ADVERTISEMENT

ದಾವಣಗೆರೆ | ಅರ್ಥಶಾಸ್ತ್ರ ಅರ್ಥೈಸಲು ‘ಆಕರ್ಷಕ’ ಮಾರ್ಗ: ಚಾರ್ಟ್‌ಗಳ ಲೋಕ ಅನಾವರಣ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:57 IST
Last Updated 19 ಸೆಪ್ಟೆಂಬರ್ 2025, 6:57 IST
ದಾವಣಗೆರೆಯ ರಾಜನಹಳ್ಳಿ ಸೀತಮ್ಮ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಚಾರ್ಟ್‌ಗಳನ್ನು ವೀಕ್ಷಿಸುತ್ತಿರುವ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು
ದಾವಣಗೆರೆಯ ರಾಜನಹಳ್ಳಿ ಸೀತಮ್ಮ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಚಾರ್ಟ್‌ಗಳನ್ನು ವೀಕ್ಷಿಸುತ್ತಿರುವ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು   

ದಾವಣಗೆರೆ: ಖಾಸಗಿ ಕಾಲೇಜುಗಳು ಹೊಂದಿರುವ ಆಧುನಿಕ ಸೌಲಭ್ಯಗಳು ಇಲ್ಲಿಲ್ಲ. ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುವಷ್ಟು  ಹಣಕಾಸಿನ ಲಭ್ಯತೆಯೂ ಇಲ್ಲ. ಆದರೆ ಇಲ್ಲಿನ ಉಪನ್ಯಾಸಕರೊಬ್ಬರ ಆಸಕ್ತಿಯ ಫಲವಾಗಿ, ಅರ್ಥಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಕಠಿಣ ಪರಿಕಲ್ಪನೆಗಳನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ಅರ್ಥೈಸುವ ಯತ್ನವೊಂದು ಸದ್ದಿಲ್ಲದೇ ನಡೆಯುತ್ತಿದೆ. 

ರಾಜನಹಳ್ಳಿ ಸೀತಮ್ಮ ಕಾಲೇಜು ಅರ್ಥಶಾಸ್ತ್ರ ವಿಭಾಗ

ನಗರದ ರಾಜನಹಳ್ಳಿ ಸೀತಮ್ಮ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪಠ್ಯಕ್ರಮಕ್ಕೆ ಸಂಬಂಧಿಸಿದ ನೂರಾರು ಚಾರ್ಟ್‌ಗಳನ್ನು ತಯಾರಿಸಿ, ಪ್ರದರ್ಶನಕ್ಕೆ ಇಡಲಾಗಿದೆ. ಕೊಠಡಿಯ ಒಳಹೊಕ್ಕರೆ ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಬೃಹತ್ ಲೋಕವೊಂದು ಚಿತ್ರದ ರೂಪದಲ್ಲಿ ತೆರೆದುಕೊಳ್ಳುತ್ತದೆ. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳೇ ಬಹುತೇಕ ಚಾರ್ಟ್‌ಗಳನ್ನು ರಚಿಸಿರುವುದು ವಿಶೇಷ. ಇದರ ರೂವಾರಿ, ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಷಂಸುದ್ದೀನ್ ಖಾನ್.

ಗಣಿತದಷ್ಟೇ ಕಠಿಣ ಎಂದು ಪರಿಗಣಿಸಲಾಗಿರುವ ಕ್ಲಿಷ್ಟ ಪರಿಕಲ್ಪನೆಗಳು ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೂ ಎದುರಾಗುತ್ತವೆ. ಬಜೆಟ್‌ರೇಖೆಯ ಇಳಿಜಾರು, ಬೇಡಿಕೆ ರೇಖೆಯ ಚಲನೆಗಳು, ಬೇಡಿಕೆಯ ಪಲ್ಲಟ, ಸರಕುಗಳ ದರದಲ್ಲಿ ವ್ಯತ್ಯಾಸ.. ಹೀಗೆ ಹಲವು ವಿಚಾರಗಳನ್ನು ಪಠ್ಯದ ರೂಪದಲ್ಲಿ ಬೋಧಿಸಿದಾಗ ವಿದ್ಯಾರ್ಥಿಗಳ ಮನಸ್ಸಿನ ಆಳಕ್ಕೆ ಇಳಿಯುವುದು ಕಷ್ಟ. ವಿಜ್ಞಾನ ವಿಭಾಗದಲ್ಲಿ ನಡೆಸುವ ಪ್ರಯೋಗಗಳು, ವಿವಿಧ ಚಾರ್ಟ್‌ ಹಾಗೂ ಮಾದರಿಗಳನ್ನು ಬಳಸಿ ಬೋಧನೆ ಮಾಡುವ ವಿಧಾನವನ್ನೇ ಇಲ್ಲೂ ಅಳವಡಿಸಿಕೊಂಡಿರುವುದು ವಿಶೇಷ.  

ADVERTISEMENT

ಬಾರ್ ಚಾರ್ಟ್, ಕಾಲಂ ಚಾರ್ಟ್, ಲೈನ್‌ ಚಾರ್ಟ್, ಏರಿಯಾ ಚಾರ್ಟ್, ಪೈ ಗ್ರಾಫ್‌ಗಳ ಮೂಲಕ ಪಠ್ಯಕ್ಕೆ ದ್ಯಶ್ಯರೂಪ ನೀಡಲಾಗಿದೆ. ಉತ್ಪನ್ನವೊಂದರ ಪೂರೈಕೆ ಹಾಗೂ ಬೇಡಿಕೆಯನ್ನು ಬಾರ್ ಚಾರ್ಟ್ ಮೂಲಕ ಪ್ರಸ್ತುತಪಡಿಸಲಾಗಿದೆ. ಜನಸಂಖ್ಯಾ ವಯೋಮಿತಿಯ ಹಂಚಿಕೆಯನ್ನು ಪೈ ಚಾರ್ಟ್ ಮೂಲಕ ಸುಲಭವಾಗಿ ಅರ್ಥೈಸಲಾಗಿದೆ. ಇಂತಹ ನೂರಾರು ಚಿತ್ರಪಟಗಳನ್ನು ಇಡೀ ಕೊಠಡಿಯಲ್ಲಿ ಒಪ್ಪವಾಗಿ ಜೋಡಿಸಿದ್ದು, ವಿದ್ಯಾರ್ಥಿಗಳಿಗೆ ಸುಲಭವಾಗಿ ತಿಳಿಸುವ ಯತ್ನ ಮಾಡಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಮಾಡೆಲ್‌ ರೂಪದಲ್ಲಿ, ಕಳೆದ ವರ್ಷ ರಂಗೋಲಿಯ ಮೂಲಕ ‍ಪ್ರಸ್ತುತಪಡಿಸಲಾಗಿತ್ತು. ಇಂತಹ ಯತ್ನ ಸರ್ಕಾರಿ ಕಾಲೇಜುಗಳಲ್ಲಿ ಇದೇ ಮೊದಲು ಎನ್ನುತ್ತಾರೆ ಉಪನ್ಯಾಸಕ ಷಂಸುದ್ದೀನ್. 

ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಚಾರ್ಟ್‌ ಬಗ್ಗೆ ವಿವರಣೆ ನೀಡುತ್ತಿರುವ ವಿದ್ಯಾರ್ಥಿನಿ
ಷಂಸುದ್ದೀನ್ ಖಾನ್ 
ಅರ್ಥಶಾಸ್ತ್ರವನ್ನೂ ವೈಜ್ಞಾನಿಕ ಮಾದರಿಗಳ ರೀತಿಯಲ್ಲಿ ಬೋಧಿಸಲು ಸಾಧ್ಯ ಎಂಬುದಕ್ಕೆ ಈ ಪ್ರದರ್ಶನ ಸಾಕ್ಷಿಯಾಗಿದೆ. ನಾವೂ ಇದನ್ನು ಅಳವಡಿಸಿಕೊಳ್ಳಲು ಪ್ರೇರಣೆ ಸಿಕ್ಕಿದೆ
ಪ್ರಿಯಾಂಕಾ ಉಪನ್ಯಾಸಕಿ ಎಜಿಬಿ ಕಾಲೇಜು
ಬೋಧನೆಯ ಜೊತೆಗೆ ದೃಶ್ಯ ರೂಪದಲ್ಲಿ ಅರ್ಥಶಾಸ್ತ್ರವನ್ನು ಕಲಿಯುವುದು ಹೊಸತು ಎನಿಸುತ್ತಿದೆ. ಪ್ರತಿ ಚಾರ್ಟ್‌ಗಳ ಜೊತೆಗೆ ಅದಕ್ಕೆ ಸಂಬಂಧಿಸಿದ ವಿಸ್ತೃತ ವಿವರಣೆ ಇದ್ದರೆ ಇನ್ನಷ್ಟು ಸೂಕ್ತವಾಗಿರುತ್ತಿತ್ತು
ಪವನ್ ವಿದ್ಯಾರ್ಥಿ ಸರ್‌ಎಂವಿ ಕಾಲೇಜು
ಚಾರ್ಟ್‌ಗಳಿಗೆ ಆಕರ್ಷಕ ರೂಪ
ಪೇಪರ್ ಶೀಟ್‌ ಮೇಲೆ ಗೆರೆಗಳನ್ನು ಎಳೆದು ಕೋಷ್ಟಕವನ್ನು ರಚಿಸುವುದು ಸಾಮಾನ್ಯ. ನೀರಸವಾಗಿ ಚಿತ್ರಿಸುವುದಕ್ಕಿಂತ ಅದಕ್ಕೊಂದು ಹೊಸತನ ನೀಡಲಾಗಿದೆ. ಚೆಂದದ ಅಲಂಕಾರ ಮಾಡಿ ಇನ್ನಷ್ಟು ಆಕರ್ಷಣೀಯ ಮಾಡಿರುವುದು ವಿಶೇಷ.  ಚಾರ್ಟ್ ತಯಾರಿಸಲು ಬೇಕಾಗುವ ಪ್ಲೈವುಡ್‌ ಅಂದಾಜು ₹ 100ಕ್ಕೆ ಅಂಗಡಿಯಲ್ಲಿ ಸಿಗುತ್ತದೆ. ಇನ್ನುಳಿದಂತೆ ಮನೆಯಲ್ಲೇ ಸಿಗುವ ನಿರುಪಯುಕ್ತ ವೈರ್‌ಗಳು ಪ್ಲಾಸ್ಟಿಕ್‌ ಹೂ ಟೇಪ್‌ ದಾರ ಬಣ್ಣದ ಪೆನ್ಸಿಲ್ ಮೊದಲಾದ ವಸ್ತುಗಳನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿ ಕೋಷ್ಟಕಗಳನ್ನು ಗಮನ ಸೆಳೆಯುವಂತೆ ರೂಪಿಸಿದ್ದಾರೆ.
ಖಾಸಗಿ ಕಾಲೇಜು ವಿದ್ಯಾರ್ಥಿಗಳ ಭೇಟಿ
ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವೇ ಈ ಪ್ರದರ್ಶನ ಸೀಮಿತವಾಗಿಲ್ಲ. ನಗರದ ವಿವಿಧ ಖಾಸಗಿ ಕಾಲೇಜುಗಳ ಅರ್ಥಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರ ಜೊತೆ ಬಂದು ಚಾರ್ಟ್‌ಗಳನ್ನು ಅರ್ಥೈಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಚಾರ್ಟ್ ಸಿದ್ಧಪಡಿಸಿದ ವಿದ್ಯಾರ್ಥಿಗಳು ಅವುಗಳ ಮುಂದೆ ನಿಂತು ವಿವರಣೆಯನ್ನೂ ನೀಡುತ್ತಾರೆ.  ಖಾಸಗಿ ಕಾಲೇಜುಗಳಿಗೆ ದಾಖಲಾಗಿ ಸಾವಿರಾರು ರೂಪಾಯಿ ಶುಲ್ಕ ಭರಿಸುವಷ್ಟು ಶಕ್ತಿ ಇಲ್ಲದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಬಹುತೇಕ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಓದುತ್ತಿದ್ದಾರೆ. ಅವರಿಗೂ ಸಮರ್ಪಕವಾಗಿ ಪಠ್ಯಕ್ರಮವನ್ನು ಬೋಧಿಸುವ ಉದ್ದೇಶದಿಂದ ಕಂಡುಕೊಂಡ ಈ ಯತ್ನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಇಲಾಖೆಯ ಉಪನಿರ್ದೇಶಕರು ಭೇಟಿ ನೀಡಿ ಬೆನ್ನು ತಟ್ಟಿದ್ದು ಈ ವಿಧಾನವನ್ನು ರಾಜ್ಯದ ಇತರ ಕಾಲೇಜುಗಳಲ್ಲಿ ಅಳವಡಿಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಉಪನ್ಯಾಸಕ ಷಂಸುದ್ದೀನ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.