ADVERTISEMENT

ದಾವಣಗೆರೆ ಮಹಾನಗರ ಪಾಲಿಕೆ ತಂತ್ರಾಂಶ ಹ್ಯಾಕ್:ಹಲವು ಸ್ವತ್ತುಗಳಿಗೆ ಅಕ್ರಮ ಇ–ಆಸ್ತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:02 IST
Last Updated 9 ಜನವರಿ 2026, 3:02 IST
   

ದಾವಣಗೆರೆ: ಮಹಾನಗರ ಪಾಲಿಕೆಯ ‘ಇ–ಆಸ್ತಿ’ ತಂತ್ರಾಂಶವನ್ನು ಹ್ಯಾಕ್‌ ಮಾಡಲಾಗಿದ್ದು, ಐದು ಸ್ವತ್ತುಗಳಿಗೆ ಅಕ್ರಮವಾಗಿ ‘ಇ–ಆಸ್ತಿ’ ಅನುಮೋದನೆ ಸಿಕ್ಕಿದೆ. ಅಧಿಕಾರಿಗಳ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ ಬಳಸಿ ಈ ಕೃತ್ಯ ಎಸಗಿದ್ದು 6 ತಿಂಗಳ ಬಳಿಕ ಗೊತ್ತಾಗಿದೆ.

ಮಹಾನಗರ ಪಾಲಿಕೆಯ ‘ಇ–ಸ್ವತ್ತು’ ತಂತ್ರಾಂಶದಲ್ಲಿ ಅಧಿಕಾರಿಗಳ ಗಮನಕ್ಕೆ ಬಾರದೇ ‘ಇ–ಸ್ವತ್ತು’ ಅನುಮೋದನೆ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ಹ್ಯಾಕ್ ಆಗಿರುವುದು ಖಚಿತವಾಗಿದೆ. ಈ ಸಂಬಂಧ ಸಿಇಎನ್‌ ಠಾಣೆಗೆ ಮಹಾನಗರ ಪಾಲಿಕೆಯ ವಲಯ ಕಚೇರಿ 1ರ ಆಯುಕ್ತ ಕೆ. ನಾಗರಾಜ್ ದೂರು ನೀಡಿದ್ದಾರೆ.

‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್‌ಗಳಿವೆ. ಮೂರು ವಲಯ ಕಚೇರಿಗಳಲ್ಲಿ ‘ಇ-ಆಸ್ತಿ ನಿರ್ವಹಣೆ ಮಾಡಲಾಗುತ್ತಿದೆ. ಆಸ್ತಿಗಳ ಹೊಸ ಖಾತೆ, ವರ್ಗಾವಣೆಯಂತ ಪ್ರಕ್ರಿಯೆಗಳು ವಲಯ ಆಯುಕ್ತರ ಲಾಗಿನ್ ಮೂಲಕ ಅನುಮೋದನೆ ಪಡೆಯುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಅರಿತವರು ಅಧಿಕಾರಿಗಳ ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಗಿದ್ದಾರೆ’ ಎಂದು ದೂರಿನಲ್ಲಿದೆ.

ADVERTISEMENT

‘ನಿಟುವಳ್ಳಿ, ಶಿವಕುಮಾರಸ್ವಾಮಿ ಬಡಾವಣೆ ಹಾಗೂ ದೊಡ್ಡಬೂದಿಹಾಳ್‌ ವ್ಯಾಪ್ತಿಯ 5 ಆಸ್ತಿಗಳನ್ನು ಬೇರೆ ಬೇರೆ ವಲಯ ಕಚೇರಿಗಳಲ್ಲಿ ಅನುಮೋದನೆ ಮಾಡಿಕೊಳ್ಳಲಾಗಿದೆ. 2025ರ ಜೂನ್ 12ರಿಂದ ನವೆಂಬರ್ 27ರ ಅವಧಿಯಲ್ಲಿ ಈ ಕೃತ್ಯ ಎಸಗಲಾಗಿದೆ’ ಎಂದು ವಲಯ ಆಯುಕ್ತರು ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.