
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿಯಲ್ಲಿ ಬುಧವಾರ ಬಂಜಾರ ಸಮುದಾಯದವರು ಹೊಸ ಬಟ್ಟೆ ತೊಟ್ಟ ಸಾಂಪ್ರದಾಯಿಕ ನೃತ್ಯ ಮಾಡಿದರು (ಎಡಚಿತ್ರ). ಹೆಳವನಕಟ್ಟೆ ಲಕ್ಷ್ಮೀರಂಗನಾಥ ದೇವಾಲಯದಲ್ಲಿ ಬುಧವಾರ ಬಲಿಪಾಡ್ಯಮಿ ಅಂಗವಾಗಿ ಗೋಪೂಜೆ ಮಾಡಿದರು
ದಾವಣಗೆರೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬವನ್ನು ಜನರು ಸಡಗರದಿಂದ ಆಚರಿಸಿದರು.
ನಗರದ ವಿವಿಧ ಬಡಾವಣೆಗಳು, ಅಪಾರ್ಟ್‌ಮೆಂಟ್‌ಗಳ ಮುಂದೆ ಬುಧವಾರ ಸಂಜೆಯಿಂದ ಜಿದ್ದಿಗೆ ಬಿದ್ದವರಂತೆ ಪಟಾಕಿ, ಆಟಂ ಬಾಂಬ್, ಹೂಕುಡಿಕೆ, ಭೂಚಕ್ರ ಸಿಡಿಸಿ ಸಂಭ್ರಮಿಸಿದರು.
ಹೆಣ್ಣು–ಗಂಡು ಹಾಗೂ ವಯಸ್ಸಿನ ಭೇದವಿಲ್ಲದೆ ಮನೆಗಳ ಮುಂದೆ ದೊಡ್ಡ ದೊಡ್ಡ ಊದಿನಕಡ್ಡಿ, ಹೂಬಾಣ ಹಿಡಿದುಕೊಂಡು ಪಟಾಕಿ ಹಚ್ಚಿದರು.
ಸಂಜೆಯ ನಂತರ ಆರಂಭವಾದ ಪಟಾಕಿ ಸಪ್ಪಳದ ಅಬ್ಬರ ರಾತ್ರಿ ಹತ್ತು ಗಂಟೆಗೆ ಮಳೆ ಶುರುವಾದರೂ ನಿಲ್ಲಲಿಲ್. ಅದು ತಡರಾತ್ರಿಯವರೆಗೂ ಮುಂದುವರಿದಿತ್ತು.
ಬಲಿ ಪಾಡ್ಯಮಿದಿನ ದೇವಸ್ಥಾನಗಳ ಮುಂದೆ ಗೋಪೂಜೆಗಳು ನಡೆದವು. ಕೋಲೆ ಬಸವನನ್ನು ಹಿಡಿದುಕೊಂಡು ಅಲೆಮಾರಿಗಳು ಮನೆ ಮುಂದೆ ಬಂದಾಗ ಬಸವನಿಗೆ ಪೂಜೆ ಮಾಡಿ ತಿನ್ನಲು ಬಾಳೆಹಣ್ಣು, ಅಕ್ಕಿ ನೀಡಿದರು.
ಕೆಲ ಮನೆಗಳ ಮಾಲೀಕರು ತಮ್ಮ ಮನೆಯೊಳಗೆ ಬಸವನನ್ನು ಕರೆದೊಯ್ದು ಪೂಜೆ ಸಲ್ಲಿಸಿದರಲ್ಲದೆ, ಅವುಗಳ ಕಾಲಿನಡಿ ನುಗ್ಗಿ ಮುಂದೆ ಸಾಗಿದರು.
ಮನೆ, ಮನೆಯಲ್ಲೂ ಸಡಗರ
ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಬಲಿಪಾಡ್ಯಮಿಯನ್ನು ಜನ ಸಂಭ್ರಮದಿಂದ ಆಚರಿಸಿದರು.
ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀರಂಗನಾಥ ದೇವಾಲಯದಲ್ಲಿ ದೀಪಾವಳಿ ಬಲಿಪಾಡ್ಯಮಿ ಅಂಗವಾಗಿ ಗೋಪೂಜೆ ಮಾಡಿದರು. ಪೂಜಾವಿಧಿ, ಗೋಪೂಜೆ ಸಂಕಲ್ಪವನ್ನು ಅರ್ಚಕರಾದ ಗುರುರಾಜಾಚಾರ್, ಮಂಜುನಾಥಾಚಾರ್ ನೆರವೇರಿಸಿದರು.
ಹಸು–ಕರುವನ್ನು ಶೃಂಗರಿಸಿ ಪೂಜಿ ಸಲಾಯಿತು. ಧರ್ಮರಾಜ್ ದೇಶಪಾಂಡೆ, ಪಿಗ್ಮಿ ರಾಮಣ್ಣ, ಮಧುಸೂದನಾಚಾರ್, ಜಗದೀಶ್, ಮಾರುತಿ ಇದ್ದರು.
ದೀಪಾವಳಿ ಸಡಗರ: ಮನೆ ಅಂಗಳದಲ್ಲಿ ದೀಪಾವಳಿ ಶುಭ ಸಂದೇಶದ ರಂಗೋಲಿ, ಚೆಂಡು ಹೂವು, ಮಾವಿನ ತೋರಣ ಕಟ್ಟಲಾಗಿತ್ತು, ದೀಪಗಳು ಹಾಗೂ ಬಣ್ಣಬಣ್ಣದ ಆಕಾಶಬುಟ್ಟಿ ಕಂಡು ಬಂದವು.
ಸಮೀಪದ ಕೊಮಾರನಹಳ್ಳಿ ಲಂಬಾಣಿ ತಾಂಡಾದಲ್ಲಿ ಹೊಸ ಬಟ್ಟೆ ತೊಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಸಾಂಪ್ರದಾಯಿಕ ಬಂಜಾರ ಸಮುದಾಯದ ನೃತ್ಯ ಮಾಡಿ ಗುಡ್ಡದಿಂದ ಹೂವು ತಂದು ಸೇವಾಲಾಲ್ ಮರಿಯಮ್ಮ ದೇವಾಲಯದ ಮುಂದೆ ದೀಪ ಬೆಳಗಿಸಿದರು.
‘ಎಲ್ಲೆಡೆ ಜನ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ದುಡಿದು ತಿನ್ನುವ ಬಂಜಾರರು ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಿದ್ದಾರೆ’ ಎಂದು ತಾಂಡಾದ ಮುಖ್ಯಸ್ಥ ಜಗದೀಶ್ ನಾಯ್ಕ್ ಹೇಳಿದರು.
ಹಿರಿಯರ ಹಬ್ಬ– ಹಟ್ಟಿಲಕ್ಕಮ್ಮನ ಪೂಜೆ: ಕೆಲವೆಡೆ ಹಿರಿಯರ ಹಬ್ಬ, ಗೋಪೂಜೆ, ಸಗಣಿಯಿಂದ ಕುಂತಿ ಮಾಡಿ ಬಲೀಂದ್ರ ಪೂಜೆ ಮಾಡಿದರು. ಕೊಟ್ಟಿಗೆಗೆ ಹಟ್ಟಿ ಲಕ್ಕಮ್ಮನ್ನು ಪ್ರತಿಷ್ಠಾಪಿಸಿ ಕಾಚಿಕಡ್ಡಿ, ಚೆಂಡು ಹೂ, ಉತ್ತರಾಣಿ ಕಡ್ಡಿಗಳಿಂದ ಶೃಂಗರಿಸಿದ್ದರು.
ವಿಕ್ರಮ ಶಕೆ ಆರಂಭದ ದಿನ ವಣಿಕ ಸಮುದಾಯ ಹೊಸ ಲೆಕ್ಕದ ಪುಸ್ತಕ ಇಟ್ಟು ಮಹಾಲಕ್ಷ್ಮಿ ಪೂಜೆ ಮಾಡಿದರು.
‘ಆರ್ಥಿಕ ಸದೃಢತೆ ತರುವ ಗೋವು’ ಹೊನ್ನಾಳಿ: ಧಾರ್ಮಿಕ ದತ್ತಿ ಇಲಾಖೆಯ ಅಧೀನದ ವಿವಿಧ ದೇವಾಲಯಗಳಲ್ಲಿ ಬಲಿಪಾಡ್ಯಮಿಯಂದು ಗೋ ಪೂಜೆ ಸಲ್ಲಿಸಲಾಯಿತು. ಬುಧವಾರ ಪಟ್ಟಣದ ಕೋಟೆ ಶಂಕರಮಠದಲ್ಲಿ ತಾಲ್ಲೂಕು ಗೋರಕ್ಷಾ ಪರಿಷತ್ ಹಮ್ಮಿಕೊಂಡಿದ್ದ ಗೋವುಗಳ ಪೂಜಾ ಕಾರ್ಯದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಭಾಗವಹಿಸಿ ಗೋವುಗಳಿಗೆ ಅಕ್ಕಿ ಬೆಲ್ಲ ಹಣ್ಣುಗಳನ್ನು ನೀಡಿದರು. ‘ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಗೋವುಗಳ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ. ಗೋವು ನಮ್ಮ ಕುಟುಂಬದ ಸದಸ್ಯನಿದ್ದಂತೆ. ನಮ್ಮ ಮನೆಯ ಸದಸ್ಯ ಹೇಗೆ ದುಡಿದು ಕುಟುಂಬದ ನಿರ್ವಹಣೆ ಮಾಡುತ್ತಾರೋ ಅದಕ್ಕಿಂತಲೂ ಹೆಚ್ಚಾಗಿ ಗೋವುಗಳು ಕುಟುಂಬದ ನಿರ್ವಹಣೆಗೆ ಬೇಕಾದ ಆರ್ಥಿಕ ಸದೃಢತೆಯನ್ನು ತಂದು ಕೊಡುತ್ತವೆ‘ ಎಂದು ಶಾಂತನಗೌಡ ಹೇಳಿದರು. ‘ಗೋವುಗಳಿಗೆ ಜಾತಿ ಮತ ಪಂಥಗಳಿಲ್ಲ ಎಲ್ಲಾ ವರ್ಗಕ್ಕೂ ಬೇಕಾದ ಕಾಮಧೇನು ಗೋವುಗಳು ಕೊಡುವ ಹಾಲು ಮೊಸರು ಮಜ್ಜಿಗೆ ಮನುಷ್ಯನ ಆರೋಗ್ಯಕ್ಕೆ ಬೇಕು ಅಷ್ಟೇ ಅಲ್ಲ ಗೋವುಗಳ ಮೂತ್ರ ಸಗಣಿಯಿಂದ ಕೂಡಾ ಕೃಷಿಗೆ ಬೇಕಾದ ಗೊಬ್ಬರವನ್ನು ತಯಾರಿಸಬಹುದು. ಹೀಗಾಗಿ ಬಹು ಉಪಯೋಗಿಯಾದ ಗೋವುಗಳು ಮನುಷ್ಯನಿಗೆ ಉಪಕಾರ ಮಾಡುತ್ತಿವೆ. ಅವುಗಳ ಹತ್ಯೆಯನ್ನು ತಡೆಯಬೇಕಿದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ಗೋರಕ್ಷಾ ಪರಿಷತ್ತಿನ ಜಿಲ್ಲಾ ಘಟಕದ ಮುಖಂಡ ಉಮಾಕಾಂತ್ ಜೋಯ್ಸ್ ಮಾತನಾಡಿದರು. ಸುಮಾ ರೇಣುಕಾಚಾರ್ಯ ಆರ್‍ಎಸ್‍ಎಸ್ ಮುಖಂಡ ಎಚ್.ಎಂ.ಅರುಣ್‍ಕುಮಾರ್ ಎಸ್.ಎನ್.ಪ್ರಕಾಶ್ ಲಕ್ಷ್ಮಣ್ ಜೋಯ್ಸ್ ಮನೋಹರ್ ಜೋಯ್ಸ್ ಎಚ್.ಎ.ಉಮಾಪತಿ ಲಲಿತಾ ಎಸ್. ಭಾರ್ಗವ ಭಾಗವಹಿಸಿದ್ದರು.
ಶ್ರದ್ಧಾ-ಭಕ್ತಿಯ ಆಚರಣೆ ಸಂತೇಬೆನ್ನೂರು: ಲಕ್ಷ್ಮಿಪೂಜೆ ಹಿರಿಯರ ಪೂಜೆ ಹಟ್ಟಿ ಲಕ್ಕಮ್ಮ ಪ್ರತಿಷ್ಠಾಪನೆ ಅಂಗಳದಲ್ಲಿ ರಂಗೋಲಿಗಳ ಚಿತ್ತಾರ ದೀಪಗಳ ಸಾಲು ಆಕಾಶ ಬುಟ್ಟಿ ಸಿಂಗಾರಗಳೊಂದಿಗೆ ದೀಪಾವಳಿ ಹಬ್ಬ ಹೋಬಳಿಯಾದ್ಯಂತ ಸಂಭ್ರಮದಿಂದ ಜರುಗಿತು. ನರಕ ಚತುರ್ದಶಿಯಂದು ಅಂಗಡಿಗಳ ಮಾಲೀಕರು ಲಕ್ಷ್ಮಿ ಪೂಜೆ ನೆರವೇರಿಸಿ ಪ್ರಸಾದ ವಿನಿ ಯೋಗ ಮಾಡಿದರು. ಬುಧವಾರ ಬಲಿಪಾಡ್ಯಮಿಯಂದು ಹಿರಿಯರ ಪೂಜೆ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಮಕ್ಕಳು ಪಟಾಕಿ ಸುರ್ ಸುರ್ ಬತ್ತಿ ಭೂಚಕ್ರಗಳನ್ನು ಹಚ್ಚಿ ಕುಣಿದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.