
ದಾವಣಗೆರೆ: ಸಮೀಪದ ತೋಳಹುಣಸೆಯಲ್ಲಿರುವ ದಾವಣಗೆರೆ ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವ ಸಮಾರಂಭ ಜ.30ರಂದು ನಡೆಯಲಿದೆ. ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪಾಲ್ಗೊಳ್ಳಲಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ಒಟ್ಟು 12,706 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ.
2024-25ನೇ ಶೈಕ್ಷಣಿಕ ವರ್ಷದ ಸ್ನಾತಕ ವಿಭಾಗದಲ್ಲಿ 10,684, ಸ್ನಾತಕೋತ್ತರ ವಿಭಾಗದಲ್ಲಿ 2022 ಮತ್ತು ಸಂಶೋಧನಾ ವಿಭಾಗದಲ್ಲಿ 70 ವಿದ್ಯಾರ್ಥಿಗಳು ಪಿಎಚ್.ಡಿ ಪಡೆದಿದ್ದಾರೆ ಎಂದು ಕುಲಪತಿ ಪ್ರೊ.ಬಿ.ಡಿ. ಕುಂಬಾರ ಅವರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಮಧ್ಯಾಹ್ನ 12ಕ್ಕೆ ಶಿವಗಂಗೋತ್ರಿ ಕ್ಯಾಂಪಸ್‌ನ ಜ್ಞಾನಸೌಧ ಆವರಣದಲ್ಲಿ ಆಯೋಜಿಸಿರುವ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಹಾಗೂ ಡಿಆರ್‌ಡಿಒ ಮಾಜಿ ಕಾರ್ಯದರ್ಶಿ ಡಾ. ವಾಸುದೇವ್ ಕೆ. ಅತ್ರೆ ಅವರು ಪಾಲ್ಗೊಳ್ಳಿದ್ದಾರೆ. 45 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು 87 ಚಿನ್ನದ ಪದಕಗಳನ್ನು ಹಂಚಿಕೊಂಡಿದ್ದು, ಎಂ.ಕಾಂ ವಿಭಾಗದ ವಿದ್ಯಾರ್ಥಿನಿ ನಯನಾ ಎನ್.ಬಿ ಏಳು ಪದಕಗಳೊಂದಿಗೆ ಚಿನ್ನದ ಹುಡುಗಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಸ್ನಾತಕ ಪದವಿಯ 22 ಹಾಗೂ ಸ್ನಾತಕೋತ್ತರ ಪದವಿಯ 65 ಚಿನ್ನದ ಪದಕಗಳ ಪೈಕಿ ಹೆಚ್ಚಿನವು ಹೆಣ್ಣುಮಕ್ಕಳ ಪಾಲಾಗಿವೆ. ಎರಡೂ ವಿಭಾಗಗಳಲ್ಲಿ 35 ಹೆಣ್ಣುಮಕ್ಕಳು ಪದಕಗಳನ್ನು ಗಳಿಸಿದ್ದಾರೆ. ಉಳಿದ ಪದಕಗಳು 10 ಹುಡುಗರ ಪಾಲಾಗಿವೆ.
ಸ್ನಾತಕೋತ್ತರ ಪದವಿಯ ಎಂಬಿಎ ವಿಭಾಗದ ದೀಪಾ ಆರ್. ನಾಲ್ಕು ಪದಕ, ಗಣಿತ ವಿಭಾಗದ ಕವನ ಪಿ.ಎಂ, ಜೀವರಸಾಯನವಿಜ್ಞಾನ ವಿಭಾಗದ ರುಚಿತಾ ಡಿ., ಭೌತವಿಜ್ಞಾನ ವಿಭಾಗದ ಪುಟ್ಟರಾಜ ಎಂ.ಆರ್, ಪ್ರಾಣಿವಿಜ್ಞಾನ ವಿಭಾಗದ ಪುಷ್ಪಾ ಜೆ., ಇಂಗ್ಲಿಷ್ ವಿಭಾಗದ ವಿಜಯಲಕ್ಷ್ಮಿ ಬಿ.ಎಂ, ಕನ್ನಡ ವಿಭಾಗದ ಅನುಷಾ ಎಂ.ಎಂ. ಅವರು ತಲಾ ಮೂರು ಚಿನ್ನದ ಪದಕ ಗಳಿಸಿದ್ದಾರೆ ಎಂದರು.
ಕೋನೇನ್ ತಬಸುಮ್ (ಅರ್ಥಶಾಸ್ತ್ರ), ಚಂದನ್ ವಿ.ಎಂ (ಪತ್ರಿಕೋದ್ಯಮ), ಪ್ರದೀಪ್ ಕುಮಾರ್ ಬಿ. (ಇತಿಹಾಸ, ಪ್ರಾಚ್ಯವಸ್ತು), ಪ್ರಿಯಾ ಎಂ. (ಸಸ್ಯವಿಜ್ಞಾನ), ಗಗನಾ ಎ.ಎಂ (ಎಂಪಿಇಡಿ), ಚೌಡೇಶ್ವರಿ ಟಿ. (ರಸಾಯನವಿಜ್ಞಾನ), ಸುಮತಿ ಎಚ್.ಪಿ (ಗಣಕ ವಿಜ್ಞಾನ), ನಿತೀಶ್ ಕೆ.ಗೌಡ (ಆಹಾರ ತಂತ್ರಜ್ಞಾನ), ಗಾಯತ್ರಿ ದೀಪಿಕಾ ಬಿ. (ಸೂಕ್ಷ್ಮ ಜೀವವಿಜ್ಞಾನ ) ಅವರು ತಲಾ ಎರಡು ಬಂಗಾರದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆದ ಪರೀಕ್ಷೆಗಳಲ್ಲಿ ಸ್ನಾತಕ ಪದವಿಯಲ್ಲಿ ಶೇ 58.77 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 91.41ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದರು.
ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ಇದ್ದರು.
ಮೂವರಿಗೆ ಗೌರವ ಡಾಕ್ಟರೇಟ್ ನಿವೃತ್ತ ಪೊಲೀಸ್ ಅಧಿಕಾರಿ ಎಲ್.ರೇವಣಸಿದ್ದಯ್ಯ ಶೈಕ್ಷಣಿಕ ಸಂಘಟಕ ಪ್ರೊ.ಸಿ.ಎಚ್.ಮುರುಗೇಂದ್ರಪ್ಪ ಮತ್ತು ಸಮಾಜ ಸೇವಕ ಎಂ.ರಾಮಪ್ಪ ಅವರಿಗೆ ಈ ಬಾರಿ ದಾವಣಗೆರೆ ವಿಶ್ವವಿದ್ಯಾನಿಲಯ ವತಿಯಿಂದ ಡಿ.ಲಿಟ್- ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಗೌರವ ಡಾಕ್ಟರೇಟ್‌ಗೆ 9 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಮೂವರು ಹೆಸರನ್ನು ರಾಜ್ಯಪಾಲರು ಅಂತಿಮಗೊಳಿಸಿದ್ದಾರೆ ಎಂದು ಪ್ರೊ.ಕುಂಬಾರ ಹೇಳಿದರು. ಎಲ್. ರೇವಣ್ಣಸಿದ್ದಯ್ಯ: ಎಲ್. ರೇವಣ್ಣಸಿದ್ದಯ್ಯ ಅವರು ಐಜಿಪಿ ಆಗಿ ನಿವೃತ್ತರಾಗಿದ್ದಾರೆ. 1965ರಲ್ಲಿ ಪೊಲೀಸ್ ಇಲಾಖೆ ಸೇರಿದ ಅವರು ಜಿಲ್ಲಾ ವರಿಷ್ಠಾಧಿಕಾರಿಯಾಗಿ ಸೇವೆಯನ್ನು ಪ್ರಾರಂಭಿಸಿದರು. ನಾಲ್ಕು ದಶಕಗಳವರೆಗೆ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದ ವೇಳೆ ಹೊಯ್ಸಳ ಪೊಲೀಸ್ ಪಡೆ ಮಕ್ಕಳ ಸಹಾಯವಾಣಿ ವನಿತಾ ಸಹಾಯವಾಣಿ ಹಾಗೂ ಸಂಚಾರಿ ಪೊಲೀಸ್ ಠಾಣೆ ಮೊದಲಾದ ಯೋಜನೆಗಳನ್ನು ಜಾರಿಗೆ ತಂದಿದ್ದರು. ಸಿ.ಹೆಚ್. ಮುರುಗೇಂದ್ರಪ್ಪ: ನಿವೃತ್ತ ಪ್ರಾಧ್ಯಾಪಕ ಸಿ.ಎಚ್. ಮುರುಗೇಂದ್ರಪ್ಪ ಅವರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಕುಂದೂರು ಗ್ರಾಮದಲ್ಲಿ ಜನಿಸಿದರು. ದಾವಣಗೆರೆಯ ಎ.ವಿ.ಕೆ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ 1983ರಲ್ಲಿ ವೃತ್ತಿ ಆರಂಭಿಸಿ 2015ರಲ್ಲಿ ನಿವೃತ್ತರಾದರು. ರಾಜ್ಯ ವಿಶ್ವವಿದ್ಯಾನಿಲಯಗಳ ಹಾಗೂ ಕಾಲೇಜು ಅಧ್ಯಾಪಕರ ಒಕ್ಕೂಟದ ಅಧ್ಯಕ್ಷರಾಗಿ ಕುವೆಂಪು ವಿಶ್ವವಿದ್ಯಾನಿಲಯದ ಚುನಾಯಿತ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಶೈಕ್ಷಣಿಕ ಮತ್ತು ಪರೀಕ್ಷಾಂಗ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದ್ದಾರೆ. ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಠಾಧಿಪತಿಗಳು ಜನಪ್ರತಿನಿಧಿಗಳು ಹಾಗೂ ಶಿಕ್ಷಣಾಸಕ್ತರ ಜತೆ ಸಂಪರ್ಕದಲ್ಲಿದ್ದರು. 2009ರಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಂ. ರಾಮಪ್ಪ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮದ ರಾಮಪ್ಪ ಅವರು ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ಮೈಸೂರಿನ ಮಾತೃ ಮಂಡಳಿ ಶಿಕ್ಷಣ ಸಂಸ್ಥೆಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ 28 ವರ್ಷ ಸೇವೆ ಸಲ್ಲಿಸಿದರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಸದಾ ಜನಪರ ಚಿಂತನೆ ಹೊಂದಿದ್ದಾರೆ. ನಾಗರಿಕ ಕಲ್ಯಾಣ ಯುವಜನರ ಸಬಲೀಕರಣ ಹಾಗೂ ಗ್ರಾಮೀಣಾಭಿವೃದ್ಧಿ ಕಾರ್ಯ ಚಟುವಟಿಕೆಗಳಲ್ಲಿ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಸಮಾಜಸೇವೆ ಜೊತೆಗೆ ಪರಿಸರಾಭಿವೃದ್ಧಿ ಮತ್ತು ನಿಸರ್ಗದ ಸಂರಕ್ಷಣೆಗೆ ತಮ್ಮದೇ ಪರಿಕಲ್ಪನೆ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.