ADVERTISEMENT

ದಾವಣಗೆರೆ: ಮಾದಕವಸ್ತು ತಡೆಯುತ್ತಿದೆ ಮೆಷ್‌ ಬಲೆ

ಜಿಲ್ಲಾ ಕಾರಾಗೃಹದಲ್ಲಿ ವಿನೂತನ ಕ್ರಮ, ಜೈಲಿನೊಳಗೆ ತೂರಿಬರುವ ವಸ್ತುಗಳಿಗೆ ಕಡಿವಾಣ

ಜಿ.ಬಿ.ನಾಗರಾಜ್
Published 20 ಡಿಸೆಂಬರ್ 2025, 6:26 IST
Last Updated 20 ಡಿಸೆಂಬರ್ 2025, 6:26 IST
ದಾವಣಗೆರೆಯ ವಸಂತ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದ ಮೇಲ್ಭಾಗದಲ್ಲಿ ನಿರ್ಮಿಸಿದ ಮೆಷ್‌
ದಾವಣಗೆರೆಯ ವಸಂತ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದ ಮೇಲ್ಭಾಗದಲ್ಲಿ ನಿರ್ಮಿಸಿದ ಮೆಷ್‌   

ದಾವಣಗೆರೆ: ಕಾಂಪೌಂಡ್‌ ದಾಟಿ ಜೈಲಿನೊಳಗೆ ಬೀಳುವ ನಿಷೇಧಿತ ವಸ್ತುಗಳು ಕೈದಿಗಳ ಕೈಗೆಟುಕದಂತೆ ತಡೆಯುವಲ್ಲಿ ಜಿಲ್ಲಾ ಕಾರಾಗೃಹದ ಮೇಲ್ಭಾಗದಲ್ಲಿ ನಿರ್ಮಿಸಿದ ಮೆಷ್‌ ಬಲೆ ಯಶಸ್ವಿಯಾಗಿದೆ. ತಂಬಾಕು, ಬೀಡಿ ಮತ್ತು ಮಾದಕವಸ್ತುಗಳು ಜೈಲಿಗೆ ತೂರಿ ಬರುವುದಕ್ಕೆ ಕಡಿವಾಣ ಬಿದ್ದಿದೆ.

ಮೆಷ್‌ ಅಳವಡಿಸಿದ ಒಂದು ವರ್ಷದ ಅವಧಿಯಲ್ಲಿ ಬೀಡಿ, ಸಿಗರೇಟು ಸೇರಿದಂತೆ ಇತರ ವಸ್ತುಗಳು ಜೈಲಿನೊಳಗೆ ತೂರಿ ಬಂದಿದ್ದು ವಿರಳ. ಹೀಗೆ ಎಸೆದ ವಸ್ತುಗಳು ಮೆಷ್‌ ಮೇಲೆ ಬಿದ್ದು, ಕೈದಿಗಳ ಬದಲಾಗಿ ಕಾರಾಗೃಹ ಸಿಬ್ಬಂದಿಯ ಕೈಸೇರಿವೆ.

ನಗರದ ವಸಂತ ಟಾಕೀಸ್‌ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದ ಸುತ್ತ ಜನವಸತಿ ಪ್ರದೇಶವಿದೆ. ಜೈಲಿನ ಉತ್ತರ ಭಾಗಕ್ಕೆ ರಸ್ತೆ, ದಕ್ಷಿಣ ಭಾಗದಲ್ಲಿ ರೈಲ್ವೆ ಹಳಿ ಹಾದುಹೋಗಿದೆ. ಜನ ಹಾಗೂ ವಾಹನ ದಟ್ಟಣೆ ಹೆಚ್ಚಾಗಿರುವ ಈ ಪ್ರದೇಶದಿಂದ ಜೈಲಿನ ಒಳಗೆ ಬೀಡಿ, ಸಿಗರೇಟ್‌ ಸೇರಿದಂತೆ ನಿಷೇಧಿತ ವಸ್ತುಗಳು ತೂರಿ ಬರುತ್ತಿದ್ದವು. ಕಾರಾಗೃಹದ ಸುತ್ತ ಸಿಬ್ಬಂದಿ ನಿಗಾ ಇಟ್ಟಿದ್ದರೂ ಇವು ಕೈದಿಗಳ ಕೈಗೆ ಸುಲಭವಾಗಿ ಸಿಗುತ್ತಿದ್ದವು. ಇದನ್ನು ತಡೆಯುವ ಉದ್ದೇಶದಿಂದ ಜೈಲು ಅಧೀಕ್ಷಕ ಆನಂದ ಭಜಂತ್ರಿ ವೈರಿನ ಮೆಷ್‌ ಬಲೆ ನಿರ್ಮಿಸಿದರು.

ADVERTISEMENT

ಜೈಲಿನ ಉತ್ತರ, ದಕ್ಷಿಣ ಹಾಗೂ ಪೂರ್ವ ಭಾಗಕ್ಕೆ 25,000 ಚದರ ಅಡಿಯ ಮೆಷ್‌ ಬಲೆ ನಿರ್ಮಿಸಲಾಗಿದೆ. ಪಶ್ಚಿಮ ಭಾಗದಲ್ಲಿ ಬಸವನಗರ ಪೊಲೀಸ್‌ ಠಾಣೆ ಇದೆ. ಜೈಲಿನ ಕಾಂಪೌಂಡ್‌ ಹಾಗೂ ಕಟ್ಟಡದ ನಡುವಿನ ಖಾಲಿ ಜಾಗಕ್ಕೆ ಈ ಮೆಷ್‌ ಬಲೆ ಹೆಣೆಯಲಾಗಿದೆ.

‘ಮೆಷ್‌ ಬಲೆ ನಿರ್ಮಿಸಿದ ಬಳಿಕವೂ ಹೊರಭಾಗದಿಂದ ಕೆಲ ವಸ್ತುಗಳು ತೂರಿ ಬಂದವು. ನೆಟ್‌ ಮೇಲೆ ನೇತಾಡುತ್ತಿದ್ದ ಈ ವಸ್ತುಗಳನ್ನು ಕಾರಾಗೃಹ ಸಿಬ್ಬಂದಿ ವಶಕ್ಕೆ ಪಡೆದರು. ಕೈದಿಗಳ ಕೈಗೆ ಇವು ಸಿಗುವುದಿಲ್ಲ ಎಂಬುದು ಖಚಿತವಾದ ಬಳಿಕ ಹೊರಭಾಗದಿಂದ ಜೈಲಿನೊಳಗೆ ವಸ್ತುಗಳನ್ನು ಎಸೆಯುವುದು ಕಡಿಮೆಯಾಗಿದೆ’ ಎಂದು ಆನಂದ ಭಜಂತ್ರಿ ವಿವರಿಸಿದರು.

ರಾಜ್ಯದ ಹಳೆಯ ಕಾರಾಗೃಹಗಳಲ್ಲಿ ದಾವಣಗೆರೆ ಜಿಲ್ಲಾ ಕಾರಾಗೃಹವೂ ಒಂದು. 170 ಕೈದಿಗಳಿಗೆ ಆಶ್ರಯ ಕಲ್ಪಿಸುವ ಸಾಮರ್ಥ್ಯ ಹೊಂದಿದ ಈ ಕಾರಾಗೃಹದಲ್ಲಿ 150 ಕೈದಿಗಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ 6 ಬಾರಿ, ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಸ್ಯಾಮ್‌ ವರ್ಗಿಸ್‌ ಹಾಗೂ ನಗರ ಡಿವೈಎಸ್‌ಪಿ ಶರಣ ಬಸವೇಶ್ವರ ತಲಾ 2 ಬಾರಿ ಹಾಗೂ ಗ್ರಾಮಾಂತರ ಡಿವೈಎಸ್‌ಪಿ ಬಸವರಾಜ್ ಒಮ್ಮೆ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದಾಳಿಯ ವೇಳೆ ಯಾವುದೇ ಮಾರಕಾಸ್ತ್ರ, ಮಾದಕವಸ್ತುಗಳು ಪತ್ತೆಯಾಗಿಲ್ಲ.

10 ಬ್ಯಾರಕ್‌ಗಳನ್ನು ಹೊಂದಿರುವ ಕಾರಾಗೃಹಕ್ಕೆ 16 ಸಿ.ಸಿ.ಟಿವಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆ ಇದೆ. ಜೈಲಿಗೆ ಕೊಂಡೊಯ್ಯುವ ಪ್ರತಿ ವಸ್ತುವಿನ ಪರಿಶೀಲನೆಗೆ ನಾಲ್ಕು ತಿಂಗಳ ಹಿಂದೆ ಸ್ಕ್ಯಾನರ್‌ ಯಂತ್ರ ಕೂಡ ಬಂದಿದೆ. ತರಕಾರಿ, ಹಣ್ಣು, ಔಷಧ, ಹಾಲು ಸೇರಿದಂತೆ ಪ್ರತಿಯೊಂದನ್ನು ಸ್ಕ್ಯಾನರ್‌ ಯಂತ್ರದಲ್ಲಿ ಪರಿಶೀಲಿಸಲಾಗುತ್ತಿದೆ.

ಆನಂದ ಭಜಂತ್ರಿ
ನಿಷೇಧಿತ ವಸ್ತುಗಳನ್ನು ಜೈಲಿನ ಹೊರಭಾಗದಿಂದ ತೂರುತ್ತಿದ್ದ ಆರೋಪಿಯೊಬ್ಬರನ್ನು ಬಂಧಿಸಲಾಗಿದೆ. ಮೆಷ್‌ ಬಲೆ ನಿರ್ಮಾಣ ರಾಜ್ಯದ ಇತರ ಕಾರಾಗೃಹಗಳಿಗೂ ವಿಸ್ತರಣೆಯಾಗುತ್ತಿದೆ
ಆನಂದ ಭಜಂತ್ರಿ ಅಧೀಕ್ಷಕ ಜಿಲ್ಲಾ ಕಾರಾಗೃಹ

ಕೈದಿಗಳಿಗೆ ನಿತ್ಯ ಯೋಗ

ಮನಪರಿವರ್ತನೆಯ ದೃಷ್ಟಿಯಿಂದ ಕೈದಿಗಳಿಗೆ ನಿತ್ಯ ಯೋಗ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ 1 ಗಂಟೆ ಯೋಗಾಭ್ಯಾಸವನ್ನು ಕಡ್ಡಾಯಗೊಳಿಸಲಾಗಿದೆ. ಅಷ್ಟಾಂಗ ವಿನ್ಯಾಸ ಯೋಗ ಅಕಾಡೆಮಿ ಜೊತೆಗೆ ಕಾರಾಗೃಹ ಇಲಾಖೆ ಇತ್ತೀಚೆಗೆ ಒಡಂಬಡಿಕೆ ಮಾಡಿಕೊಂಡಿದೆ. ‘ಜೈಲಿನಲ್ಲಿ ಯೋಗ ತರಬೇತಿ ಶಿಬಿರಗಳು ಆಗಾಗ ನಡೆಯುತ್ತಿದ್ದವು. 8 ದಿನಗಳಿಂದ 2 ತಿಂಗಳವರೆಗೆ ತರಬೇತಿ ನೀಡಲಾಗಿದೆ. ಕೈದಿಗಳಿಗೆ ಯೋಗವನ್ನು ಈಗ ಕಡ್ಡಾಯಗೊಳಿಸಲಾಗಿದೆ. ನಿತ್ಯ ಬೆಳಿಗ್ಗೆ 7ರಿಂದ 8 ಗಂಟೆಯವರೆಗೆ ಅಷ್ಟಾಂಗ ವಿನ್ಯಾಸ ಯೋಗ ಅಕಾಡೆಮಿ ಶಿಕ್ಷಕರು ಯೋಗ ತರಬೇತಿ ನೀಡುತ್ತಿದ್ದಾರೆ. ಕೈದಿಗಳ ಮಾನಸಿಕ ಸಮಸ್ಯೆಗಳಿಗೆ ಇದು ಪರಿಹಾರ ಒದಗಿಸಲಿದೆ’ ಎಂದು ಜೈಲು ಅಧೀಕ್ಷಕ ಆನಂದ ಭಜಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.