಕೆ ಇಪ್ಪತ್ತು ವರ್ಷಗಳ ನಂತರ ದಾಖಲೆ ಪ್ರಮಾಣದ ನೀರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 19:07 IST
Last Updated 20 ನವೆಂಬರ್ 2021, 19:07 IST
ಚನ್ನಗಿರಿ ತಾಲ್ಲೂಕಿನ ಬುಳುಸಾಗರ ಗ್ರಾಮದಲ್ಲಿ ಶನಿವಾರ ಹರಿದ್ರಾವತಿ ಹಳ್ಳದ ನೀರು ನುಗ್ಗಿರುವುದು –ಪ್ರಜಾವಾಣಿ ಚಿತ್ರ
ಚನ್ನಗಿರಿ ತಾಲ್ಲೂಕಿನ ಬುಳುಸಾಗರ ಗ್ರಾಮದಲ್ಲಿ ಶನಿವಾರ ಹರಿದ್ರಾವತಿ ಹಳ್ಳದ ನೀರು ನುಗ್ಗಿರುವುದು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ. ಮನೆಯ ಗೋಡೆ ಕುಸಿದು ಮತ್ತೊಬ್ಬರು ಮೃತಪಟ್ಟಿದ್ದಾರೆ.

ದಾವಣಗೆರೆ ತಾಲ್ಲೂಕಿನ ಹುಚ್ಚವ್ವನಹಳ್ಳಿಯಲ್ಲಿತಿಪ್ಪೇಸ್ವಾಮಿ (48) ಅವರು ಜಾನುವಾರು ತೊಳೆಯಲು ಹೋಗಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಶೋಧಕಾರ್ಯ ನಡೆಸಿದರೂ ಅವರ ದೇಹ ಪತ್ತೆಯಾಗಿಲ್ಲ. ಚನ್ನಗಿರಿ ತಾಲ್ಲೂಕಿನ ನಲ್ಲೂರು ಸೇತುವೆ ಬಳಿ ಹಳ್ಳ ದಾಟಲು ಹೋದ ಕೆಂಚಪ್ಪ (70) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೊಬಳಿಯ ಗೋವಿನಹಾಳು ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಸವರಾಜಪ್ಪ (62) ಮೃತಪಟ್ಟಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಮಳೆಯಿಂದಾಗಿ 3,508 ಎಕರೆ ಬೆಳೆ ಹಾನಿಯಾಗಿದ್ದು, ನಾಲ್ಕು ಜಾನುವಾರು ಮೃತಪಟ್ಟಿವೆ. ಚನ್ನಗಿರಿ ತಾಲ್ಲೂಕಿನ ಜೋಳದಹಾಳ್ ಭಾಗದಲ್ಲಿ 12.6 ಸೆಂ.ಮೀ ಮಳೆಯಾಗಿದೆ. ಇಲ್ಲಿನ ಕುಕ್ಕುವಾಡೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು ₹ 3.29 ಕೋಟಿ ನಷ್ಟ ಸಂಭವಿಸಿದೆ.

ಕುಸಿದ ಕಲ್ಲು: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಐತಿಹಾಸಿಕ ಕೋಟೆಯಲ್ಲಿ ಪ್ರವಾಸಿಗರ ವಿಶ್ರಾಂತಿಗಾಗಿ ನಿರ್ಮಿಸಿದ್ದ ಕಲ್ಲಿನ ಕಟ್ಟಡ ಕುಸಿದಿದೆ. ಶಿಖರದಲ್ಲಿ ಕಲ್ಲುಗಳು ಹಾಗೂ ಮಣ್ಣು ಕುಸಿಯುತ್ತಿರುವುದರಿಂದ ಸದ್ಯಕ್ಕೆ ದೇವಿಯ ದರ್ಶನಕ್ಕೆ ಭಕ್ತರು ಬರಬಾರದು ಎಂದು ಉತ್ಸವಾಂಬ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಮನವಿ ಮಾಡಿದ್ದಾರೆ.

ಇಪ್ಪತ್ತು ವರ್ಷದ ನಂತರ ದಾಖಲೆಯ ನೀರಿನ ಹರಿವು:ಹಿರಿಯೂರು ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಶನಿವಾರ 120 ಅಡಿ ದಾಟಿದ್ದು, ಇಪ್ಪತ್ತು ವರ್ಷಗಳ ನಂತರ ದಾಖಲೆ ಪ್ರಮಾಣದ ನೀರು ಸಂಗ್ರಹವಾಗಿದೆ.

2000ರಲ್ಲಿ ಜಲಾಶಯಕ್ಕೆ 122.50 ಅಡಿ ನೀರು ಸಂಗ್ರಹವಾಗಿದ್ದು, ಹೊರತುಪಡಿಸಿದರೆ ಜಲಾಶಯ ಖಾಲಿಯಾಗಿದ್ದೇ ಹೆಚ್ಚು.30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ 22.21 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು,7,860 ಕ್ಯುಸೆಕ್ ನೀರು ಹರಿದು ಬರುತ್ತಿದೆ.

ತಾಲ್ಲೂಕಿನ ಗಾಯತ್ರಿ ಜಲಾಶಯ,ವೇದಾವತಿ, ಸುವರ್ಣಮುಖಿ ನದಿಗಳು ತುಂಬಿ ಹರಿಯುತ್ತಿವೆ.

ಮನೆಗಳಿಗೆ ಹಾನಿ:ಹಿರಿಯೂರು ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಮಳೆಗೆ 123 ಮನೆಗಳಿಗೆ ಹಾನಿಯಾಗಿದೆ. ಚಿಕ್ಕಜಾಜೂರು ಸಮೀಪದ ಮುತ್ತುಗದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಮನೆಗಳ ಗೋಡೆಗಳು ಕುಸಿದಿವೆ. ಹೊಸದುರ್ಗ ತಾಲ್ಲೂಕಿನ ಬಾಗೂರು ಕೆರೆ ತುಂಬಿದ್ದು, ಕೋಡಿಕಲ್ಲೇಶ್ವರ ದೇವಾಲಯ ಮುಳುಗಡೆಯಾಗಿದೆ.

ಭತ್ತ ಜಲಾವೃತ: ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಜೋರು ಮಳೆಗೆ ಹಲವೆಡೆ ಭತ್ತ ಜಲಾವೃತವಾಗಿದೆ.

ಜಿಲ್ಲೆಯಲ್ಲಿ 130 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾಗೂ 37 ಮನೆಗಳು ಹಾನಿಯಾಗಿವೆ. ಭದ್ರಾವತಿ, ಶಿವಮೊಗ್ಗದಲ್ಲಿ ತಲಾ ಎರಡು ಕಚ್ಚಾ ಮನೆಗಳು ಹಾನಿಗೀಡಾಗಿವೆ. 15 ದಿನಗಳಲ್ಲಿ 34 ಮನೆಗಳು ಸಂಪೂರ್ಣ, 3 ಮನೆಗಳು ಭಾಗಶಃ ಹಾನಿಗೀಡಾಗಿವೆ. 5 ಜಾನುವಾರು ಮೃತಪಟ್ಟಿವೆ.

ಭತ್ತದ ಬೆಳೆಗೆ ವ್ಯಾಪಕ ಹಾನಿಯಾಗಿದೆ.‌ ಶೇ 80ರಷ್ಟು ಬೆಳೆ ಕೊಯ್ಲು ಆಗಬೇಕಿದೆ. ಮಳೆ ಕಾರಣಕ್ಕೆ ಕೊಯ್ಲು ಮಾಡಲು ಆಗುತ್ತಿಲ್ಲ. ಕೊಯ್ಲು ಮಾಡಿದ ಬೆಳೆ ರೈತರ ಕೈಗೆ ಸಿಕ್ಕಿಲ್ಲ. ಜೋಳದ ತೆನೆಗೆ ಫಂಗಸ್ ತಗುಲುವ ಭೀತಿ ಎದುರಾಗಿದೆ. ಶಿಕಾರಿಪುರ ತಾಲ್ಲೂಕಿನಲ್ಲಿ ಕಟಾವು ಮಾಡಿದ ಭತ್ತ ನೀರು ಪಾಲಾಗಿದೆ.

ಚಿಕ್ಕಮಗಳೂರಿನಲ್ಲಿ ಇಬ್ಬರ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಸಿದ್ದರಹಳ್ಳಿ ಗ್ರಾಮದ ಪೊನ್ನುಸ್ವಾಮಿ (50) ಮೃತಪಟ್ಟಿದ್ದಾರೆ. ತರೀಕೆರೆ ತಾಲ್ಲೂಕಿನ ಹುಲಿತಿಮ್ಮಾಪುರ ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿ ಶುಕ್ರವಾರ ಹಳ್ಳ ದಾಟುವಾಗ ನೀರು ಪಾಲಾಗಿದ್ದರು. ಅವರ ಮೃತದೇಹ ಶನಿವಾರ ಪತ್ತೆಯಾಗಿದೆ.

ಅಜ್ಜಂಪುರ ತಾಲ್ಲೂಕಿನ ಹೆಗ್ಗಡಿ ಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದ ರೈತ ಆನಂದಪ್ಪ(43) ಅವರ ಶವ ಶನಿವಾರ ಪತ್ತೆಯಾಗಿದೆ.

ಮಂಗಳೂರಿನಲ್ಲಿ ಶುಕ್ರವಾರ ರಾತ್ರಿಯಿಂದಲೇ ಬಿರುಸಿನ ಮಳೆ ಆರಂಭವಾಗಿದ್ದು, ಶನಿವಾರವೂ ಮುಂದುವರಿದಿದೆ. ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ತುಸು ಕಡಿಮೆಯಾಗಿದೆ.

ರಾಜ್ಯದಲ್ಲಿ ನ.23ರಿಂದ ಮಳೆ ತಗ್ಗುವ ಸಾಧ್ಯತೆ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಹಾಗೂ ತಮಿಳುನಾಡಿನ ಒಳನಾಡಿನಲ್ಲಿದ್ದ ವಾಯುಭಾರ ಕುಸಿತ ದುರ್ಬಲಗೊಂಡಿದ್ದು, ಮೇಲ್ಮೈ ಸುಳಿಗಾಳಿ ಸಕ್ರಿಯವಾಗಿದೆ. ಇದರಿಂದ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ನ.21ರಂದು ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇಲ್ಮೈ ಸುಳಿಗಾಳಿಯ ತೀವ್ರತೆ ತಗ್ಗಲಿರುವುದರಿಂದ ಮುಂದಿನ ಎರಡು ದಿನಗಳವರೆಗೆ ಮಾತ್ರ ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ನ.23ರಿಂದ ಉತ್ತರ ಒಳನಾಡಿನಲ್ಲಿ ಮಳೆ ತಗ್ಗುವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾನುವಾರ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ಮಳೆ–ಎಲ್ಲಿ, ಎಷ್ಟು?: ಹಾವೇರಿ ಜಿಲ್ಲೆಯ ಕೆಲವರಕೊಪ್ಪ ಭಾಗದಲ್ಲಿ ಶನಿವಾರ 19 ಸೆಂ.ಮೀ ಗರಿಷ್ಠ ಮಳೆಯಾಗಿದೆ.

ಮಂಗಳೂರು, ಕಡೂರು, 16, ಹಾನಗಲ್ 13, ಹಿರೇಕೆರೂರು 9, ಶಿಡ್ಲಘಟ್ಟ 8, ಮದ್ದೂರು, ಬಂಗಾರಪೇಟೆ 7, ಹಾವೇರಿ, ಮಧುಗಿರಿ 6, ಕೋಲಾರ 5, ಸುಳ್ಯ, ಚಿತ್ರದುರ್ಗ, ದಾವಣಗೆರೆ, ಕಂಪ್ಲಿ 4, ಕಾರವಾರ, ಭಟ್ಕಳ, ಚಿಂತಾಮಣಿ, ಗುಡಿಬಂಡೆ, ಹಿರಿಯೂರು, ಮಾಲೂರು, ಸಾಗರ, ಶಿರಾ 3, ಮೂಡುಬಿದರೆ, ಮಾನ್ವಿ, ಗಂಗಾವತಿ, ಗದಗ, ಕೊಪ್ಪಳ, ನರಗುಂದ, ಗೌರಿಬಿದನೂರು, ತೊಂಡೆಬಾವಿ, ‍ಪಾವಗಡ, ತಿಪಟೂರು, ಹೊಸಕೋಟೆ, ದೊಡ್ಡಬಳ್ಳಾಪುರ 2, ಪುತ್ತೂರು, ಕಾರ್ಕಳ, ಬಾಗಲಕೋಟೆ, ಹುಕ್ಕೇರಿ, ಚಿಕ್ಕೋಡಿ, ನೆಲಮಂಗಲ, ಶಿವಮೊಗ್ಗ, ಶ್ರೀರಂಗಪಟ್ಟಣ, ಮಂಡ್ಯ, ಚನ್ನಪಟ್ಟಣ, ಮಡಿಕೇರಿ, ಹಾಸನ, ಭದ್ರಾವತಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.